ವರ್ಮಾ ಮಾಡಿದ ತಪ್ಪಿಗೆ ನಾಗಾರ್ಜುನಗೆ ಶಿಕ್ಷೆ.!
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಯಾವುದಾದರೂ ಒಂದು ವಿಷ್ಯದ ಬಗ್ಗೆ ಸುಮ್ ಸುಮ್ಮನೆ ಕಾಮೆಂಟ್ ಮಾಡಿ, ಕಾಲೆಳೆದು, ಕಾಟ್ರುವರ್ಸಿ ಹುಟ್ಟಿಹಾಕಿ ಆಟ ನೋಡುವ ಅಪರೂಪದ ಮನುಷ್ಯ.
ಅದರಲ್ಲೂ, ಪವನ್ ಕಲ್ಯಾಣ್ ಅಂದ್ರೆ ವರ್ಮಾ ಅದೇನ್ ಒಂಥರ ಲವ್. ದೇಶದಲ್ಲಿ ಏನೇ ಬೆಳವಣಿಗೆ ಆದ್ರು, ಪವನ್ ಕಲ್ಯಾಣ್ ಕಾರಣ ಅನ್ನೋತರ ಆರ್.ಜಿ.ವಿ ಮಾತನಾಡ್ತಾರೆ.
ಬಹುಶಃ ಇದೆಲ್ಲ ವರ್ಮಾ ಅವರ ಮಾಸ್ಟರ್ ಪ್ಲ್ಯಾನ್ ಇದ್ದರೂ ಇರಬಹುದು. ಯಾಕಂದ್ರೆ, ಆರ್.ಜಿ.ವಿ ಪ್ರಚಾರಕ್ಕಾಗಿ ಅಥವಾ ಸದಾ ಸುದ್ದಿಯಲ್ಲಿರುವ ಸಲುವಾಗಿ ವಿವಾದಾತ್ಮಕ ಹೇಳಿಕೆಗಳನ್ನ ಉದ್ದೇಶಪೂರ್ವಕವಾಗಿ ಮಾಡ್ತಾರೆ ಎಂಬ ಆರೋಪವೂ ಇದೆ. ಇದೆಲ್ಲ ಹೋಗ್ಲಿ, ಈಗ ರಾಮ್ ಗೋಪಾಲ್ ವರ್ಮಾ ಮಾಡಿರುವ ಎಡವಟ್ಟಿಗೆ ನಾಗಾರ್ಜುನ ಶಿಕ್ಷೆ ಅನುಭವಿಸುವಂತಾಗಿದೆ. ಏನದು.? ಮುಂದೆ ಓದಿ....

ನಾಗಾರ್ಜುನ ಚಿತ್ರಕ್ಕೆ ವಿತರಕರಿಲ್ಲ.!
ನಾಗಾರ್ಜುನ ಅಭಿನಯದಲ್ಲಿ ತಯಾರಾಗಿರುವ 'ಆಫೀಸರ್' ಸಿನಿಮಾ ಜೂನ್ 1 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಬಿಡುಗಡೆ ಮಾಡಲು ವಿತರಕರು ಮುಂದೆ ಬರುತ್ತಿಲ್ಲ ಎಂಬುದು ಈಗ ಬೇಸರದ ಸಂಗತಿ. ನಾಗಾರ್ಜುನ ಚಿತ್ರಕ್ಕೆ ವಿತರಕರಿಲ್ಲ ಎಂಬುದು ಇದಕ್ಕೆ ಕಾರಣವಲ್ಲ, ಇದು ರಾಮ್ ಗೋಪಾಲ್ ವರ್ಮಾ ಸಿನಿಮಾ ಎನ್ನುವುದೇ ಅಸಲಿ ಕಾರಣ.

ವರ್ಮಾ ವಿವಾದಕ್ಕೆ ಬೇಸತ್ತ ಡಿಸ್ಟ್ರಿಬ್ಯೂಟರ್
ರಾಮ್ ಗೋಪಾಲ್ ವರ್ಮಾ ಮಾಡಿಕೊಂಡಿರುವ ವಿವಾದಗಳಿಂದ ಸಿನಿಮಾದ ಮೇಲೆ ಪ್ರಭಾವ ಬೀರುತ್ತೆ, ಸುಮ್ಮನೇ ಗೊತ್ತಿದ್ದು ಯಾಕೆ ವಿತರಣೆ ಮಾಡಿ ಕೈ ಸುಟ್ಟಿಕೊಳ್ಳಬೇಕು ಎಂದು ವಿತರಕರು ಯೋಚನೆ ಮಾಡಿದಂತಿದೆ. ಪ್ರೇಕ್ಷಕರೇ ಸಿನಿಮಾ ನೋಡಲು ಬಂದಿಲ್ಲವಂದ್ರೆ ಲಾಭ ಎಲ್ಲಿಂದ ಎಂಬ ಪ್ರಶ್ನೆ ಕಾಡುತ್ತಿದೆ.

ಪವನ್ ಕಲ್ಯಾಣ್ ಅಭಿಮಾನಿಗಳು ಗರಂ
ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪವನ್ ಕಲ್ಯಾಣ್ ಮತ್ತು ಮೆಗಾ ಫ್ಯಾಮಿಲಿ ವಿರುದ್ಧ ಹೇಳಿಕೆಗಳನ್ನ ನೀಡಿದ್ದರು. ಅಷ್ಟೇ ಅಲ್ಲದೇ ನಟಿ ಶ್ರೀರೆಡ್ಡಿ ಪವನ್ ಕಲ್ಯಾಣ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಲು ಸ್ವತಃ ಆರ್.ಜಿ.ವಿ ಕಾರಣವಾಗಿದ್ದರು. ಇಷ್ಟೆಲ್ಲ ಆದ್ಮೇಲೆ ಪವನ್ ಅಭಿಮಾನಿಗಳು, ವರ್ಮಾ ಅವರನ್ನ ಇಂಡಸ್ಟ್ರಿಯಿಂದ ನಿಷೇಧ ಮಾಡಿದ ಎಂದು ಆಗ್ರಹಿಸಿದ್ದರು. ತೆಲುಗು ಇಂಡಸ್ಟ್ರಿಯಲ್ಲಿ ಬಹುತೇಕರು ಮೆಗಾ ಅಭಿಮಾನಿಗಳೇ ಇದ್ದಾರೆ. ಅವರನ್ನ ನಿಂದಿಸಿರುವ ಕಾರಣ ಸಿನಿಮಾ ನೋಡಲು ಆ ಫ್ಯಾನ್ಸ್ ಬರಲ್ಲ ಎನ್ನುವುದು ಭಯ.

ನಾಗಾರ್ಜುನ ಸ್ನೇಹಿತರು ಮುಂದಾಗಿದ್ದಾರೆ
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ನಾಗಾರ್ಜುನ ಅವರಿಗೆ ಬೇಕಾದವರು ಮತ್ತು ಸ್ನೇಹಿತರು ಡಾ ಶಿವಪ್ರಸಾದ್ ರೆಡ್ಡಿ, ಎನ್.ವಿ ಪ್ರಸಾದ್ ಮತ್ತು ಸುಬ್ರಮಣ್ಯಸ್ವಾಮಿ ಸೇರಿದಂತೆ ಇನ್ನು ಕೆಲವರು ಪ್ರಾಂತ್ಯವಾರು ವಿತರಣೆ ಮಾಡಲು ಮುಂದಾಗಿದ್ದಾರೆ. ಆರ್.ಜಿ.ವಿ ಸಿನಿಮಾ ಮೇಲೆ ಹೆಚ್ಚಿನ ಭರವಸೆ ಇರುತ್ತೆ. ಆದ್ರೆ, ವರ್ಮಾ ಮಾಡುವ ಕೆಲವು ಹೇಳಿಕೆಗಳು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತೆ. ಈಗಲೂ ಅಷ್ಟೇ ಆರ್.ಜಿ.ವಿ ಸಿನಿಮಾ ಎನ್ನುವುದಕ್ಕಿಂತ ನಾಗಾರ್ಜುನ ಸಿನಿಮಾ ಎಂದೇ ಅಭಿಮಾನಿಗಳು ನೋಡಬೇಕಿದೆ.


Click it and Unblock the Notifications











