ಕರಾವಳಿ ಚೆಲುವೆಗೆ ಅವಮಾನ ಮಾಡಿದ "OG'', ಮೌನ ಮುರಿದು ತಿರುಗೇಟು ಕೊಡ್ತಾರಾ ಕನ್ನಡತಿ ?
ಕೆಲವರ ನಸೀಬೇ ಹಾಗೆ..! ಅದೆಷ್ಟೇ ಅಲೆದಾಡಿದರೂ ಅದೃಷ್ಟ ಎಂಬ ಮಾಯೆ ಒಲಿಯುವುದೇ ಇಲ್ಲ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಗೆಲುವು ಸಿಗುವುದೇ ಇಲ್ಲ. ಹಾಗಂಥ.. ಇವರಲ್ಲಿ ಪ್ರತಿಭೆ ಇರಲ್ಲ ಅಂತಾನೂ ಅಲ್ಲ. ಬದಲಿಗೆ ತಮಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಇವರು ಮಾಡುತ್ತಾರೆ. ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನು ಕೂಡ ಮಾಡುತ್ತಾರೆ.ಆದರೂ ಕೂಡ ಗೆಲುವು ಇವರ ಪಾಲಿಗೆ...
ಮರಿಚೀಕೆಯಾಗಿಯೇ ಉಳಿದು ಬಿಡುತ್ತೆ. ಗೆಲುವು ಸಿಗುವುದು ಇರಲಿ.. ಕೆಲ ಒಮ್ಮೆ ಅವಕಾಶ ಕೂಡ ಇವರಿಗೆ ಸಿಗುವುದಿಲ್ಲ. ಅವಕಾಶ ಸಿಕ್ಕರೂ ಕೂಡ ಬೆಳ್ಳಿತೆರೆಯಲ್ಲಿ ಚಿತ್ರ ಬಂದಾಗ ಇವರ ಪಾತ್ರ ಕಾಣಿಸುವುದು ಇಲ್ಲ. ಹೇಳದೇ ಕೇಳದೇ.. ಪಾತ್ರಕ್ಕೆ ಕತ್ತರಿಯನ್ನು ಹಾಕಿರಲಾಗಿರುತ್ತೆ. ಉದಾಹರಣೆಗೆ ನೇಹಾ ಶೆಟ್ಟಿ ಅವರನ್ನೇ ತೆಗೆದುಕೊಳ್ಳಿ.

ಹೌದು, ''ಮುಂಗಾರು ಮಳೆ 02'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ನೇಹಾ ಶೆಟ್ಟಿ. ಆದರೆ.. ದುರಾದೃಷ್ಟ ''ಪೂಜಾ ಗಾಂಧಿ'' ಚಟುವಟಿಕೆಗಳನ್ನು ಚುರುಕಾಗಿಸಿದ್ದ ಮಳೆ ಕರಾವಳಿಯ ಈ ಚೆಲುವೆಗೆ ಕೈ ಕೊಡ್ತು. ಈ ಕಾರಣಕ್ಕೆ ಕನ್ನಡ ಚಿತ್ರರಂಗದಲ್ಲಿ ಸಿಗಬೇಕಿದ್ದ ಫಸಲು ಕೈ ತಪ್ಪಿತು.
ಹೀಗಾಗಿಯೇ ಆಂಧ್ರ ಪ್ರದೇಶಕ್ಕೆ ತೆರಳಿ ಸದ್ಯಕ್ಕೆ ಅಲ್ಲಿಯೇ ಬಿಡಾರವನ್ನ ಹೂಡಿರುವ ನೇಹಾ ಅವರ ಸಾಧನೆ ಅಲ್ಲಿಯೂ ಕೂಡ ಅಷ್ಟಕಷ್ಟೇ. ''ಮೆಹಬೂಬಾ''.. ''ರೂಲ್ಸ್ ರಂಜನ್''.. ''ಗ್ಯಾಂಗ್ಸ್ ಆಫ್ ಗೋದಾವರಿ''.. ''ಗಲ್ಲಿ ರೌಡಿ''.. ''ಮೋಸ್ಟ್ ಎಲಿಜೆಬಲ್ ಬ್ಯಾಚುಲರ್''.. ಹೀಗೆ ಹಲವು ಚಿತ್ರ ಮಾಡಿದರೂ ಕೂಡ ಇವರಿಗೆ ಗೆಲುವು ಸಿಗಲೇ ಇಲ್ಲ. ಇರುವುದರಲ್ಲಿ 2022ರಲ್ಲಿ ತೆರೆಗೆ ಬಂದ ''ಡಿಜೆ ಟಿಲ್ಲು'' ಇವರಿಗೆ ಚೂರು ಪಾರು ಹೆಸರು ತಂದು ಕೊಡ್ತು.
ಇಂಥಾ ನೇಹಾ, ಪವನ್ ಕಲ್ಯಾಣ್ ಅಭಿನಯದ ಸದ್ಯ ಬಿಡುಗಡೆಯಾಗಿರುವ ''ಓಜಿ'' ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಖುದ್ದು.. ನೇಹಾ ಶೆಟ್ಟಿ ಕೂಡ ಈ ಸುದ್ದಿಯ ಮೇಲೆ ಅಧಿಕೃತವಾದ ಮುದ್ರೆಯನ್ನು ಒತ್ತಿದ್ದರು. ಶಾಪಿಂಗ್ ಮಾಲ್ ಉದ್ಘಾಟನೆ ಸಮಾರಂಭಕ್ಕೆ ಬಂದಾಗ ''OG'' ಚಿತ್ರದಲ್ಲಿ ತಾವು ಇರುವುದಾಗಿ ಹೇಳಿದ್ದರು. ನಿಮ್ಮೆಲ್ಲರನ್ನು ನನ್ನ ಪಾತ್ರ ಅಚ್ಚರಿಗೆ ದೂಡುವುದು ಖಚಿತ ಎನ್ನುವ ಮಾತುಗಳನ್ನಾಡಿದ್ದರು.
ಇವರ ಈ ಮಾತು ನಿಜಾ ಆಗಿದೆ. ನೇಹಾ ಹೇಳಿದಂತೆ ಎಲ್ಲರಿಗೆ ಅಚ್ಚರಿ ಕೂಡ ಆಗಿದೆ. ಆದರೆ.. ಅಚ್ಚರಿಯಾಗಿದ್ದು ಇವರನ್ನು ತೆರೆಯ ಮೇಲೆ ನೋಡಿ ಅಲ್ಲ. ಬದಲಿಗೆ ಇವರು ಕಾಣಿಸ್ದೇ ಇರುವುದಕ್ಕೆ. ಹೌದು, ಇಡೀ ''ಓಜಿ'' ಚಿತ್ರದಲ್ಲಿ ದುರ್ಬಿನ್ ಹಾಕಿ ಹುಡುಕಿದರೂ ಕೂಡ ನೇಹಾ ಪಾತ್ರದ ಸುಳಿವು ಇಲ್ಲ. ಈ ಹಿನ್ನೆಲೆ ಈ ಕುರಿತು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಥೈಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣವಾಗಿತ್ತು. ಆದರೂ ನೇಹಾ ಅವರ ಹಾಡನ್ನು ಚಿತ್ರದಿಂದ ತೆಗೆದಿದ್ದೇಕೆ..? ಎಂಬ ಪ್ರಶ್ನೆಗಳು ಕೂಡ ನಿರ್ದೇಶಕ ಸುಜಿತ್‌ಗೆ ಎದುರಾಗಿದೆ.

ಆದರೆ. ಈ ಕುರಿತು ಸಮಾಧಾನದಿಂದ ಉತ್ತರವನ್ನು ನೀಡುವ ಬದಲು ಸುಜಿತ್ ಕೆರಳಿದ್ದಾರೆ. ''123 ತೆಲುಗು'' ವರದಿಯ ಪ್ರಕಾರ ''ಓಜಿ'' ಸಕ್ಸಸ್ ಮೀಟ್‌ನಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ನಿಮ್ಮೆದುರು ನಾವು ನಮ್ಮ ಚಿತ್ರದಲ್ಲಿ ವಿಶೇಷವಾದ ಹಾಡೊಂದು ಇದೆ ಆ ಹಾಡಿನಲ್ಲಿ ಅವರು ಕುಣಿದಿದ್ದಾರೆ ಎಂದು ಹೇಳಿದ್ವಾ..? ಘೋಷಣೆ ಮಾಡಿದ್ವಾ..? ಎಂದು ಪ್ರಶ್ನೆಯನ್ನು ಸುಜಿತ್ ಮಾಡಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ಫಿಲ್ಮ್‌ಫೇರ್'' ಕೂಡ ವರದಿಯನ್ನು ಮಾಡಿದ್ದು ಚಿತ್ರದ ಸಂಕಲನದ ಸಮಯದಲ್ಲಿ ಈ ಹಾಡಿಂದ ಚಿತ್ರದ ವೇಗಕ್ಕೆ ಅಡ್ಡಿಯಾಗುತ್ತೆ ಎಂದು ಭಾವಿಸಿ ಸುಜಿತ್ ಹಾಡನ್ನು ಕೈ ಬಿಟ್ಟಿದ್ದಾರೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹಾಡು ಕೈ ಬಿಡುವ ಮೊದಲು ಪವನ್ ಕಲ್ಯಾಣ್ ಅವರ ಜೊತೆ ಈ ಕುರಿತು ಚರ್ಚೆ ಮಾಡಿ ಸುಜಿತ್ ಈ ನಿರ್ಧಾರವನ್ನು ಕೈಗೊಂಡಿದ್ಧಾರೆ ಎಂದು ಹೇಳಿದೆ.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ''ಓಜಿ'' ಚಿತ್ರತಂಡದಿಂದ ನೇಹಾ ಶೆಟ್ಟಿಗೆ ಅನ್ಯಾಯವಾಗಿದೆ, ಅವರನ್ನು ಅವಮಾನ ಮಾಡಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೇಹಾ ಶೆಟ್ಟಿ ಮಾತ್ರ ಈ ವಿಚಾರದಲ್ಲಿ ಸದ್ಯ ಮೌನಕ್ಕೆ ಶರಣಾಗಿದ್ದು ಮುಂದಿನ ದಿನಗಳಲ್ಲಿ ಮೌನ ಮುರಿದು ತಂಡಕ್ಕೆ ತಿರುಗೇಟು ನೀಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











