ಪರಪ್ಪನ ಅಗ್ರಹಾರ, 77 ದಿನ, ನರಕಯಾತನೆ ; ಹಾಸಿಗೆ ದಿಂಬು ಕನವರಿಸುತ್ತಿದ್ದ ದರ್ಶನ್‌ಗೆ ಡಬಲ್ ಶಾಕ್ ನೀಡಿದ ಕೋರ್ಟ್
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಅನುದಿನ ಅನುಕ್ಷಣ ''ಪರಪ್ಪನ ಅಗ್ರಹಾರ''ದಲ್ಲಿ ನರಳುತ್ತಿದ್ದಾರೆ. ಯಾಕೆಂದರೆ.. ಈ ಬಾರಿ ಹಿಂದಿನಂತೆ ವಿಐಪಿ ಸೌಲಭ್ಯ ಇಲ್ಲ. ಬಾಯ್ತಪ್ಪಿ ಕೇಳುವ ಅವಕಾಶ ಕೂಡ ಇಲ್ಲ. ''ಸುಪ್ರೀಂ ಕೋರ್ಟ್'' ಖಂಡತುಂಡವಾಗಿ ಈ ವಿಚಾರದಲ್ಲಿ ಆದೇಶವನ್ನು ನೀಡಿದೆ.
ಯಾವ ವಿಶೇಷ ಸೌಲಭ್ಯ ನೀಡದಂತೆ ಹೇಳಿದೆ. ಹೀಗಾಗಿ ಈ ಬಾರಿ ದರ್ಶನ್ ದಣಿದಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ. ದರ್ಶನ್ ಅವರ ಈ ದಯನೀಯ ಸ್ಥಿತಿ ಕಂಡು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಮಮ್ಮಲ ಮರುಗುತ್ತಿದ್ದಾರೆ.

ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಒನ್ ನಟ. ನೇರವಂತಿಕೆಯ ಜೊತೆ ಹೃದಯವಂತಿಕೆ ಕೂಡ ಅವರ ಟ್ರೇಡ್ ಮಾರ್ಕ್.
ಇಂಥಾ ದರ್ಶನ್ ಕೊನೆ ಪಕ್ಷ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯವಾದರೂ ಕೊಡಿ ಎಂದು ಕಳೆದ 77 ದಿನಗಳಿಂದ ಅಂಗಲಾಚಿ ಬೇಡಿಕೊಳ್ಳುತ್ತಲೇ ಇದ್ದಾರೆ. ಆದರೆ.. ಇವರ ಈ ಬೇಡಿಕೆಗೆ ಇಲ್ಲಿಯವರೆಗೆ ಮನ್ನಣೆ ಸಿಕ್ಕಿಲ್ಲ. ಇಂದು ( ಅಕ್ಟೋಬರ್ 29 ) ಕೂಡ ದರ್ಶನ್‌ಗೆ ಸಿಗಬೇಕಿದ್ದ ಬೆಲೆ ಸಿಗಲಿಲ್ಲ. ಬದಲಿಗೆ ಕೋರ್ಟ್ ಡಬಲ್ ಶಾಕ್ ನೀಡಿದೆ.
ಹೌದು, ದರ್ಶನ್ ಕೇಳಿದ್ದ ಹಾಸಿಗೆ ಮತ್ತು ದಿಂಬಿನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು 57ನೇ ಸಿಸಿಹೆಚ್ ನ್ಯಾಯಾಲಯ ಆದೇಶವನ್ನು ನೀಡಿದೆ. ದರ್ಶನ್ ಕೇಳಿದ್ದ ದಿಂಬು.. ಹಾಸಿಗೆ.. ಬಾಚಣಿಕೆ..ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡಲು ನಿರಾಕರಿಸಿದೆ.
ಇನ್ನು ದರ್ಶನ್ ಈ ಹಿಂದೆ ತಾವು ಇರುವ ಬ್ಯಾರಕ್‌ನ ಸಮಸ್ಯೆ ಹೇಳಿಕೊಂಡಿದ್ದರು. ಬಿಸಲು ಬೀಳದ ಕಾರಣ ಕೈಗೆ ಫಂಗಸ್ ಆಗಿದೆ ಎಂದು ಹೇಳಿದ್ದರು. ಬ್ಯಾರಕ್‌ನಿಂದ ಹೊರಗಡೆ ಬರಲು ಕೂಡ ಅನುವು ಮಾಡಿಕೊಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ಅವರ ಈ ಮನವಿಗೆ ಕೂಡ ಮಣೆ ಹಾಕದ ನ್ಯಾಯಾಲಯ ಈ ಅಧಿಕಾರವನ್ನು ಜೈಲಾಧಿಕಾರಿಗಳಿಗೆ ನೀಡಿದೆ. ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಜೈಲಾಧಿಕಾರಿಗಳೇ ತೆಗೆದುಕೊಳ್ಳಲಿ ಎಂದು ಹೇಳಿದೆ. ಈ ಮೂಲಕ ದರ್ಶನ್‌ಗೆ ಕೋರ್ಟ್ ಡಬಲ್ ಶಾಕ್ ನೀಡಿದೆ. ತಿಂಗಳಿಗೊಮ್ಮೆ ಮಾತ್ರ ಬಟ್ಟೆ ಮತ್ತು ಹೊದಿಕೆ ಒದಗಿಸಲು 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿದ್ದು ಮಾತ್ರ ದರ್ಶನ್ ಪಾಲಿಗೆ ಸಮಾಧಾನದ ಸಂಗತಿ.
ಇನ್ನು ಇನ್ನೆರಡು ದಿನದ ನಂತರ ಅಂದರೆ ಅಕ್ಟೋಬರ್ 31ರಂದು ದರ್ಶನ್ ವಿರುದ್ದ ದೋಷಾರೋಪ ನಿಗದಿಪಡಿಸಲು ಕೋರ್ಟ್ ಸೂಚನೆ ನೀಡಿದೆ.ಅಂದು ದರ್ಶನ್, ಪವಿತ್ರಾಗೌಡ ಮತ್ತು ಉಳಿದ ಆರೋಪಿಗಳ ವಿರುದ್ಧ ಯಾವ್ಯಾವ ಸೆಕ್ಷನ್ ಗಳಡಿ ಆರೋಪ ಹೊರಿಸಲಾಗುತ್ತೆ ಎಂಬ ವಿಚಾರ ಗೊತ್ತಾಗಲಿದೆ. ಕೊಲೆ, ಹಲ್ಲೆ, ಕಿಡ್ನ್ಯಾಪ್, ಸಾಕ್ಷ್ಯನಾಶ ಸೇರಿದಂತೆ ವಿವಿಧ ಆರೋಪಗಳನ್ನು ವಿವಿಧ ಸೆಕ್ಷನ್ ಗಳಡಿ ದರ್ಶನ್ ಅವರ ವಿರುದ್ದ ಹೊರಿಸುವ ಸಾಧ್ಯತೆ ಕೂಡ ಇದೆ.
ಇದೇ ಸಮಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 5ನೇ ಆರೋಪಿ ನಂದೀಶ್ ಅರ್ಜಿಯನ್ನು ಕೂಡ ವಿಚಾರಣೆ ನಡೆಸಿದ ನ್ಯಾಯಾಲಯ ನಂದೀಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಗೆ ಸಾಕ್ಷ್ಯ ವಿಚಾರಣೆಗೆ ಎರಡೂ ಕಡೆಯವರು ಸಹಕರಿಸುವಂತೆ ನ್ಯಾಯಾಲಯ ಹೇಳಿದೆ.
ಅಂದ್ಹಾಗೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾದ ಪವಿತ್ರಾಗೌಡ ಮತ್ತು A2 ಆರೋಪಿಯಾದ ದರ್ಶನ್ ಸೇರಿ 6 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದಿನ ವಿಚಾರಣೆಗೆ ಹಾಜರಾಗಿದ್ದರು. ಉಳಿದ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.


Click it and Unblock the Notifications











