»   » ದ್ವಾರಕೀಶ್, ಮಾಲಾಶ್ರೀಗೆ ಎನ್‌ಟಿಆರ್ ಪುರಸ್ಕಾರ

ದ್ವಾರಕೀಶ್, ಮಾಲಾಶ್ರೀಗೆ ಎನ್‌ಟಿಆರ್ ಪುರಸ್ಕಾರ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಹಾಗೂ ತ್ರಿಭಾಷಾ ತಾರೆ ಮಾಲಾಶ್ರೀ ಅವರು ಈ ಬಾರಿಯ ಡಾ.ಎನ್.ಟಿ.ಆರ್ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ತೆಲುಗು ಅಕಾಡೆಮಿಯು ಈ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರತಿವರ್ಷ ನೀಡಿ ಗೌರವಿಸುತ್ತಿದೆ.

ಕರ್ನಾಟಕ ತೆಲುಗು ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಸಿ.ವಿ. ಶ್ರೀನಿವಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಕನ್ನಡ ಮತ್ತು ತೆಲುಗು ಭಾಷೆಗಳ ಸೌಹಾರ್ದದ ಉದ್ದೇಶದಿಂದ ಅಕಾಡೆಮಿಯು ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದರು.

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡಿದವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೂನ್ 4ರಂದು ಈ ಪ್ರಶಸ್ತಿಯನ್ನು ಸಂಜೆ 5.30ಕ್ಕೆ ಭಾರತೀಯ ವಿದ್ಯಾಭವನದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಶ್ರೀನಿವಾಸ್ ವಿವರ ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸಚಿವ ವಿ. ಸೋಮಣ್ಣ ಭಾಗವಹಿಸಲಿದ್ದಾರೆ. ಮಾಜಿ ಸಚಿವರಾದ ಎಂ ರಘುಪತಿ ಪ್ರಶಸ್ತಿ ಪ್ರದಾನ ಮಾಡುವರು. ಈ ಸಂದರ್ಭದಲ್ಲಿ ಅಕಾಡೆಮಿ ಅಧಕ್ಷ ಡಾ.ಎ.ರಾಧಾಕೃಷ್ಣನ್ ಅವರು ಉಪಸ್ಥಿತರಿದ್ದರು.

ಈ ಹಿಂದೆ ಎನ್‌ಟಿಆರ್ ಪುರಸ್ಕಾರ ಹಿರಿಯ ಕಲಾವಿದೆ ಉಮಾಶ್ರೀ ಹಾಗೂ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನೀಡಿ ಗೌರವಿಸಲಾಗಿತ್ತು. ಈ ಬಾರಿಯ ಪ್ರಶಸ್ತಿ ಮಾಲಾಶ್ರೀ ಹಾಗೂ ದ್ವಾರಕೀಶ್ ಅವರಿಗೆ ನೀಡಿ ಗೌರವಿಸುತ್ತಿರುವುದು ವಿಶೇಷ.

ಮಾಲಾಶ್ರೀ ಅವರ ಆಕ್ಷನ್ ಪ್ರಧಾನ 'ಶಕ್ತಿ' ಚಿತ್ರವು ಶತದಿನೋತ್ಸವ ಆಚರಿಸಿಕೊಂಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಚಿತ್ರವೂ ಅವರಿಗೆ ಮತ್ತಷ್ಟು ಆರ್ಥಿಕ ಶಕ್ತಿಯನ್ನು ತುಂಬಿದೆ. ಈ ಸಂದರ್ಭದಲ್ಲಿ ಇಬ್ಬರಿಗೂ ಎನ್‌ಟಿಆರ್ ಪುರಸ್ಕಾರ ಮತ್ತಷ್ಟು ಶಕ್ತಿ ತುಂಬುತ್ತಿದೆ.

ಗೃಹಿಣಿ, ಎರಡು ಮಕ್ಕಳ ತಾಯಿಯಾಗಿರುವ ಮಾಲಾಶ್ರೀ ಅಭಿನಯದ 'ಶಕ್ತಿ' ಚಿತ್ರ ಗಾಂಧಿನಗರ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಚಿತ್ರದ ಗಳಿಕೆ ಎಲ್ಲರ ನಿರೀಕ್ಷೆಗಳನ್ನೂ ಉಲ್ಟಾ ಪಲ್ಟಾ ಮಾಡಿದೆ. ಮುಂಬೈ ಕರ್ನಾಟಕ, ಚಿತ್ರದುರ್ಗ, ಬಳ್ಳಾರಿ, ಹೈದರಾಬಾದ್ ಕರ್ನಾಟಕ ಮತ್ತು ಮಂಗಳೂರಿನಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. (ಒನ್‌ಇಂಡಿಯಾ ಕನ್ನಡ)

English summary
Kannada films actor, producer and actor Dwarakish and actress Malashri have been chosen for this year's NTR Puraskar by the Karnataka Telugu Academy. The award had been instituted by the academy in association with the NTR Fans' Association and other Telugu cultural organisations.
Please Wait while comments are loading...