ಪವಿತ್ರಾ ಗೌಡ 'ಅನ್ನಭಾಗ್ಯ'ಕ್ಕೆ ಕಲ್ಲು ಹಾಕಿದ ರಾಜ್ಯ ಸರ್ಕಾರ
ಹೆಚ್ಚೇನು ಇಲ್ಲ. ಎರಡು ಮೂರು ವರ್ಷದ ಹಿಂದೆ ಪವಿತ್ರಾ ಗೌಡ ಹೆಸರು ಕೇಳಿದ ತಕ್ಷಣ ಮೊದಲೆಲ್ಲ ಯಾರಿವರು ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿತ್ತು. ಯಾಕೆಂದರೆ ತನ್ನನ್ನು ತಾನು ನಟಿಯೆಂದು ಹೇಳಿಕೊಳ್ಳುತ್ತಿದ್ದ ಪವಿತ್ರಾ ಗೌಡ ಚಿತ್ರರಂಗದಲ್ಲಿ ಸಾಧಿಸಿ-ಬೇಧಿಸಿದ್ದು ಅಷ್ಟರಲ್ಲಿಯೇ ಇದೆ. ''ಅಗಮ್ಯ'' ಎನ್ನುವ ಪರಮತೋಪು ಚಿತ್ರದಲ್ಲಿ ನಟಿಸಿದ್ದ ಪವಿತ್ರಾ ಗೌಡ ಆ ನಂತರ ''ಛತ್ರಿಗಳು ಸಾರ್ ಛತ್ರಿಗಳು''..
''ಸಾಗುವ ದಾರಿಯಲ್ಲಿ'' ಎಂಬ ಚಿತ್ರದಲ್ಲಿ ನಟಿಸಿದ್ದರು.ಈ ಚಿತ್ರಕ್ಕೆ ಇವರಿಗೆ ಸಿಕ್ಕಿದ್ದ ಸಂಭಾವನೆ ಕೇವಲ 20 ಸಾವಿರ ಮಾತ್ರ. ಇದಲ್ಲದೇ ''ಬತ್ತಾಸ್'' ಮತ್ತು ತಮಿಳಿನಲ್ಲಿ ''54312'' ಎಂಬ ಚಿತ್ರಗಳಿಗೆ ಕೂಡ ಪವಿತ್ರಾ ಗೌಡ ಮುಖಕ್ಕೆ ಬಣ್ಣ ಹಚ್ಚಿದ್ದರು.

ಆ ನಂತರ ಅದ್ಹೇಗೋ ಅಸಂಖ್ಯಾತ.. ಅಗಣಿತ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರ ಸಾಂಗತ್ಯವನ್ನು ಪವಿತ್ರಾ ಗೌಡ ಬೆಳೆಸಿಕೊಂಡರು. ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದರು. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದರು. ಆದರೆ, ಇಷ್ಟಕ್ಕೆ.. ಪವಿತ್ರಾ ಗೌಡ ಅವರಿಗೆ ಸಮಾಧಾನವಾಗಲಿಲ್ಲ. ಈ ಹಿನ್ನೆಲೆ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಕೂಡ ಪವಿತ್ರಾ ಗೌಡ ಹೋಗಿ ಬಂದರು. ಈಗ ಮತ್ತೊಮ್ಮೆ ಕರೆದುಕೊಂಡು ಹೋಗಿದ್ದಾರೆ.
ಇಂಥಾ ಪವಿತ್ರಾ ಗೌಡಗೆ ಸಿಗಬೇಕಿದ್ದ ''ಅನ್ನಭಾಗ್ಯ'' ರಾಜ್ಯ ಸರ್ಕಾರ ಕಲ್ಲು ಹಾಕಿದೆ. ಹೌದು, ಕೆಲ ದಿನಗಳ ಹಿಂದೆ ಮನೆ ಊಟ ನೀಡುವಂತೆ ಪವಿತ್ರಾ ಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ಜೈಲಿನ ಊಟ ಸರಿ ಇಲ್ಲ ಎಂದು ಹೇಳಿದ್ದರು. ಜೈಲಿನಲ್ಲಿ ದಿನನಿತ್ಯ ಊಟ ಮಾಡಿ ಮೈಮೇಲೆ ಗುಳ್ಳೆಗಳಾಗಿವೆ, ಚರ್ಮರೋಗವಾಗಿದೆ ಎಂದು ಅಲವತ್ತುಕೊಂಡಿದ್ದರು. ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದರು.
ಪವಿತ್ರಾ ಗೌಡ ಅವರ ಈ ವಾದವನ್ನು ಕೇಳಿದ್ದ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಮನೆ ಊಟಕ್ಕೆ ಅವಕಾಶ ನೀಡಿತ್ತು. ಆದರೆ ಇದಕ್ಕೆ ಜೈಲಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜೈಲಿನ ಊಟ ರುಚಿಯಾಗಿದೆ ಶುಚಿಯಾಗಿದೆ ಎಂದು ಹೇಳಿದ್ದರು. ಇಲ್ಲಿಯವರೆಗೆ ಜೈಲಿನ ಊಟ ತಿಂದು ಯಾರಿಗೂ ಏನೂ ಆಗಿಲ್ಲ, ಯಾರು ಅಸ್ವಸ್ತರಾಗಿಲ್ಲ ಎಂದು ಹೇಳಿದ್ದರು. ಪವಿತ್ರಾ ಗೌಡ ಅವರಿಗೆ ಪ್ರತೈಕವಾಗಿ ಮನೆ ಊಟ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.
ಜೈಲಾಧಿಕಾರಿಗಳ ಈ ಪ್ರತಿ ವಾದದಿಂದಾಗಿ 57 ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಬದಲಿಸಿತ್ತು. ಆದೇಶದಲ್ಲಿ ಮಾರ್ಪಾಡು ಮಾಡಿ, ಪ್ರತಿ ದಿನದ ಬದಲು ವಾರಕ್ಕೆ ಒಮ್ಮೆ ಮಾತ್ರ ಊಟ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆಯನ್ನು ಇಂದು (ಜನವರಿ 20) ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಸೆಷನ್ಸ್ ಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಎಷ್ಟೇ ದೊಡ್ಡವರಾದರು ಕೂಡ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬ ಅಭಿಪ್ರಾಯ ಪಟ್ಟಿದೆ.
ವಿಚಾರಣೆ ವೇಳೆ ವಿಶೇಷ ಸವಲತ್ತು ನೀಡಬಾರದು ಎಂಬ ಸುಪ್ರೀಂ ಕೋರ್ಟ್‌ನ ಹಳೆದ ಆದೇಶವನ್ನು ಉಲ್ಲೇಖ ಮಾಡಿ ಸರ್ಕಾರದ ಪರ ವಿಶೇಷ ಅಭಿಯೋಜಕ (SPP) ಬಿ.ಎನ್. ಜಗದೀಶ್ ವಾದ ಮಾಡಿದ್ದು, ಜೈಲಿನ ಕೈದಿಗಳಿಗೆ ಮನೆ ಊಟ ನೀಡುವುದು ಜೈಲು ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮನೆ ಊಟಕ್ಕೆ ಅವಕಾಶ ನೀಡಿದರೆ ಅಧಿಕಾರಿಗಳ ಮೇಲೆ ಕ್ರಮವಾಗುವ ಸಾಧ್ಯತೆ ಇರುತ್ತೆ ಎಂದರು. ಯಾವುದೇ ಕಾರಣಕ್ಕೂ ಮನೆ ಊಟಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದರು.
ವಾದ ಆಲಿಸಿದ ಹೈಕೋರ್ಟ್, ಸುಪ್ರೀಂಕೋರ್ಟ್ ಹೇಳಿರುವಂತೆ ಯಾರಿಗೂ ಸಹ ವಿಶೇಷ ಸವಲತ್ತು ನೀಡುವಂತಿಲ್ಲ ಎಂದಿದೆ. ಮನೆ ಊಟವನ್ನು ಕೇವಲ ಬಹಳ ವಿಶೇಷ ಸಂದರ್ಭದಲ್ಲಿ ಐಜಿಪಿ ಅವರ ಒಪ್ಪಿಗೆ ಮೇರೆಗೆ ಮಾತ್ರವೇ ನೀಡಬೇಕು,ಆ ಕಾರಣ ವೈದ್ಯಕೀಯ ಕಾರಣ ಆಗಿರಬೇಕು ಎಂದು ಜೈಲು ಕೈಪಿಡಿಯಲ್ಲಿದೆ ಎಂದು ಕೂಡ ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿದೆ. ನ್ಯಾಯಾಲಯದ ಈ ಆದೇಶದಿಂದ ಮನೆಯೂಟ ಸವಿಯುವ ಆಸೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆಯಾಗಿದ್ದು ಸದ್ಯ ಜೈಲೂಟವೇ ಗತಿ ಆಗಿದೆ.


Click it and Unblock the Notifications











