"ದರ್ಶನ್ ಕಷ್ಟಬಿದ್ದು ಇವತ್ತು ಟಾಪ್ ಹೀರೊ ಆಗಿದ್ದಾರೆ.. ಅವರೊಟ್ಟಿಗೆ ಭಿನ್ನಾಭಿಪ್ರಾಯ ಯಾಕೆ?": ಶಿವಣ್ಣ ಮುಕ್ತಮಾತು
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿತ್ತು. ಕರ್ನಾಟಕ ಬಂದ್‌ಗೂ ಸಾತ್ ನೀಡಿತ್ತು. ಫಿಲ್ಮ್ ಚೇಂಬರ್ ಕಚೇರಿ ಬಳಿ ನಡೆದ ಧರಣಿಯಲ್ಲಿ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಸಾಕಷ್ಟು ನಟ-ನಟಿಯರು ಭಾಗಿ ಆಗಿದ್ದರು. ಕೊಂಚ ತಡವಾಗಿ ಬಂದ ದರ್ಶನ್ ವೇದಿಕೆ ಏರುತ್ತಿದ್ದಂತೆ ಶಿವಣ್ಣನ ಕಾಲಿಗೆ ಎರಗಿದರು.
ನಟ ದರ್ಶನ್ ಹೀಗೆ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿತ್ತು. ಸಿನಿರಸಿಕರು ಇದೇ ರೀತಿ ಕನ್ನಡ ಚಿತ್ರರಂಗದ ಕಲಾವಿದರೆಲ್ಲಾ ಒಗ್ಗಟ್ಟಾಗಿ ಇರಬೇಕು. ಒಂದಾಗಿ ಎಲ್ಲವನ್ನು ಎದುರಿಸಬೇಕು ಎಂದು ಮಾತನಾಡಿಕೊಂಡಿದ್ದರು. ಆ ರೀತಿ ದರ್ಶನ್ ಬಂದು ತಮ್ಮ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಚಾರದ ಬಗ್ಗೆ ನಟ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.

ಫಸ್ಟ್ ಡೇ ಫಸ್ಟ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟ ಶಿವಣ್ಣ, ದರ್ಶನ್ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಮನುಷ್ಯ ಅಂದ್ಮೇಲೆ ಫ್ಯಾಮಿಲಿ ಅಂದ್ಮೇಲೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು ಇರ್ತಾವೆ. ಅದನ್ನು ದೊಡ್ಡದು ಮಾಡೋಕೆ ಹೋಗಬಾರದು. ಯಾವಾಗಲೂ ಒಂದು ಸಮಸ್ಯೆ ಇರುತ್ತದೆ. ಆ ಬಿರುಕನ್ನು ದೊಡ್ಡದು ಮಾಡೋಕೆ ಹೋಗಬಾರದು"
"ಯಾವಾಗಲೂ ಶಾಂತವಾಗಿ ಇರಬೇಕು. ನಾನು ಅಭಿಮಾನಿಗಳನ್ನು ಕೇಳಿಕೊಳ್ಳುವುದು ಅಷ್ಟೇ. ಬಾಯಿ ಅನ್ನೋದು ಯಾವಾಗಲೂ ಕೆಡಿಸುತ್ತದೆ. ಮನುಷ್ಯನ ಜೀವನವನ್ನು ಕೆಡಿಸುತ್ತದೆ. ಬಾಯಿ ಕೊಟ್ಟು ಯಾವಾಗಲೂ ಸಿಕ್ಕಿ ಹಾಕಿಕೊಳ್ತೀವಿ. ಆ ರೀತಿ ಬಾಯಿ ಕೊಟ್ಟು ಸಿಕ್ಕಾಕಿಕೊಂಡಾಗ ಅದು ಮುಂದುವರೆಯುತ್ತದೆ. ಅದು ಜೀವನಕ್ಕೂ ಎಫೆಕ್ಟ್ ಆಗುತ್ತೆ. ಫ್ರೆಂಡ್‌ಶಿಪ್‌ಗೆ ಎಫೆಕ್ಟ್ ಆಗುತ್ತೆ. ನಮ್ಮ ಇಂಡಸ್ಟ್ರಿಗೆ ಎಫೆಕ್ಟ್ ಆಗುತ್ತೆ."
"ಏನೋ ಭಿನ್ನಾಭಿಪ್ರಾಯಗಳು ಮೂಡಿಬಿಟ್ಟರೆ ಅದೇ ವೈರತ್ವನಾ? ಅದು ಬರೀ ಮಿಸ್ ಕಮ್ಯೂನಿಕೇಷನ್ ಅಷ್ಟೆ. ಆ ಮಿಸ್ ಅಂಡರ್‌ಸ್ಯಾಂಡಿಂಗ್ ಅಂದುಕೊಂಡರೆ ಹೆಂಗೆ? ಮಿಸ್ ಅಂಡರ್‌ಸ್ಯಾಂಡಿಂಗ್ ಅನ್ನೇ ವೈರತ್ವ ಎಂದುಕೊಳ್ಳಬಾರದು. ಹಾಗಿನ ಪರಿಸ್ಥಿತಿಯಲ್ಲಿ ಅಷ್ಟಾಯಿತು. ದರ್ಶನ್ ಅವರದ್ದು ಇನ್ನು ಚಿಕ್ಕ ವಯಸ್ಸು. ಅದು ದೊಡ್ಡ ವಿಚಾರವೇ ಅಲ್ಲ. ಅವರು ಮನುಷ್ಯನೇ ತಾನೇ? ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಇವತ್ತು ಟಾಪ್ ಹೀರೊ ಆಗಿದ್ದಾರೆ"
"ದೇವರ ಅನುಗ್ರಹ ಇದ್ದರೆ ಅದೆಲ್ಲವೂ ಸಾಧ್ಯ. ಇವತ್ತಿಗೂ ನಮ್ಮ ಫ್ಯಾಮಿಲಿ ಬಗ್ಗೆ ಗೌರವವಾಗಿ ಮಾತನಾಡುತ್ತಾರೆ. ಅದನ್ನು ಉಳಿಸಿಕೊಳ್ಳಬೇಕು. ನಾನು ಯಾವಾಗ ಭೇಟಿ ಮಾಡಿದರೂ ಅದೇ ಪ್ರೀತಿ ಇರುತ್ತದೆ. ಯಾಕಂದರೆ ನಾನು ದರ್ಶನ್ ಅವರನ್ನು ಚಿಕ್ಕಂದಿನಿಂದ ನೋಡಿದ್ದೀನಿ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಚೆನ್ನಾಗಿರಬೇಕು ಎಲ್ಲರೂ ಚೆನ್ನಾಗಿರಬೇಕು. ಅದೇ ನಮ್ಮ ಆಸೆ" ಎಂದು ನಟ ಶಿವರಾಜ್‌ಕುಮಾರ್ ಮುಕ್ತವಾಗಿ ಮಾತನಾಡಿದ್ದಾರೆ.
ದಶಕಗಳಿಂದ ಡಾ. ರಾಜ್‌ಕುಮಾರ್ ಹಾಗೂ ತೂಗುದೀಪ ಕುಟುಂಬಗಳ ನಡುವೆ ಉತ್ತಮ ಒಡನಾಟವಿದೆ. 'ಜನುಮದ ಜೋಡಿ' ಚಿತ್ರಕ್ಕೆ ಲೈಟ್‌ಬಾಯ್ ಆಗಿ ಪೂರ್ಣಿಮಾ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದಾಗಿ ದರ್ಶನ್ ಕೂಡ ಹೇಳಿಕೊಂಡಿದ್ದಾರೆ. ಇನ್ನು ಶಿವಣ್ಣನ ಎದುರು ವಿಲನ್ ಆಗಿ 'ದೇವರ ಮಗ' ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಇನ್ನು ಸಾಕಷ್ಟು ಕಾರ್ಯಕ್ರಮಗಳಲ್ಲಿ ಶಿವಣ್ಣ- ದರ್ಶನ್ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶಿವಣ್ಣನನ್ನು ಸೆಂಚುರಿ ಸ್ಟಾರ್ ಎಂದು ಮೊದಲು ಕರೆದವರು ದರ್ಶನ್.
ಲೈಟ್‌ಬಾಯ್ ಆಗಿ ಚಿತ್ರರಂಗದ ವೃತ್ತಿ ಜೀವನ ಆರಂಭಿಸಿದ ದರ್ಶನ್ ಬಳಿಕ ಹೀರೊ ಆದರು. ಇದೀಗ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಅಕ್ಟೋಬರ್ 19ಕ್ಕೆ ರಿಲೀಸ್ ಆಗುತ್ತಿದೆ.


Click it and Unblock the Notifications











