"ರೌಡಿ ಆಗಬೇಕಿದ್ದ ದರ್ಶನ್, ಅಪ್ಪಿ ತಪ್ಪಿ ಹೀರೊ ಆಗಿದ್ದಾರೆ" ಎಂದ ಸೋನುಗೆ ದರ್ಶನ್ ಫ್ಯಾನ್ಸ್ ಕಿರುಕುಳ!
ನಟಿ ರಮ್ಯಾಗೆ ಕೆಟ್ಟ ಮೆಸೇಜ್ ಕಳುಹಿಸಿದ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಕಳ್ಸಿ ಕಿರುಕುಳ ನೀಡಿದ್ದಾರೆ ಎಂದು ನಟಿ ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದರ್ಶನ್ ಫ್ಯಾನ್ಸ್ ನನಗೆ ಕಾಟ ಕೊಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಸೋನು ಶೆಟ್ಟಿ ಹೇಳಿದ್ದಾರೆ.
ದರ್ಶನ್ ಫ್ಯಾನ್ಸ್ ನನಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ. ಆದರೆ ಅವ್ರು ನನಗೆ ಏನು ಮಾಡೋಕೆ ಆಗಲ್ಲ? ಎಂದು ಸೋನು ಶೆಟ್ಟಿ ತಿರುಗೇಟು ನೀಡಿದ್ದಾರೆ. ಐ ಯಾಮ್ ಸೋನು ಶೆಟ್ಟಿ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಸೋನು ಹೊಂದಿದ್ದಾರೆ. ಮಾದಕವಾಗಿ ಮಾತನಾಡುತ್ತಾ ವೀಡಿಯೋಗಳನ್ನು ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. 69 ಸಾವಿರ ಫಾಲೋವರ್ಸ್ ಕೂಡ ಹೊಂದಿದ್ದಾರೆ.

ಆಕೆಯ ಇನ್‌ಸ್ಟಾಗ್ರಾಮ್ ಖಾತೆ ಗಮನಿಸಿದರೆ ಪ್ರಚಾರಕ್ಕಾಗಿಯೇ ಹೀಗೆಲ್ಲಾ ಪೋಸ್ಟ್ ಮಾಡುವಂತೆ ಕಾಣುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಕಾಮೆಂಟ್ಸ್ ಸೆನ್ಷನ್ ಆಫ್ ಮಾಡಿ ಸೋನು ಶೆಟ್ಟಿ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. "ಡಿ ಬಾಸ್ ಹಾಗೂ ಅವರ ಅಭಿಮಾನಿಗಳು ನನಗೆ ಇಷ್ಟ ಆಗಲ್ಲ. ಅವ್ರು ರೌಡಿ ಆಗಬೇಕಿತ್ತು. ಅಪ್ಪಿ ತಪ್ಪಿ ಹೀರೊ ಆಗಿದ್ದಾರೆ. ಅದೇ ಪ್ರಾಬ್ಲಂ. ಅವ್ರ ಫ್ಯಾನ್ಸ್ ಕೂಡ ಹಂಗೇ ಇದ್ದಾರೆ. ಮೊದ್ಲು ಫ್ಯಾನ್ಸ್‌ಗೆ ಬುದ್ಧಿ ಕಲಿಸಬೇಕು" ಎಂದು ಸೋನು ಇತ್ತೀಚೆಗೆ ವೀಡಿಯೋ ಪೋಸ್ಟ್ ಮಾಡಿದ್ದರು.
ಆ ವೀಡಿಯೋ ವೈರಲ್ ಆದ ಬಳಿಕ ದರ್ಶನ್ ಫ್ಯಾನ್ಸ್ ನನಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ಮತ್ತೊಂದು ವೀಡಿಯೋ ಮಾಡಿ ಸೋನು ಹಂಚಿಕೊಂಡಿದ್ದಾರೆ. "ದರ್ಶನ್ ಹೆಸರು ಬಳಸಿಕೊಂಡು ಪಬ್ಲಿಸಿಟಿ ಪಡೀತಿದ್ದೀನಿ ಎಂದು ಕೆಲವರು ಹೇಳ್ತಿದ್ದಾರೆ. ಆದರೆ ನನಗೆ ಅವರ ಹೆಸರು ಬಳಸಿ ಪಬ್ಲಿಸಿಟಿ ಪಡೆಯುವ ಅಗತ್ಯ ಇಲ್ಲ" ಎಂದು ಸೋನು ಹೇಳಿರುವುದು ವೈರಲ್ ಆಗುತ್ತಿದೆ.
ದರ್ಶನ್ ಫ್ಯಾನ್ಸ್ ನಮ್ಮನ್ನು ಟ್ರೋಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವುದು ಸೋನು ಶೆಟ್ಟಿ ಮೊದಲೇನಲ್ಲ. ಇದಕ್ಕೂ ಮುನ್ನ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕೂಡ ಇಂಥದ್ದೇ ಆರೋಪ ಮಾಡಿದ್ದರು. ಕೆಲ ದಿನಗಳ ಹಿಂದೆ ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಗ ಕೆಲವರನ್ನು ಪೋಲಿಸರು ವಶಕ್ಕೆ ಪಡೆದು ಬುದ್ಧಿ ಹೇಳಿದ್ದರು.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ನಟಿ ರಮ್ಯಾ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರನ್ನು ಕಿಡಿಗೇಡಿಗಳು ಟ್ರೋಲ್ ಮಾಡಿದ್ದರು. ಕೆಲವರಂತೂ ನೇರವಾಗಿ ಆಕೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟ ಕೊಳಕ ಮೆಸೇಜ್ ಕಳುಹಿಸಿದ್ದರು. ಅದನ್ನು ಸ್ಕ್ರೀನ್ ಶಾಟ್ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ರಮ್ಯಾ ಹಂಚಿಕೊಂಡಿದ್ದರು. ಬಳಿಕ 42 ಇನ್‌ಸ್ಟಾಗ್ರಾಮ್ ಅಕೌಂಟ್ಸ್ ಲಿಂಕ್ ಉಲ್ಲೇಖಿಸಿ ದೂರು ನೀಡಿದ್ದರು.
ನಟಿ ರಮ್ಯಾ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಬಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿ ಬೇರೆ ಜಿಲ್ಲೆಯಲ್ಲಿರುವ ಇಂತಹ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲು ಹುಡುಕಾಟ ನಡೆಸುತ್ತಿದ್ದಾರೆ.


Click it and Unblock the Notifications











