40 ಲಕ್ಷ ವಂಚನೆ: ನಟಿ ಪದ್ಮಜಾ ರಾವ್ ಬಂಧಿಸಲು ಸೂಚಿಸಿದ ನ್ಯಾಯಾಲಯ
ಕನ್ನಡದ ಖ್ಯಾತ ಪೋಷಕ ನಟಿ ಪದ್ಮಜಾ ರಾವ್ ಗೆ ಬಂಧನ ಭೀತಿ ಎದುರಾಗಿದೆ. ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಯಾಗಿದ್ದು, ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಲಾಗಿದೆ.
Recommended Video
ನಟಿ ಪದ್ಮಜಾ ರಾವ್ ಅವರ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ ವಂಚನೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪದೇ-ಪದೇ ವಿಚಾರಣೆಗೆ ಗೈರಾದ ಹಾಗೂ ನ್ಯಾಯಾಲಯದ ನೊಟೀಸ್‌ಗಳಿಗೆ ಉತ್ತರಿಸದ ಕಾರಣ ಪದ್ಮಜಾ ವಿರುದ್ಧ ಮಂಗಳೂರು ನ್ಯಾಯಾಲಯವು ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.
ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್‌ನ ವೀರೂ ಶೆಟ್ಟಿಗೆ ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿದೆ. ಹಾಗಾಗಿ ವೀರೂ ಶೆಟ್ಟಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರು ಐದನೇ ಜೆಎಂಎಫ್ ನ್ಯಾಯಾಲಯವು ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಪದ್ಮಜಾ ರಾವ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಈ ಹಿಂದೆ ಮೂರು ಬಾರಿ ನ್ಯಾಯಾಲಯವು ಪದ್ಮಜಾ ರಾವ್ ಅವರಿಗೆ ನೊಟೀಸ್ ನೀಡಲಾಗಿತ್ತು. ಆದರೆ ಪದ್ಮಜಾ ಅವರು ನೊಟೀಸ್‌ಗಳಿಗೆ ಉತ್ತರಿಸಿರಲಿಲ್ಲ. ಪ್ರಸ್ತುತ ವಾರೆಂಟ್ ಅನ್ನು ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಗೆ ಕಳುಹಿಸಲಾಗಿದ್ದು, ಪದ್ಮಜಾ ರಾವ್ ಅವರನ್ನು ಬಂಧಿಸಲು ಸೂಚಿಸಲಾಗಿದೆ.
ಕಿರುತೆರೆ, ಕನ್ನಡ ಚಲನಚಿತ್ರಗಳ ಜೊತೆಗೆ ತುಳು ಸಿನಿಮಾಗಳಲ್ಲಿಯೂ ಪದ್ಮಜಾ ರಾವ್ ನಟಿಸಿದ್ದಾರೆ. ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ಪದ್ಮಜಾ ರಾವ್ ಅವರು ವೀರೂ ಶೆಟ್ಟಿ ಅವರಿಂದ ಕೆಲವು ಲಕ್ಷಗಳು ಸಾಲ ಪಡೆದು ಜಾಮೀನಾಗಿ ಚೆಕ್ ಅನ್ನು ನೀಡಿದ್ದರಂತೆ. ಪಡೆದ ಸಾಲ ವಾಪಸ್ ನೀಡದ ಕಾರಣ ವೀರೂ ಶೆಟ್ಟಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.


Click it and Unblock the Notifications











