"ಶೆಡ್ಡಿಗಲ್ಲ ಕಣೋ ಸ್ಟುಡಿಯೋಗೆ"; ಬಹುಭಾಷಾ ನಟ ಪ್ರಕಾಶ್ ರಾಜ್ ಕಾಮೆಂಟ್ ವೈರಲ್
ವಿಚಿತ್ರ ಕಾರಣಕ್ಕೆ ಬೆಂಗಳೂರಿನ ಪಟ್ಟಣಗೆರೆ ಶೆಡ್ ಕುಖ್ಯಾತಿ ಪಡೆದಿದೆ. ರೇಣುಕಾಸ್ವಾಮಿಯನ್ನು ಇಲ್ಲೇ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಜೈಲು ಸೇರುವಂತಾಗಿದೆ. ವಿಚಾರಣಾಧೀನ ಖೈದಿಗಳಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ಆತನನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ನಟ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಆರೋಪಿಗಳು ಬೆಂಗಳೂರಿಗೆ ಕರೆ ತಂದಿದ್ದರು ಎಂದು ಹೇಳಲಾಗುತ್ತಿದೆ. ಆರೋಪಿಗಳ ಪೈಕಿ ಒಬ್ಬನಾದ ವಿನಯ್ ಸೋದರ ಮಾವನ ಒಡೆತನದ ಶೆಡ್ ಅದು.

ಪ್ರಕರಣದ ಬಳಿಕ ಶೆಡ್ ಅಂದ್ರೆ ಜನ ಹೆದರುವಂತಾಗಿದೆ. ಇತ್ತೀಚೆಗಷ್ಟೇ ಪವಿತ್ರಾ ಗೌಡಳ ಸಹೋದರ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಮಾಧ್ಯಮ ಛಾಯಾಗ್ರಾಹಕರನ್ನು ಉದ್ದೇಶಿಸಿ ನಿಮ್ಗೆ ಮಾಡೋದಿಕ್ಕೇನು ಕೆಲಸವಿಲ್ವಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಸುದ್ದಿವಾಹಿನಿ ನಿರೂಪಕರೊಬ್ಬರು "ನಮ್ಗೆ ಕೆಲ್ಸ ಇಲ್ಲ.. ಬಾ ಶೆಡ್‌ಗೆ.. ಕುಂಟೆಬಿಲ್ಲೆ ಆಡೋಣ ಬಾ" ಎಂದು ತಿರುಗೇಟು ನೀಡಿದ್ದರು. ಅಲ್ಲಿಂದ ಮುಂದೆ ಈ ಶೆಡ್ ಎನ್ನುವ ಪದ ಮತ್ತಷ್ಟು ವೈರಲ್ ಆಗಿತ್ತು.
ಸಾಕಷ್ಟು ಜನ ಈ ಸಾಲುಗಳನ್ನು ಬಳಸಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ಹಾಡುಗಳು ವೈರಲ್ ಆಗುತ್ತಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆಯ ಬಳಿಕ ಆ ಜಾಗದ ಬಗ್ಗೆ ಸಾಕಷ್ಟು ಮೀಮ್ಸ್ ವೈರಲ್ ಆಗುತ್ತಿದೆ. ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಸಾಕಷ್ಟು ಜನ ಇದನ್ನು ಸರ್ಚ್ ಮಾಡಿ ನೋಡುತ್ತಿದ್ದಾರೆ. ನೆಟ್ಟಿಗರು ಈ ಶೆಡ್‌ಗೆ 4.6 ಸ್ಟಾರ್ ನೀಡಿದ್ದಾರೆ.
ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ "ಶೆಡ್ಡಿಗಲ್ಲ ಕಣೋ ಸ್ಟುಡಿಯೋಗೆ" ಎಂದು ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ. ಅಷ್ಟರಮಟ್ಟಿಗೆ ಶೆಡ್ ಎನ್ನುವ ಪದ ಸದ್ದು ಮಾಡ್ತಿದೆ. ಮೈಸೂರಿನಲ್ಲಿ ಆರ್. ಚಂದ್ರು ನಿರ್ಮಾಣದ 'ಫಾದರ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಪ್ರಕಾಶ್ ರಾಜ್ ಜೊತೆಗೆ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. ನಿರ್ದೇಶಕ ರಾಜ್ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇತ್ತೀಚೆಗೆ ನಿರ್ದಿಗಂತ ರಂಗಶಾಲೆ ಬಳಿ ಕೆಲವರು ನಟ ಪ್ರಕಾಶ್ ರಾಜ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಅಭಿಮಾನಿ ಜೊತೆ ಫೋಟೊ ತೆಗೆಸಿಕೊಂಡ ಬಳಿಕ ಪ್ರಕಾಶ್ ರಾಜ್ "ಬಾ ಸ್ಟುಡಿಯೋಗೆ ಹೋಗೋಣ. ಶೆಡ್ಡಿಗಲ್ಲ ಕಣೋ ಸ್ಟುಡಿಯೋಗೆ" ಎಂದು ಹೇಳಿ ನಕ್ಕಿದ್ದಾರೆ.
ಇನ್ನು 'ಫಾದರ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ದರ್ಶನ್ ಪ್ರಕರಣದ ಬಗ್ಗೆ ನಟ ಪ್ರಕಾಶ್ ರಾಜ್‌ಗೆ ಪ್ರಶ್ನೆ ಎದುರಾಗಿತ್ತು. ಆದರೆ ನೇರವಾಗಿ ಪ್ರತಿಕ್ರಿಯಿಸದ ನಟ, ಇದೊಂದೇ ಘಟನೆ ಅಲ್ಲ. ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುವುದು ಇದೆ ಎಂದು ಹೇಳಿ ಸುಮ್ಮನಾಗಿದ್ದರು.
"ದರ್ಶನ್ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತಾಡಿದ್ರೆ ಪ್ರಯೋಜನವಿಲ್ಲ. ಒಂದೂವರೆ ತಿಂಗಳಿನಿಂದ ಈ ಘಟನೆ ಬಗ್ಗೆ ಎಲ್ಲರೂ ಮಾತಾಡಿದ್ದಾರೆ. ನಾನು ಬೇರೆ ವಿಚಾರದ ಬಗ್ಗೆ ಮಾತಾಡ್ತೀನಿ, ನಾವು ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಮಾತಾಡೋಣ. ಆಟೋ ಡ್ರೈವರ್ ಸಮಸ್ಯೆಗಳ ಕುರಿತು ಚರ್ಚಿಸೋಣ. ಅಂಗನವಾಡಿ ಕಾರ್ಯಕರ್ತೆಯರ ಸಂಬಳದ ಬಗ್ಗೆ ಕೂಡ ಡಿಸ್ಕಸ್ ಮಾಡೋಣ. ಯಾಕೆ ಯಾವಾಗಲೂ ಒಂದೇ ವಿಷಯದ ಬಗ್ಗೆ ಮಾತಾಡೋದು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದರು.
ಸೋಷಿಯಲ್ ಮೀಡಿಯಾವನ್ನು ತಪ್ಪಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ್ದ ಪ್ರಕಾಶ್ ರಾಜ್ "ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದು ಇರುತ್ತೆ. ನಾವು ಒಳ್ಳೆಯದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದರ ಬಗ್ಗೆ ಬಹಳ ಯೋಚನೆ ಮಾಡಬಾರದು" ಎಂದು ಹೇಳಿದ್ದರು.


Click it and Unblock the Notifications











