'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ?
ನಟ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾಗೆ ಇಡೀ ಕರ್ನಾಟಕದಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿದೆ. ಕನ್ನಡ ಪರ ಸಂಘಟನೆಗಳು ನಿನ್ನೆ ರಾತ್ರಿಯಿಂದಲೇ ಚಿತ್ರಮಂದಿರಗಳ ಮುಂದೆ ಟಿಕೆಟ್ ಮಾರಾಟ ಮಾಡದಂತೆ ಪ್ರತಿಭಟನೆ ಶುರು ಮಾಡಿದ್ದರು. ಇನ್ನು ಇಂದು ಕೂಡ ಪ್ರತಿಭಟನೆ ಮುಂದುವರೆದಿದೆ.
'ಕಾಲಾ' ಕರ್ನಾಟಕದಲ್ಲಿ ನೂರಕ್ಕು ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಇದುವರೆಗೆ ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ 'ಕಾಲಾ' ರಿಲೀಸ್ ಆಗಿಲ್ಲ. ಜೊತೆಗೆ ಶಿವಮೊಗ್ಗ, ಹಾಸನ, ಮಂಡ್ಯ, ಚಿತ್ರದುರ್ಗ, ಬೆಳಗಾವಿ, ಆನೇಕಲ್, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಪ್ರತಿಭಟನೆ ನಡುವೆಯೂ ಬಳ್ಳಾರಿಯಲ್ಲಿ ತಡವಾಗಿ ಶೋ ಶುರು ಆಗಿದೆ.
ಅಂದಹಾಗೆ, ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ 'ಕಾಲಾ' ಬಿಡುಗಡೆಯಾಗಿದೆ ಹಾಗೂ ಎಲ್ಲೆಲ್ಲಿ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ ಎಂಬ ಸಂಪೂರ್ಣ ವಿವರ ಮುಂದಿದೆ ಓದಿ.

ಶಿವಮೊಗ್ಗ ಕೋಟೆಗೆ 'ಕಾಲಾ'ನಿಗಿಲ್ಲ ಪ್ರವೇಶ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ 'ಕಾಲಾ' ಸಿನಿಮಾ ಪ್ರದರ್ಶನ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ನಗರದ ಶಿವಪ್ಪ ನಾಯಕ ವೃತ್ತದ ಬಳಿ ಕನ್ನಡ ಪರ ಸಂಘಟನೆಗಳು ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರಮಂದಿರದ ಮಾಲೀಕರು ಸಹ ಪ್ರದರ್ಶನ ಮಾಡದಿರುವ ನಿರ್ಧಾರಕ್ಕೆ ಬಂದಿದ್ದು, ಶಿವಮೊಗ್ಗದ ಯಾವುದೇ ಥಿಯೇಟರ್ ನಲ್ಲಿ ಚಿತ್ರದ ಶೋ ಇಲ್ಲ.

ರಾಯಚೂರಿನಲ್ಲಿ ಪ್ರದರ್ಶನ ರದ್ದು
ರಾಯಚೂರಿನಲ್ಲಿ 'ಕಾಲಾ' ಚಿತ್ರದ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ರಾಯಚೂರಿನ ಪದ್ಮನಾಭ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಆಗಬೇಕಿತ್ತು. ಆದರೆ ಪ್ರದರ್ಶನ ಆರಂಭವಾಗುತ್ತಿದ್ದಂತೆ ಚಿತ್ರಮಂದಿರದ ಮಾಲೀಕರು ಅದನ್ನು ನಿಲ್ಲಿಸಿದ್ದಾರೆ. 'ಕಾಲ' ಪ್ರದರ್ಶನ ರದ್ದು ಮಾಡಿದ ಹಿನ್ನಲೆ ಮಾಲೀಕರು ಪ್ರೇಕ್ಷಕರಿಗೆ ಹಣ ವಾಪಸ್ಸು ನೀಡಿದ್ದಾರೆ.

ಮೈಸೂರಿಗೆ ಬರಲಿಲ್ಲ 'ಕಾಲಾ'
ಮೈಸೂರಿನಲ್ಲಿ ಇಂದು ಪ್ರದರ್ಶನಗೊಳ್ಳಬೇಕಿದ್ದ 'ಕಾಲಾ' ಚಿತ್ರ ಬಿಡುಗಡೆಯಾಗಿಲ್ಲ. ನಗರದ ಡಿ.ಆರ್.ಸಿ. ಐನಾಕ್ಸ್, ಸೇರಿದಂತೆ ಕೆಲವು ಚಿತ್ರಮಂದಿರಗಳಲ್ಲಿ 'ಕಾಲಾ' ಚಿತ್ರದ ಪ್ರದರ್ಶನ ನಡೆಯಬೇಕಿತ್ತು. 'ಕಾಲಾ' ಚಲನಚಿತ್ರದ ಶೋ ಬುಕ್ ಮಾಡದ ಮಲ್ಟಿಫ್ಲೆಕ್ಸ್, ಕೆಲವು ಚಲನಚಿತ್ರ ಮಂದಿರಗಳ ಮಾಲೀಕರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆ ಅರಿತು ಸ್ವಯಂ ಪ್ರೇರಣೆಯಿಂದ ಪ್ರದರ್ಶನಕ್ಕೆ ನಿರಾಸಕ್ತಿ ತೋರಿದ್ದಾರೆ.

ಬಳ್ಳಾರಿ ಮತ್ತು ಮಂಗಳೂರಿನಲ್ಲಿ ಬಿಡುಗಡೆ
ಬಳ್ಳಾರಿ ರಾಧಿಕ ಚಿತ್ರಮಂದಿರದಲ್ಲಿ 'ಕಾಲಾ' ಸಿನಿಮಾ ಪ್ರದರ್ಶನ ಆಗುತ್ತಿದೆ. ಇಂದು ಬೆಳ್ಳಗೆ ಪ್ರತಿಭಟನೆಗೆ ನಡೆಯುತ್ತಿದ್ದ ಕಾರಣದಿಂದ ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದ ಥಿಯೇಟರ್ ಮಾಲೀಕರು 11.30 ರ ಸುಮಾರಿಗೆ ಶೋ ಶುರು ಮಾಡಿದರು. ಅದೇ ರೀತಿ ಮೊದಲ ಶೋ ನಲ್ಲಿ ಹೌಸ್ ಫುಲ್ ಆಗಿದೆ. ಜೊತೆಗೆ ಮಂಗಳೂರಿನಲ್ಲಿ ಸಹ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ಕೊಪ್ಪಳ್ಳದಲ್ಲಿ ಅರ್ಧಕ್ಕೆ ಸ್ಥಗಿತ
ಇನ್ನು ಹಲವು ಚಿತ್ರಮಂದಿರಗಳು ಮಧ್ಯಾಹ್ನದ ನಂತರ 'ಕಾಲಾ' ಸಿನಿಮಾ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕೊಪ್ಪಳದ ಕಾರಟಗಿಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ 'ಕಾಲಾ' ಚಿತ್ರವನ್ನ ಕರವೇ ಕಾರ್ಯಕರ್ತರು ಅರ್ಧದಲ್ಲೇ ತಡೆದಿದ್ದಾರೆ. ಇಲ್ಲಿಗೆ 'ಕಾಲಾ' ಅರ್ಧಕ್ಕೆ ಸ್ಥಗಿತವಾಗಿದೆ.

ಅನೇಕ ಜಿಲ್ಲೆಗಳಲ್ಲಿ ತೀವ್ರ ವಿರೋಧ
ಹಾಸನ, ಮಂಡ್ಯ, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಆನೇಕಲ್, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ 'ಕಾಲಾ' ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. 'ಕಾಲಾ' ಪ್ರದರ್ಶನ ರದ್ದು ಮಾಡಿದ ಹಿನ್ನೆಲೆಯಲ್ಲಿ ನಿರಾಸೆಯಿಂದ ಅಭಿಮಾನಿಗಳು ವಾಪಸ್ ಮನೆಗೆ ತೆರಳುತ್ತಿದ್ದಾರೆ.


Click it and Unblock the Notifications











