ಸಂಸದೆಯಾಗಿ ಗೆದ್ದ ಒಂದೇ ತಿಂಗಳಲ್ಲಿ ಸಪ್ತಪದಿ ತುಳಿದ ನಟಿ
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ನೂತನ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಸದೆಯಾಗಿ ಗೆದ್ದು ಒಂದು ತಿಂಗಳು ಪೂರ್ಣವಾಗಿಲ್ಲ. ಅಷ್ಟರಲ್ಲೇ ಪ್ರಿಯಕರನ ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ.
ಹೌದು, ಟಿಎಂಸಿ ಪಕ್ಷದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಸಂಸದೆಯಾಗಿರುವ ನುಸ್ರತ್ ಜಹಾನ್ ಬುಧವಾರ ಕೊಲ್ಕತ್ತ ಮೂಲದ ಉದ್ಯಮಿ ನಿಖಿಲ್ ಜೈನ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಈ ಸುದ್ದಿಯನ್ನ ನಟಿ ನುಸ್ರತ್ ಗುರುವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಟರ್ಕಿ ಪಟ್ಟಣದ ಬೋಡ್ರಮ್ ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಕೇವಲ ಕುಟುಂಬದವರು ಮತ್ತು ಬಂಧು ಮಿತ್ರರು ಮಾತ್ರ ಭಾಗಿಯಾಗಿದ್ದರು. ಕಳೆದ ಎರಡು ವಾರದ ಹಿಂದೆಯಷ್ಟೇ ಎಂಗೇಜ್ ಮೆಂಟ್ ಆಗಿದ್ದರ ಬಗ್ಗೆ ಫೋಟೋ ಶೇರ್ ಮಾಡಿದ್ದರು.

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೊದಲ ಅವಧಿಯಲ್ಲೇ ಗೆದ್ದು ಸಂಸತ್ ಪ್ರವೇಶಿಸಿದ ನುಸ್ರತ್ ಜಹಾನ್, ಸಂಸತ್ ಮುಂದೆ ನಿಂತು ಫೋಟೋ ಹಾಕಿದ್ದಕ್ಕೆ ಟ್ರೋಲ್ ಆಗಿದ್ದರು.
ಅಂದ್ಹಾಗೆ, ನುಸ್ರತ್ ಜಹಾನ್ ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ಬಿಡುಗಡೆಯಾಗಿದ್ದ ಶೋತ್ರು ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನುಸ್ರುತ್, ಖೋಕಾ 420, ಖಿಲಾಡಿ, ಪವರ್, ಲವ್ ಎಕ್ಸ್ ಪ್ರೆಸ್, ಉಮಾ, ನಕಾಬ್, ಸೆವೆನ್ ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











