ಸಿನಿಮಾ ಆಡಿಷನ್ ಇದೆ.. ಆದ್ರೆ ನಿಮ್ಗೆ 50+ ವರ್ಷ ಆಗಿರಬೇಕು
ಸಿನಿಮಾ ಆಡಿಷನ್ ಗಳಲ್ಲಿ ಸಾಮಾನ್ಯವಾಗಿ 20 ರಿಂದ 25 ವರ್ಷ, 25 ವರ್ಷದಿಂದ 30 ವರ್ಷದವರಿಗೆ ಮಾತ್ರ ಎಂದು ಬೋರ್ಡ್ ಹಾಕಿರುತ್ತಾರೆ. ಆದರೆ, ಇಲ್ಲೊಂದು ಚಿತ್ರತಂಡ 50 ವರ್ಷ ಮೇಲ್ಪಟ್ಟವರಿಗೆ ಆಡಿಷನ್ ಗೆ ಕರೆದಿದ್ದಾರೆ.
ನಟ, ನಿರ್ದೇಶಕ ಶ್ರೀನಿ ಇದೀಗ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾಗೆ 'ಓಲ್ಡ್ ಮಂಕ್' ಎನ್ನುವ ಡಿಫರೆಂಟ್ ಟೈಟಲ್ ಇಟ್ಟಿದ್ದಾರೆ. ಸಿನಿಮಾದ ಕೆಲವು ಪ್ರಮುಖ ಪಾತ್ರಗಳಿಗೆ 50 ವರ್ಷ ಮೇಲ್ಪಟ್ಟವರನ್ನು ಹುಡುಕಲಾಗುತ್ತಿದೆ.
ಚಿತ್ರದಲ್ಲಿ ಒಂದು ಹಿರಿಯರ ಗ್ಯಾಂಗ್ ಇರುತ್ತದೆ. ಅದರಲ್ಲಿ 16 ಜನ ಇರುತ್ತಾರೆ. 8 ಮುದುಕರು ಹಾಗೂ 8 ಮುದುಕಿಯರ ಗುಂಪು ಇದಾಗಿದೆ. ಈ ಗ್ಯಾಂಗ್ ಸಿನಿಮಾದ ಕಥೆಯ ಮುಖ್ಯ ಭಾಗವಾಗಿದೆ. ಈ ಪಾತ್ರಗಳಿಗಾಗಿ ಆಡಿಷನ್ ನಡೆಸಲಾಗುತ್ತಿದೆ.

ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿಯಲ್ಲಿ ಆಡಿಷನ್ ಮಾಡುವ ತಯಾರಿ ಮಾಡಿಕೊಂಡಿದ್ದು, ಈ ತಿಂಗಳ ಕೊನೆಯಲ್ಲಿ ಆ ಪ್ರಕ್ರಿಯೆ ನಡೆಯಲಿದೆ. ಹಾಡುವ, ಡ್ಯಾನ್ಸ್ ಮಾಡುವ ಅಥವಾ ನಟನೆ ಮಾಡುವ ಆಸಕ್ತಿ ಇರುವ ಹಿರಿಯರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. 'ಓಲ್ಡ್ ಮಂಕ್' ಸಿನಿಮಾ ಪೋಸ್ಟರ್ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.
ಅಂದಹಾಗೆ, 'ಟೋಪಿವಾಲ' ಮೂಲಕ ಡೈರೆಕ್ಟರ್ ಆದ ಶ್ರೀನಿ 'ಶ್ರೀನಿವಾಸ ಕಲ್ಯಾಣ' ಹಾಗೂ 'ಬೀರ್ ಬಲ್' ಚಿತ್ರಗಳನ್ನು ನಟಿಸಿ, ನಿರ್ದೇಶಿಸಿದರು. ಕೆಲ ತಿಂಗಳ ಹಿಂದೆ ಬಿಡುಗಡೆಯಾದ 'ರಂಗನಾಯಕಿ' ಸಿನಿಮಾದಲ್ಲಿ ನಾಯಕನಾಗಿ ಶ್ರೀನಿ ಕಾಣಿಸಿಕೊಂಡಿದ್ದರು.


Click it and Unblock the Notifications