ಮದುವೆ ಬಳಿಕ ಸಿಹಿಸುದ್ದಿ ಇಲ್ವಾ ಎಂದು ಕೇಳುತ್ತಿದ್ದವರಿಗೆ ಉತ್ತರ ಕೊಟ್ಟೇ ಬಿಟ್ರು ನಟಿ ಹರಿಪ್ರಿಯಾ
ಚಂದನವನದ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ ಜೋಡಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಜೋಡಿ. ಹೌದು, ಕಳೆದ ವರ್ಷದ ಅಂತ್ಯದಲ್ಲಿ ಈ ಇಬ್ಬರೂ ಪರಸ್ಪರ ಪ್ರೀತಿಸ್ತಿದ್ದಾರಂತೆ, ಇಬ್ಬರೂ ಮದುವೆಯಾಗ್ತಾರಂತೆ ಎಂಬ ಗುಸು ಗುಸು ಹರಿದಾಡಿತ್ತು. ಅಲ್ಲಿಯವರೆಗೂ ಎಲ್ಲಿಯೂ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳದ ಕಾರಣ ಈ ಸುದ್ದಿಯನ್ನು ವದಂತಿ ಎಂದೇ ಪರಿಗಣಿಸಲಾಗಿತ್ತು.
ಆದರೆ ಈ ರೀತಿಯ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಕೈ ಕೈ ಹಿಡಿದುಕೊಂಡು ನಡೆದಾಡುವ ಮೂಲಕ ಆ ಸುದ್ದಿಗಳು ನಿಜ ಎಂಬುದನ್ನು ಪರೋಕ್ಷವಾಗಿ ತಿಳಿಸಿತ್ತು. ಬಳಿಕ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡ ಈ ಜೋಡಿ ತಮ್ಮ ಪ್ರೀತಿಯನ್ನು ಮದುವೆ ಹಂತಕ್ಕೂ ತಂದಿತ್ತು. ಇದೇ ವರ್ಷದ ಮೊದಲ ತಿಂಗಳು ಗಣರಾಜ್ಯೋತ್ಸವದ ದಿನದಂದು ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸರಳವಾಗಿ ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಬಳಿಕ ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನೂ ಸಹ ಆಚರಿಸಿಕೊಂಡಿತ್ತು. ಇನ್ನು ಜನವರಿ ತಿಂಗಳ ಅಂತ್ಯದಲ್ಲಿ ತಮ್ಮ ಮದುವೆ ಸಂಭ್ರಮವನ್ನು ಅಂತ್ಯಗೊಳಿಸಿದ ಈ ಜೋಡಿ ಶುಭ ಸುದ್ದಿ ನೀಡಲಿದೆ ಎಂಬ ಸುದ್ದಿಗಳು ಮಾರ್ಚ್ ತಿಂಗಳಿನಲ್ಲಿಯೇ ಹರಿದಾಡಲು ಆರಂಭಿಸಿದವು. ಹೌದು, ಇದೇ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಹರಿಪ್ರಿಯಾ ಗರ್ಭಿಣಿಯಂತೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಈ ಕುರಿತು ಶೀಘ್ರದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂಬ ಸುದ್ದಿಗಳೂ ಸಹ ಹರಿದಾಡಿದ್ದವು.
ಅಲ್ಲದೇ ಈ ಸುದ್ದಿಗಳು ಹರಿದಾಡುತ್ತಿದ್ದಂತೆ ಇದೇ ವಿಷಯದ ಕುರಿತು ಪೋಸ್ಟ್ ಹಂಚಿಕೊಂಡಿದ್ದ ಹರಿಪ್ರಿಯಾ ನೀವೆಲ್ಲಾ ಏನೆಂದು ತಿಳಿಯಲು ಕುತೂಹಲಗೊಂಡಿದ್ದೀರ ಎಂಬುದು ತಿಳಿದಿದೆ, ಅದನ್ನು ಘೋಷಿಸುವ ಮುನ್ನ ಏನೆಂದು ಊಹಿಸಬಲ್ಲಿರಾ ಎಂದು ಬರೆದುಕೊಂಡಿದ್ದರು. ಈ ರೀತಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹೊಸ ಮಗುವಿನ ಆಗಮನವಾಗಬಹುದಾ ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದರು. ಅಲ್ಲದೇ ಈ ಪೋಸ್ಟ್‌ನಲ್ಲಿ ಬಳಸಲಾಗಿದ್ದ ಹೆಸರೇನು, ಗುಡ್ ನ್ಯೂಸ್, ಕೇಳಿದ್ದು ನಿಜಾನಾ, ಯಾವಾಗ ಘೋಷಿಸ್ತೀರ, ಹೊಸ ಆರಂಭ, ಹೊಸ ಅತಿಥಿಯ ಆಗಮನ ಎಂಬ ಸಾಲುಗಳು ಈ ಹರಿಪ್ರಿಯಾ ತಾನು ಗರ್ಭಿಣಿ ಎಂಬುದನ್ನು ಘೋಷಿಸಬಹುದಾ ಎಂಬ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದ್ದವು.
ಆದರೆ ಸದ್ಯ ಹರಿಪ್ರಿಯಾ ಹಂಚಿಕೊಂಡಿರುವ ಹೊಸ ಪೋಸ್ಟ್ ಆ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದು, ಹರಿಪ್ರಿಯಾ ಹಾಗೂ ವಸಿಷ್ಟ ದಂಪತಿ ಮನೆಗೆ ಹೊಸ ಅತಿಥಿಯಾಗಿ ಆಗಮಿಸುತ್ತಿರುವುದು ಯುಟ್ಯೂಬ್ ಚಾನೆಲ್ ಎಂದು ತಿಳಿದುಬಂದಿದೆ. ಹೌದು, ತಾವು ಗರ್ಭಿಣಿಯಾಗಿದ್ದೇನೆ ಎಂದು ಹರಿದಾಡುತ್ತಿದ್ದ ಸುದ್ದಿಗಳನ್ನು ಉಪಯೋಗಿಸಿಕೊಂಡು ಕುತೂಹಲ ಕೆರಳಿಸಿ ಯುಟ್ಯೂಬ್ ಚಾನೆಲ್ ಘೋಷಣೆ ಮಾಡಿದ್ದಾರೆ ಹರಿಪ್ರಿಯಾ. ಈ ತಮ್ಮ ಚಾನೆಲ್‌ಗೆ ಹರಿಪ್ರಿಯಾ ಎಂದೇ ಹೆಸರನ್ನು ಇಟ್ಟುಕೊಂಡಿದ್ದು, ಮೊದಲ ವಿಡಿಯೊವನ್ನೂ ಸಹ ಪೋಸ್ಟ್ ಮಾಡಿದ್ದಾರೆ.
ಉಗ್ರಂ ಚಿತ್ರದ ಖ್ಯಾತ ಡೈಲಾಗ್ 'ಗೀಟ್ ಎಳೆದಾಗೋಗಿದೆ' ಶೈಲಿಯಲ್ಲಿ ಯುಟ್ಯೂಬ್ ಚಾನೆಲ್ ಬಗ್ಗೆ ಡೈಲಾಗ್ ಹೇಳಿರುವ ಹರಿಪ್ರಿಯಾ ಬಹಳ ವಿಭಿನ್ನವಾಗಿ ತಮ್ಮ ಯುಟ್ಯೂಬ್ ಚಾನೆಲ್ ಘೋಷಿಸಿದ್ದಾರೆ. ಈ ಸುದ್ದಿ ತಿಳಿದ ಬಳಿಕ ಮಗು ನಿರೀಕ್ಷೆಯಲ್ಲಿದ್ದ ಸಿಂಹಪ್ರಿಯಾ ಅಭಿಮಾನಿಗಳು ಬೇಸರಗೊಂಡಿದ್ದರೆ, ನೆಟ್ಟಿಗರು ತಮ್ಮ ಕುರಿತು ಹರಿದಾಡಿದ್ದ ಗಾಸಿಪ್ ಅನ್ನು ನಟಿ ಹರಿಪ್ರಿಯಾ ಸರಿಯಾದ ರೀತಿಯಲ್ಲಿ ಬಳಸಿಕೊಂಡರು ಎಂದು ಶ್ಲಾಘಿಸಿದ್ದಾರೆ.


Click it and Unblock the Notifications











