ಪ್ರಭಾಸ್- ತಾರಕ್ ಫ್ಯಾನ್ಸ್ ಮಧ್ಯೆ ತಗ್ಲಾಕಿಕೊಂಡು ಪ್ರಶಾಂತ್ ನೀಲ್ ಫಜೀತಿ!
ಸ್ಟಾರ್ ನಟರಿಗೆ ಅಭಿಮಾನಿಗಳು ಹೆಚ್ಚು. ಆ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರಿಗಾಗಿ ಸ್ಟಾರ್ಸ್ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಂದರ್ಭಗಳು ಬಂದುಬಿಡುತ್ತವೆ. ಒಂದರ್ಥದಲ್ಲಿ ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಹತೋಟಿಗೆ ತೆಗೆದುಕೊಂಡಂತೆ. ಇದಕ್ಕೆ ಸೋಶಿಯಲ್ ಮೀಡಿಯಾ ವೇದಿಕೆ ಸಿಕ್ಕಿ ಮತ್ತಷ್ಟು ಬಲ ಬಂದಂತೆ ಆಗಿದೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ನಟರು ಕೆಲಸ ಮಾಡುವಂತಾಗುತ್ತಿದೆ.
ಇತ್ತೀಚೆಗೆ 'ಮ್ಯಾಕ್ಸ್' ಸಿನಿಮಾ ಅಪ್‌ಡೇಟ್ ಬೇಕು ಎಂದು ಅಭಿಮಾನಿಗಳ ಒತ್ತಡ ಹೆಚ್ಚಾದಾಗ ನಟ ದರ್ಶನ್ ಸುದೀಪ್ ಪ್ರತಿಕ್ರಿಯಿಸಬೇಕಾಯಿತು. "ಬೇರೆ ನಟರ ಸಿನಿಮಾಗಳು ಬಿಡುಗಡೆ ಆಗಿದೆ ಎಂದು ಅಥವಾ ಬೇರೆ ನಟರಿಗೆ ಪೈಪೋಟಿ ಕೊಡಬೇಕೆಂದು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ" ಎಂದಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ಪ್ರಭಾಸ್ ಫ್ಯಾನ್ಸ್ ಹಾಗೂ ತಾರಕ್ ಫ್ಯಾನ್ಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಈ ಸಿನಿಮಾ ಬಳಿಕ ಯಂಗ್ ರೆಬಲ್ ಸ್ಟಾರ್ ನಟನೆಯ 'ರಾಜಾಸಾಬ್' ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ಯಾವ ಸಿನಿಮಾ? ಎನ್ನುವ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ 'ದೇವರ' ನಂತರ ಜ್ಯೂ. ಎನ್‌ಟಿಆರ್ ಯಾವ ಚಿತ್ರಕ್ಕೆ ಬಣ್ಣ ಹಚ್ಚುತ್ತಾರೆ? ಎನ್ನುವ ಪ್ರಶ್ನೆ ಮೂಡಿದೆ.
ತಾರಕ್ ಕಾಂಬಿನೇಷನ್‌ನಲ್ಲಿ ಒಂದು ಚಿತ್ರವನ್ನು ಪ್ರಶಾಂತ್ ನೀಲ್ ಪ್ಲ್ಯಾನ್ ಮಾಡಿದ್ದಾರೆ. ಮತ್ತೊಂದು ಕಡೆ ಪ್ರಭಾಸ್ ಜೊತೆ 'ಸಲಾರ್-2' ಮಾಡಬೇಕಿದೆ. ಇವೆರಡರಲ್ಲಿ ಯಾವ ಸಿನಿಮಾ ಮೊದಲು ಶುರುವಾಗ ಪ್ರೇಕ್ಷಕರ ಮುಂದೆ ಬರುತ್ತದೆ? ಎನ್ನುವ ಚರ್ಚೆ ತಾರಕಕ್ಕೇರಿದೆ. ಇದೇ ಕಾರಣಕ್ಕೆ ಪ್ರಭಾಸ್- ತಾರಕ್ ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕದನ ಏರ್ಪಟ್ಟಿದೆ.
ಸದ್ಯ ಪ್ರಶಾಂತ್ ನೀಲ್ ಮೊದಲು ಯಾರೊಟ್ಟಿಗೆ ಸಿನಿಮಾ ಮಾಡ್ತಾರೆ ಎನ್ನುವುದೇ ಸಸ್ಪೆನ್ಸ್. ಆದರೆ ಅಭಿಮಾನಿಗಳು ಮಾತ್ರ ನಮ್ಮ ಹೀರೊ ಜೊತೆ ಸಿನಿಮಾ ಮಾಡಿ ಎಂದು ಹಠ ಮಾಡುತ್ತಿದ್ದಾರೆ. ನೀಲ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಶೀಘ್ರದಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿ 'ಸಲಾರ್-2' ಸಿನಿಮಾ ಶುರು ಎಂದು ಹೇಳಿದ್ದಾರೆ. ಮತ್ತೊಂದು ಕಡೆ ಆಗಸ್ಟ್‌ನಲ್ಲಿ NTR31 ಆರಂಭ ಎಂದು ಮೈತ್ರಿ ಮೂವಿಮೇಕರ್ಸ್ ಘೋಷಿಸಿದ್ದಾರೆ.

ಆಗಸ್ಟ್ 10ಕ್ಕೆ 'ಸಲಾರ್-2' ಪ್ರಭಾಸ್ ಭಾಗವಹಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನು ಕೇಳಿ ತಾರಕ್ ಫ್ಯಾನ್ಸ್ ಬೇರಸಗೊಂಡಿದ್ದಾರೆ. ಆಗಸ್ಟ್‌ನಲ್ಲಿ NTR31 ಶುರು ಎಂದು ನಿರ್ಮಾಪಕರು ಹೇಳಿದ್ದರು. ಅದು ಹೇಗೆ 'ಸಲಾರ್-2' ಮಾಡೋಕೆ ಸಾಧ್ಯ ಎಂದು ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರಶಾಂತ್ ನೀಲ್ ಕ್ರೇಜ್ ಅಂದ್ರೆ ತಪ್ಪಾಗಲ್ಲ. 'KGF' ಸರಣಿಯಿಂದ ಏಕಾಏಕಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನೀಲ್ ಗಮನ ಸೆಳೆದರು.
ಪ್ರಶಾಂತ್ ನೀಲ್ ಸಿನಿಮಾಗಳು ಭಾರೀ ಕ್ರೇಜ್ ಹುಟ್ಟುಹಾಕುತ್ತಿದೆ. ನೀಲ್ ಟೇಕಿಂಗ್, ಮೇಕಿಂಗ್, ಎಲಿವೇಷನ್ ಸೀನ್ಸ್ ನೋಡಿದವರು ಥ್ರಿಲ್ಲಾಗುತ್ತಿದ್ದಾರೆ. 'ಸಲಾರ್'-1 ಚಿತ್ರದಲ್ಲೂ ಅದು ರುಜುವಾತಾಗಿದೆ. ಸೀಕ್ವೆಲ್ ಅದಕ್ಕಿಂತ ಹಲವು ಪಟ್ಟು ರೋಚಕವಾಗಿ ಇರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಪ್ರಭಾಸ್ ಫ್ಯಾನ್ಸ್ 'ಸಲಾರ್'-2 ನೋಡಲು ಉತ್ಸುಕರಾಗಿದ್ದು ಬೇಗ ಸಿನಿಮಾ ಮಾಡಿ ಎನ್ನುತ್ತಿದ್ದಾರೆ.
ಮತ್ತೊಂದು ಕಡೆ ತಾರಕ್- ನೀಲ್ ಕಾಂಬಿನೇಷನ್ ಕೂಡ ಇನ್ನಿಲ್ಲದ ಕುತೂಹಲ ಮೂಡಿಸಿದೆ. 'RRR' ಬಳಿಕ ಜ್ಯೂ. ಎನ್‌ಟಿಆರ್ ನಟಿಸಿದ ಯಾವುದೇ ಸಿನಿಮಾ ಬಂದಿಲ್ಲ. 'ದೇವರ' ಸಿನಿಮಾ ಸೆಪ್ಟೆಂಬರ್‌ನಲ್ಲಿ ಬರಲಿದೆ. ಆ ಬಳಿಕ 'ದೇವರ'-2 ಪ್ಲ್ಯಾನ್ ಮಾಡುತ್ತಿದ್ದಾರೆ. ಕೊರೋನಾ ಹಾವಳಿಯಿಂದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾಗಳು ತಡವಾಗುವಂತಾಯಿತು. NTR31 ಸಿನಿಮಾ ಘೋಷಣೆ ಆಗಿ ಬಹಳ ದಿನಗಳಾಯಿತು. ಇನ್ನು ಎಷ್ಟು ವರ್ಷ ಎಂದು ಫ್ಯಾನ್ಸ್ ಬೇಸರಗೊಂಡಿದ್ದಾರೆ.
ಒಂದು ವೇಳೆ 'ಸಲಾರ್-2' ಶುರುವಾಗಿ ತಾರಕ್ 'ದೇವರ'-2 ಕಡೆ ಮುಖ ಮಾಡಿದರೆ NTR31 ಮತ್ತಷ್ಟು ತಡವಾಗುತ್ತದೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಕಡಿಮೆ ಅಂದ್ರು 2 ವರ್ಷ ಸಮಯ ತೆಗೆದುಕೊಳ್ಳುತ್ತಿವೆ. ನಾನು ನೀಲ್- ತಾರಕ್ ಸಿನಿಮಾ ಬೇಗ ನೋಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಯಾವ ಸಿನಿಮಾ ಮೊದಲು? ಎನ್ನುವ ಗೊಂದಲ ಟಾಲಿವುಡ್‌ನಲ್ಲಿ ಶುರುವಾಗಿದೆ.


Click it and Unblock the Notifications











