''ಫೆಬ್ರವರಿ 24ರವರೆಗೆ ದರ್ಶನ್ ಸರ್ ಅವರ ಡೆವಿಲ್ ಚಿತ್ರಕ್ಕೋಸ್ಕರ ಕಾಯ್ತೀನಿ''- ಪ್ರಥಮ್..!
ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ಕೆಲ ರಾಜಕಾರಣಿಗಳ ಮೊಮ್ಮಗ, ಇನ್ನೂ ಕೆಲ ರಾಜಕಾರಣಿಗಳ ತಮ್ಮನ ಮಗ ಹೀಗೆ ನಾನಾ ನಾನಾ ರೂಪದಲ್ಲಿ ಗುರುತಿಸಿಕೊಂಡವರು ಪ್ರಥಮ್.
ಇಂಥಾ ಪ್ರಥಮ್ ಅದ್ಯಾಕೋ ಏನೋ ಸದ್ಯ ಜೈಲು ಹಕ್ಕಿಯಾಗಿರುವ ದರ್ಶನ್ ವಿರುದ್ಧ ಆಗಾಗ ಗುಡುಗುತ್ತಿದ್ದಾರೆ. ದರ್ಶನ್ ಅವರ ಅಭಿಮಾನಿಗಳನ್ನಂತೂ ಅಂಧಾಭಿಮಾನಿಗಳ ಸಾಲಿನಲ್ಲಿ ಸೇರಿಸಿದ್ದಾರೆ. ಎಚ್ಚರವಾದಾಗೆಲ್ಲ ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ವಿಷ ಕಾರುವ ವ್ಯಕ್ತಿಗಳಿಗೆ ಪೊಲೀಸ್ ಠಾಣೆಗೆ ಕರೆಸಿ ಬುದ್ದಿವಾದವನ್ನೂ ಹೇಳುವ ಕಾರ್ಯಕ್ರಮವನ್ನು ಕೂಡ ಪ್ರಥಮ್ ಆಗಾಗ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಹೀಗೆ ಕಾಲ..ಕಾಲಕ್ಕೆ.. ದರ್ಶನ್ ವಿರುದ್ಧ ಕೆಂಡ ಕಾರುತ್ತಾನೇ ಬಂದಿರುವ ಪ್ರಥಮ್ ಹಿಂದೊಮ್ಮೆ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಎದುರು ತಮ್ಮ ಕರ್ನಾಟಕದ ಅಳಿಯ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಡಿಸೆಂಬರ್ 20ಕ್ಕೆ ಕರುನಾಡಿನೆಲ್ಲೆಡೆ ಕರ್ನಾಟಕದ ಅಳಿಯನ ಅಬ್ಬರ ಶುರುವೆಂದಿದ್ದರು. ಆದರೆ ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಇನ್ನೂ ಹೊರ ಬಂದು ಡೆವಿಲ್ ಚಿತ್ರದ ಚಿತ್ರೀಕರಣವನ್ನು ದರ್ಶನ್ ಮುಗಿಸುವುದು ಯಾವಾಗ ಎನ್ನುವುದಕ್ಕೆ ಉತ್ತರ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಡೆವಿಲ್ ಬಿಡುಗಡೆ ವಿಚಾರದಲ್ಲಿ ಸ್ಪಷ್ಟತೆ ಕೂಡ ಇಲ್ಲ.
ಹೀಗಿರುವಾಗ ಇದೀಗ ಮತ್ತೊಮ್ಮೆ ದರ್ಶನ್ ಅಭಿಮಾನಿಗಳಿಗೆ ಸವಾಲು ಹಾಕಿರುವ ಪ್ರಥಮ್ ಆಗಿದ್ದಾಗಲಿ ನಾನು ಕರ್ನಾಟಕ ಅಳಿಯ ಚಿತ್ರವನ್ನು ಡೆವಿಲ್ ಚಿತ್ರದ ಜೊತೆಯಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹೌದು, ಟಿವಿ09 ಕನ್ನಡಗೆ ಸಂದರ್ಶನ ನೀಡಿರುವ ಪ್ರಥಮ್ ತಮ್ಮ ಮುಂಬರುವ ಚಿತ್ರಗಳ ಕುರಿತು ಮಾತನಾಡಿದ್ದಾರೆ. ಡಿಕೆಡಿಯಲ್ಲಿ ನಾನು ಬೆವರು ಸುರಿಸಿಲ್ಲ, ರಕ್ತ ಸುರಿಸಿದ್ದೇನೆ ಎಂದು ಹೇಳಿದ್ದಾರೆ. ತಮಗಾದ ಗಾಯದ ಫೋಟೋವನ್ನು ತೋರಿಸಿದ್ದಾರೆ. ಇನ್ನೂ ತಮ್ಮ ಫಸ್ಟ್ ನೈಟ್ ವಿಥ್ ದೆವ್ವ ಈ ನವೆಂಬರ್‌ನಲ್ಲಿ ಬಿಡುಗಡೆಯಾಗುತ್ತೆ ಎಂದು ಹೇಳಿರುವ ಪ್ರಥಮ್, ಇದೇ ಸಮಯದಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಕರ್ನಾಟಕದ ಅಳಿಯ ಚಿತ್ರದ ಬಗ್ಗೆಯೂ ಮಾತನಾಡಿದ್ಧಾರೆ.
ಡೆವಿಲ್ ಚಿತ್ರದ ಎದುರು ಕರ್ನಾಟಕದ ಅಳಿಯ ಬಿಡುಗಡೆಯಾಗುವುದು ಖಚಿತ ಎಂದಿರುವ ಪ್ರಥಮ್, ನಾನು ಕೇಳಿಕೊಳ್ಳುವುದು ಏನೆಂದರೆ ಈ ಅಕ್ಟೋಬರ್ ತಿಂಗಳಿನಲ್ಲಿ ಸರ್ ಮೊದಲು ಬಿಡುಗಡೆಯಾಗಲಿ, ನವೆಂಬರ್, ಡಿಸೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣವನ್ನು ಮುಗಿಸಲಿ, ಫೆಬ್ರವರಿಯಲ್ಲಿ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಅವರು ಬಂದರೆ ನಾವು ಕೂಡ ಅದೇ ಟೈಮ್‌ನಲ್ಲಿ ಬರ್ತಿವಿ ಎಂದು ಹೇಳಿದ್ದಾರೆ. ಮುಂದುವರೆದು ನನ್ನದು ಅವರದ್ದು ಒಟ್ಟಿಗೆ ಹುಟ್ಟಿದ ಹಬ್ಬ ಹೀಗಾಗಿ ಒಟ್ಟಿಗೆ ಬರ್ತಿವಿ ಎಂದು ಹೇಳಿರುವ ಪ್ರಥಮ್ ನಾನು ಫೆಬ್ರವರಿ 24ರವರೆಗೆ ಕಾಯ್ತೀನಿ, ಯಾಕೆಂದರೆ ನಾನು ಕಾಯಬಹುದು ಆದರೆ ದುಡ್ಡು ಹಾಕಿರುವ ನಿರ್ಮಾಪಕರು ನಮ್ಮ ಮಾತು ಕೇಳಲ್ಲವಲ್ಲಾ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ತುಂಬಾ ಇರುವ ಕಾರಣಕ್ಕೆ ಈ ವರ್ಷ ಬಿಡುಗಡೆಯಾಗಬೇಕಿದ್ದ ಕರ್ನಾಟಕ ಅಳಿಯ ಚಿತ್ರವನ್ನು ಮುಂದೂಡಿರುವುದಾಗಿ ಹೇಳಿರುವ ಪ್ರಥಮ್ ಸದ್ಯಕ್ಕೆ ನನ್ನ ಫಸ್ಟ್ ನೈಟ್ ವಿಥ್ ದೆವ್ವ ಚಿತ್ರ ಬರುತ್ತಿದೆ ಆ ಚಿತ್ರವನ್ನು ನೋಡಿ ಖುಷಿ ಪಡಿ ಎಂದು ಹೇಳಿದ್ದಾರೆ.
ಅಂದ್ಹಾಗೇ ಕರ್ನಾಟಕದ ಅಳಿಯ ಚಿತ್ರವನ್ನು ಪ್ರಥಮ್ ಖುದ್ದು ನಿರ್ದೇಶಿಸಿದ್ದಾರೆ. ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅಕ್ಷಿತಾ ಬೋಪಯ್ಯ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಜ್ಯೋತಿ, ಸ್ಪರ್ಶ ರೇಖಾ, ಓಂ ಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ರಮೇಶ್ ಭಟ್ ಹೀಗೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಕೂಡ ಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.


Click it and Unblock the Notifications











