ಕರ್ನಾಟಕ ಬಂದ್: ಬಲವಂತ ಬೇಡ ಎಂದ ಚೇತನ್ ಅಹಿಂಸ
ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ವಿಷಯ ಬಹುವಾಗಿ ಚರ್ಚೆಯಾಗುತ್ತಿದೆ. ಕರ್ನಾಟಕ ಬಂದ್‌ಗೆ ಚಿತ್ರರಂಗವು ನೈತಿಕ ಬೆಂಬಲ ಘೋಷಿಸಲಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಪರ ವಿರೋಧ ಚರ್ಚೆ ಜಾರಿಯಲ್ಲಿದೆ.
ಕರ್ನಾಟಕ ಬಂದ್‌ಗೆ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಿ ಡಿಸೆಂಬರ್ 31ರಂದು ಚಿತ್ರರಂಗದ ಚಟುವಟಿಕೆಗಳನ್ನು ಬಂದ್ ಮಾಡಬೇಕು ಎಂದು ಸಾರಾ ಗೋವಿಂದು, ವಾಟಾಳ್ ನಾಗರಾಜ್ ಸೇರಿದಂತೆ ಇನ್ನೂ ಕೆಲವರು ಒತ್ತಾಯಿಸಿದ್ದಾರೆ. ಆದರೆ ಡಿಸೆಂಬರ್ 31 ಶುಕ್ರವಾರವಾಗಿದ್ದು ಅಂದು ಕೆಲವು ಸಿನಿಮಾಗಳ ಬಿಡುಗಡೆ ಇದೆ ಹಾಗಾಗಿ ಅಂದು ಬಂದ್ ಮಾಡುವುದು ಬೇಡವೆಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ಇಂದು ದಾವಣಗೆರೆಗೆ ಭೇಟಿ ನೀಡಿದ್ದ ನಟ ಚೇತನ್ ಅಹಿಂಸ ಚಿತ್ರರಂಗ ಬಂದ್ ಮಾಡುವ ವಿಷಯದ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಟ್ಟಂತೆ ಮಾತನಾಡಿದರು.

''ಡಿಸೆಂಬರ್ 31 ರಂದು ಕನ್ನಡಪರ ಸಂಘಟನೆಗಳು ಎಂಇಎಸ್ ಹಾಗೂ ಶಿವಸೇನೆ ಪುಂಡಾಟ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಾಣಿಜ್ಯ ಚಲನಚಿತ್ರ ಮಂಡಳಿ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ಬಂದ್ ನಲ್ಲಿ ನೇರವಾಗಿ ಪಾಲ್ಗೊಳ್ಳುವುದು, ನೈತಿಕ ಬೆಂಬಲ ನೀಡುವ ವಿಚಾರ ಮಂಡಳಿಗೆ ಬಿಟ್ಟಿದ್ದು. ಆದರೆ, ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕು ಎಂಬುದು ಸರಿಯಲ್ಲ. ಕನ್ನಡ ನಾಡು, ನುಡಿ, ನೆಲ, ಜಲ ವಿಚಾರವಾಗಿ ಬಂದಾಗ ನಟರೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ನಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತೇವೆ, ಹೋರಾಟ ಮಾಡುತ್ತೇವೆ. ಪ್ರತಿಭಟನೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ'' ಎಂದರು ನಟ ಚೇತನ್.
''ಡಿಸೆಂಬರ್ 31ರ ಕರ್ನಾಟಕ ಬಂದ್ ನಲ್ಲಿ ನೀವು ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡದ ಚೇತನ್, ಪ್ರತಿಭಟನೆ ನಡೆಸಲಿ. ಬಂದ್ ವಿಚಾರದಲ್ಲಿ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಹಲವು ಅಸೋಸಿಯೇಷನ್ ಗಳು ಇವೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಒಕ್ಕೂಟ ಹೀಗೆ ನಾನಾ ಅಸೋಸಿಯೇಷನ್ ಗಳಿದ್ದು, ಅವರೆಲ್ಲರೂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕನ್ನಡದ ಅಸ್ಮಿತೆ ಕಾಪಾಡಲು ನಾವು ಶ್ರಮಿಸುತ್ತೇವೆ. ನಾನು ಅಮೆರಿಕಾದಲ್ಲಿ ಹುಟ್ಟಿ ಬೆಳೆದರೂ ಕನ್ನಡ ನಾಡಿನ ಸೇವೆಗೆಂದೇ ವಾಪಸ್ ತವರಿಗೆ ಬಂದಿದ್ದೇನೆ. ನನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ. ಕನ್ನಡ ವಿಚಾರ ಬಂದಾಗ ನಾನು ಸಹ ಬೆಂಬಲ ನೀಡುತ್ತೇನೆ'' ಎಂದರು.
ಇದೇ ವಿಷಯವಾಗಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಯಶ್, ''ಕರ್ನಾಟಕ ಬಂದ್ ಅಥವಾ ಚಿತ್ರರಂಗ ಬಂದ್ ಯಾವುದೇ ಆಗಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಥವಾ ನಮಗೆ ತೊಂದರೆ ಮಾಡಿಕೊಂಡು ಬಂದ್ ಮಾಡುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಸೂಕ್ಷ್ಮ ವಿಷಯ ನಾನು ಈಗ ಏನೇ ಹೇಳಿದರು ಯಶ್ ಹೀಗೆ ಹೇಳಿದ, ಹಾಗೆ ಹೇಳಿದ ಎಂದು ಅದು ಬದಲಾಗಿ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ. ಹಾಗಾಗಿ ದೊಡ್ಡವರು ಏನು ತೀರ್ಮಾನ ಮಾಡುತ್ತಾರೊ ಮಾಡಲಿ. ಆದರೆ ಕನ್ನಡದ ವಿಷಯಕ್ಕೆ ಬಂದಾಗ ನಮ್ಮೆಲ್ಲರ (ಚಿತ್ರರಂಗ) ಹಾಗೂ ಇಡೀಯ ಕನ್ನಡಿಗರ ಭಾವನೆ ಒಂದೇ ಆಗಿರುತ್ತದೆ'' ಎಂದಿದ್ದಾರೆ.
ನಟ ಶಿವರಾಜ್ ಕುಮಾರ್ ಸಹ ಇದೇ ಮಾದರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಮ್ಮವರಿಗೆ ತೊಂದರೆ ಆಗುವ ರೀತಿಯ ಪ್ರತಿಭಟನೆ ಮಾಡುವುದು ಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ನಟ ಅಜಯ್ ರಾವ್ ಸಹ ಚಿತ್ರರಂಗ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಕನ್ನಡಿಗರಿಗೆ ಸಮಸ್ಯೆ ಆಗುವಂತೆ ಪ್ರತಿಭಟನೆ ಮಾಡುವುದು ಸರಿಯಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗವು ಸಂಪೂರ್ಣ ಬಂದ್ ಬದಲಿಗೆ ನೈತಿಕ ಬೆಂಬಲ ಮಾತ್ರ ನೀಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಗರಂ ಆಗಿರುವ ವಾಟಾಳ್ ನಾಗರಾಜ್, ''ನೈತಿಕ ಬೆಂಬಲ ಮಾತ್ರವೇ ನೀಡುವುದಾದರೆ ಅವರ ಬೆಂಬಲವೇ ಬೇಡ'' ಎಂದಿದ್ದಾರೆ.


Click it and Unblock the Notifications











