'ಕಾಂತಾರ'-'ಡೆವಿಲ್', '45', 'KD' ಬಿಟ್ಹಾಕಿ; ಈ 5 ಕನ್ನಡ ಚಿತ್ರಗಳ ಮೇಲೆ ಸಿನಿರಸಿಕರ ಕಣ್ಣು
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಈ ವರ್ಷವೇ ತೆರೆಗೆ ಬರುತ್ತದೆ ಎಂದುಕೊಂಡವರಿಗೆ ಈಗಾಗಲೇ ಶಾಕ್ ಆಗಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ಪೋಸ್ಟ್‌ಪೋನ್ ಆಗಿದೆ. ಹಾಗಾಗಿ ಈ ವರ್ಷ ಕನ್ನಡದ ದೊಡ್ಡ ಸಿನಿಮಾ ಅಂದರೆ 'ಕಾಂತಾರ-1' ಎನ್ನುವಂತಾಗಿದೆ. 'ಕೆಡಿ', 'ಡೆವಿಲ್' ಹಾಗೂ '45' ಚಿತ್ರಗಳು ನಿರೀಕ್ಷೆ ಮೂಡಿಸಿವೆ. ಸದ್ಯಕ್ಕೆ ಇವೇ ಕನ್ನಡದ ಬಹುನಿರೀಕ್ಷಿತ ಚಿತ್ರಗಳು.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಕನ್ನಡ ಫಿಲ್ಮ್ ಮೇಕರ್ಸ್ ಕೂಡ ದೊಡ್ಡ ದೊಡ್ಡ ಕನಸು ಕಾಣಲು ಮುಂದಾಗಿದ್ದಾರೆ. 'KGF' ಸರಣಿ ಹಾಗೂ 'ಕಾಂತಾರ' ಅದಕ್ಕೆ ಮತ್ತಷ್ಟು ಬಲ ತುಂಬಿದೆ. ಆದರೆ 200, 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುವ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಇನ್ನು ಕಮ್ಮಿ ಇದೆ. 'ಟಾಕ್ಸಿಕ್' ಆ ದಿಶೆಯಲ್ಲಿ ಇತಿಹಾಸ ನಿರ್ಮಿಸಲು ಮುಂದಾಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಸಂಸ್ಥೆಗಳು ಜಂಟಿಯಾಗಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡ್ತಿವೆ. ಸಿನಿಮಾ ಬಜೆಟ್ 300 ಕೋಟಿ ರೂ.ಗೂ ಅಧಿಕ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
'ಕಾಂತಾರ' ಪ್ರೀಕ್ವೆಲ್ ಕೂಡ ಬಹಳ ಕುತೂಹಲ ಮೂಡಿಸಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕಾಗಿ ಹೊಸ ಪ್ರಪಂಚವನ್ನೆ ನಿರ್ಮಾಣ ಮಾಡಲಾಗಿದೆ. ಅಕ್ಟೋಬರ್ ಮೊದಲ ವಾರ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮತ್ತೊಮ್ಮೆ ರಿಷಬ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸುತ್ತಿದ್ದಾರೆ.

ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಮಲ್ಟಿಸ್ಟಾರರ್ '45' ಸಿನಿಮಾ ಕೂಡ ಸಖತ್ ಸದ್ದು ಮಾಡ್ತಿದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ವರ್ಷ ಸಿನಿಮಾ ಬಿಡುಗಡೆ ಮಾಡಲು ಲೆಕ್ಕಾಚಾರ ನಡೀತಿದೆ. ಇತ್ತೀಚೆಗೆ ಮೈಸೂರಿನಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಚಿತ್ರತಂಡ ರಾಜಸ್ಥಾನಕ್ಕೆ ಹೋಗಿದೆ. ಅಲ್ಲಿ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ಮಿಲನಾ ಪ್ರಕಾಶ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ವರ್ಷಾಂತ್ಯಕ್ಕೆ ತೆರೆಗಪ್ಪಳಿಸುವ ಸುಳಿವು ಸಿಕ್ತಿದೆ.
ಜೋಗಿ ಪ್ರೇಮ್ ನಿರ್ದೇಶನದ 'KD' ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರವಿಚಂದ್ರನ್, ಸಂಜಯ್ ದತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗ್ತಿದೆ.
'ಕಾಂತಾರ-1', 'ಡೆವಿಲ್', 'KD', '45' ಇವು ನಾಲ್ಕು ಸಿನಿಮಾಗಳು ದೊಡ್ಡ ಸಿನಿಮಾಗಳು. ಸ್ಟಾರ್ ನಟರಿದ್ದಾರೆ. ಭಾರೀ ಬಂಡವಾಳ ಹಾಕಿದ್ದಾರೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ. ಆದರೆ ಈ 4 ಸಿನಿಮಾಗಳನ್ನು ಬಿಟ್ಟು ಕೆಲ ಚಿತ್ರಗಳು ಸದ್ದಿಲ್ಲದೇ ಬಂದು ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ.
ಎಕ್ಕ
ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ 'ಎಕ್ಕ'. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದೊಂದು ರಗಡ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.
ಮೊದಲ ಚಿತ್ರದಲ್ಲಿ ಅಣ್ಣಾವ್ರ ಮೊಮ್ಮಗ ಭೇಷ್ ಎನಿಸಿಕೊಂಡಿದ್ದರು. ಡ್ಯಾನ್ಸ್, ಫೈಟ್ಸ್ ಮೂಲಕ ಕಮಾಲ್ ಮಾಡಿದ್ದರು. ಹಾಗಾಗಿ ಸಹಜವಾಗಿಯೇ 'ಎಕ್ಕ' ಸಿನಿಮಾ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡ್ತಿದ್ದು ಆಲ್ಬಮ್ ಬಗ್ಗೆ ಕೂಡ ಬಹಳ ನಿರೀಕ್ಷೆ ಇದೆ.
ಸಿಟಿ ಲೈಟ್ಸ್
ದುನಿಯಾ ವಿಜಯ್ ನಿರ್ದೇಶನದ ಹ್ಯಾಟ್ರಿಕ್ ಸಿನಿಮಾ 'ಸಿಟಿ ಲೈಟ್ಸ್'. ಈ ಹಿಂದೆ 'ಸಲಗ' ಹಾಗೂ 'ಭೀಮ' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ, ನಟಿಸಿ ವಿಜಯ್ ಸಕ್ಸಸ್ ಕಂಡಿದ್ದರು. ಆದರೆ ಈ ಬಾರಿ ನಿರ್ದೇಶನದ ಜವಾಬ್ದಾರಿ ಮಾತ್ರ ವಹಿಸಿಕೊಂಡಿದ್ದಾರೆ. ವಿನಯ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಪುತ್ರಿ ಮೋನಿಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಬಿಡುಗಡೆ ಆಗಿ ಗಮನ ಸೆಳೆದಿದೆ.
Your's Sincerely ರಾಮ್
'ಪುಷ್ಪಕ ವಿಮಾನ', 'ಇನ್ಸ್‌ಪೆಕ್ಟರ್ ವಿಕ್ರಮ್' ಹಾಗೂ 'ಮಾನ್ಸೂನ್ ರಾಗ' ಸಿನಿಮಾಗಳ ನಿರ್ಮಾಪಕ ವಿಖ್ಯಾತ್ ನಿರ್ದೇಶನದ ಚೊಚ್ಚಲ ಸಿನಿಮಾ 'Your's Sincerely ರಾಮ್'. ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ ನಟಿಸಿರೋದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್‌ನಡಿ ಸತ್ಯ ರಾಯಲ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. 'ಕೃಷ್ಣಂ ಪ್ರಣಯಸಖಿ' ಬಳಿಕ ಗಣೇಶ್ ನಟನೆಯ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ.
ಕರಾವಳಿ
ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾ ಬಹಳ ದಿನಗಳಲ್ಲಿ ಗಮನ ಸೆಳೆದಿದೆ. ಗುರುದತ್ ಗಾಣಿಗ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಾವಳಿ ಭಾಗದ ಕಂಬಳ ಓಟದ ಸ್ಪರ್ಧೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಸ್ವತಃ ಪ್ರಜ್ವಲ್ ಕಂಬಳ ಓಟದ ತರಬೇತಿ ಪಡೆದು ನಟಿಸಿದ್ದಾರೆ. ಕಳೆದ ವರ್ಷವೇ ಸಿನಿಮಾ ತೆರೆಗೆ ಬರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.
ಲ್ಯಾಂಡ್ ಲಾರ್ಡ್
'ಸಿಟಿ ಲೈಟ್ಸ್' ಚಿತ್ರದಲ್ಲಿ ನಟಿಸುವುದರ ಜೊತೆಗೆ ದುನಿಯಾ ವಿಜಯ್ 'ಲ್ಯಾಂಡ್ ಲಾರ್ಡ್' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಜಂಟಲ್‌ಮನ್' ಹಾಗೂ 'ಗುರುಶಿಷ್ಯರು' ಸಿನಿಮಾಗಳ ಖ್ಯಾತಿಯ ಜಡೇಶ್ ಹಂಪಿ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ದರ್ಶನ್ ನಟಿಸಿದ 'ಕಾಟೇರ' ಚಿತ್ರಕ್ಕೆ ಜಡೇಶ್ ಕಥೆ ಕೊಟ್ಟಿದ್ದರು. ಹಾಗಾಗಿ ಸಹಜವಾಗಿಯೇ 'ಲ್ಯಾಂಡ್ ಲಾರ್ಡ್' ಸಿನಿಮಾ ಹೈಪ್ ಕ್ರಿಯೇಟ್ ಮಾಡುತ್ತಿದೆ. ಇತ್ತೀಚೆಗೆ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಬಂದಿದ್ದ ಪೋಸ್ಟರ್ ವೈರಲ್ ಆಗಿತ್ತು.
ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷ ಆರಂಭ ಚೆನ್ನಾಗಿ ಇರಲಿಲ್ಲ. ಆದರೆ ಬಳಿಕ ಚಿತ್ರರಂಗ ಚೇತರಿಸಿಕೊಂಡಿತ್ತು. 'ಕೃಷ್ಣಂ ಪ್ರಣಯಸಖಿ', ಭೀಮ', 'ಬಘೀರ', 'ಭೈರತಿ ರಣಗಲ್', 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ಗೆದ್ದು ಸಮಾಧಾನ ತಂದಿದ್ದವು. ಈ ವರ್ಷ ಕೂಡ ಮೊದಲ 3 ತಿಂಗಳ ಸ್ಯಾಂಡಲ್‌ವುಡ್ ಸಾಧನೆ ಹೇಳಿಕೊಳ್ಳುವಂತಿಲ್ಲ.
ಬರೀ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಂಬಿಕೊಂಡರೆ ಆಗುವುದಿಲ್ಲ. ಸ್ಟಾರ್ ನಟರ ಎಲ್ಲಾ ಸಿನಿಮಾಗಳು 5 ಆ ಭಾಷೆಗಳಲ್ಲಿ ಸದ್ದು ಮಾಡಲ್ಲ. ಕನ್ನಡಕ್ಕಂತಲೇ ಒಂದಷ್ಟು ಸಿನಿಮಾಗಳನ್ನು ಮಾಡಬೇಕಿದೆ. ಅದನ್ನು ಪ್ರೇಕ್ಷಕರು ನೋಡಿ ಗೆಲ್ಲಿಸಬೇಕಿದೆ. ಆಗ ಮಾತ್ರ ಚಿತ್ರರಂಗದ ಬೆಳವಣಿಗೆ ಸಾಧ್ಯ.


Click it and Unblock the Notifications











