ನೊಟೀಸ್ ಬಂದಿಲ್ಲ, ಕಿಶೋರ್ ಶೆಟ್ಟಿ ಹಳೆ ಪರಿಚಯ: ಅನುಶ್ರೀ
ನಟಿ, ನಿರೂಪಕಿ ಅನುಶ್ರೀಗೆ ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಂದ ನೊಟೀಸ್ ಬಂದಿದೆ ಎಂಬ ಸುದ್ದಿ ಹರಿದಾಡಿದ್ದು, ಈ ಬಗ್ಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಅನುಶ್ರೀ, 'ನನಗೆ ಯಾವುದೇ ನೊಟೀಸ್ ಬಂದಿಲ್ಲ, ಡ್ರಗ್ಸ್ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ, ಒಂದೊಮ್ಮೆ ನೊಟೀಸ್ ಕೊಟ್ಟರೆ ವಿಚಾರಣೆ ಹೋಗುತ್ತೀನಿ' ಎಂದಿದ್ದಾರೆ.
ನೃತ್ಯ ನಿರ್ದೇಶಕ, ನಟ ಕಿಶೋರ್ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ಆತನಿಂದ ಕೊಕೆನ್ ವಶಪಡಿಸಿಕೊಳ್ಳಲಾಗಿತ್ತು, ಆತ ಅನುಶ್ರೀಗೆ ಆಪ್ತ ಎನ್ನುವ ಸುದ್ದಿಗಳು ಆಗಲೇ ಹರಿದಾಡಿದ್ದವು, ಅಂತೆಯೇ ಇಂದು ಅನುಶ್ರೀಗೆ ನೊಟೀಸ್ ನೀಡಿರುವ ಸುದ್ದಿ ಬಂದಿದೆ.

ಕಿಶೋರ್ ಆಪ್ತ ತರುಣ್ ಎಂಬಾತ ನೀಡಿರುವ ಹೇಳಿಕೆ ಮೇರೆಗೆ ಮಂಗಳೂರು ಪೊಲೀಸರು ಅನುಶ್ರೀಗೆ ನೊಟೀಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಕಿಶೋರ್ ಜೊತೆ ಸ್ನೇಹವನ್ನು ಅಲ್ಲಗಳೆದಿರುವ ಅನುಶ್ರೀ, 'ಕಿಶೋರ್ ಶೆಟ್ಟಿ ನನಗೆ ಹಳೆಯ ಪರಿಚಯ, ಆಪ್ತನಲ್ಲ, ಆತನೊಂದಿಗೆ ಯಾವುದೇ ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ, ಆತನೊಂದಿಗೆ ಮಾತನಾಡಿ ವರ್ಷಗಳೇ ಆಗಿಬಿಟ್ಟಿವೆ' ಎಂದಿದ್ದಾರೆ.
ಮಂಗಳೂರಿನ ಸಿಸಿಬಿ ಪೊಲೀಸರು ಅನುಶ್ರೀ ಮತ್ತು ಇನ್ನಿಬ್ಬರಿಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











