ರಾಸಲೀಲೆ ಸಿಡಿ ಬಿಡುಗಡೆ ಮುಂದೂಡಿಕೊಳ್ಳಿ, ಸಿಡಿ ರಾಜಕಾರಣಿಗಳಿಗೆ ಕೈಮುಗಿದ ಪ್ರಥಮ್
ಚುನಾವಣೆ ಸಮೀಪವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೊಮ್ಮೆ ಸಿಡಿ ರಾಜಕಾರಣ ಮುನ್ನೆಲೆಗೆ ಬರುತ್ತಿದೆ. ಇದೀಗ ಕೆಲವು ಬಿಜೆಪಿ ಪೇಜ್‌ಗಳಲ್ಲಿ ಪುರುಷ ಹಾಗೂ ಮಹಿಳೆಯೊಬ್ಬಾಕೆ ಅರೆಬೆತ್ತಲಾಗಿರುವ ಚಿತ್ರವನ್ನು ಹಂಚಿಕೊಂಡು ಶೀಘ್ರದಲ್ಲಿಯೇ ಟ್ರೈಲರ್ ಬಿಡುಗಡೆ ಮಾಡಲಾಗುವುದು ಎಂಬ ಸಂದೇಶಗಳು ಹರಿದಾಡುತ್ತಿವೆ.
ಚಿತ್ರಗಳಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರ ಮುಖವನ್ನೂ ಬ್ಲರ್ ಮಾಡಲಾಗಿದ್ದು, ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕನ ರಾಸಲೀಲೆ ವಿಡಿಯೋ ಇದಾಗಿದೆ ಇದರ ವಿಡಿಯೋ ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಕೆಲವರು ಹೇಳಿದ್ದಾರೆ.
ಇದರ ನಡುವೆಯೇ ನಟ, ಮಾಜಿ ಬಿಗ್‌ಬಾಸ್ ವಿನ್ನರ್ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣ ಪೇಜ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ಸಿಡಿ ರಾಜಕಾರಣಿಗಳಿಗೆ ಕೈಮುಗಿದು ಮನವಿ ಮಾಡಿದ್ದಾರೆ. ಏಕೆ? ಮುಂದೆ ಓದಿ.

ಸಿಡಿ ಬಿಡುಗಡೆ ಮುಂದೂಡಿ: ಪ್ರಥಮ್ ಮನವಿ
ನೀವೆಲ್ಲರೂ ನೋಡುತ್ತಿರುವಂತೆ ಫೇಸ್‌ಬುಕ್‌ಗಳಲ್ಲಿ ಸ್ಕ್ರೀನ್‌ಶಾಟ್ ಒಂದು ಓಡಾಡುತ್ತಿದೆ. ಒಬ್ಬ ರಾಜಕಾರಣಿಯ ಚಿತ್ರ ಹಾಗೂ ಒಬ್ಬ ಮಹಿಳೆಯ ಚಿತ್ರವನ್ನು ಮುಖ ಬ್ಲರ್ ಮಾಡಿ ಹಾಕಿಕೊಳ್ಳಲಾಗಿದೆ. ಈ ಸಿಡಿ ಇನ್ನೂ ರಿಲೀಸ್ ಮಾಡಿಲ್ಲ. ಇದೊಂಥರ ಆ ಥರ (ನೀಲಿ ಚಿತ್ರ) ವಿಡಿಯೋ ಸಿಡಿ ಆಗಿದೆ. ಸದ್ಯಕ್ಕೆ ಸಿಡಿ ಇನ್ನೂ ರಿಲೀಸ್ ಮಾಡಿಲ್ಲ ಪ್ರೋಮೋ ಥರಹ ಬರೀ ಸ್ಕ್ರೀನ್ ಶಾಟ್ ಹಾಕಿಕೊಂಡಿದ್ದಾರೆ. ನಿಮ್ಮಲ್ಲಿ ನನ್ನ ಒಂದು ಮನವಿಯೆಂದರೆ, ದಯವಿಟ್ಟು ನಿಮ್ಮ ಈ ಸಿಡಿ ಬಿಡುಗಡೆ ಕಾರ್ಯಕ್ರಮವನ್ನು ಒಂದು ವಾರ ಪೋಸ್ಟ್‌ಪೋನ್ ಮಾಡಿಕೊಳ್ಳಿ'' ಎಂದು ಪ್ರಥಮ್ ಮನವಿ ಮಾಡಿದ್ದಾರೆ.

ಇಂಥಹಾ ಸಿಡಿಗಳು ಸುನಾಮಿ ಎಬ್ಬಿಸಿಬಿಡುತ್ತವೆ: ಪ್ರಥಮ್
''ಫೆಬ್ರವರಿ 3ನೇ ತಾರೀಖು ನನ್ನ ನಟನೆಯ 'ನಟಭಯಂಕರ' ಸಿನಿಮಾ ಬರ್ತಾ ಇದೆ. ಹಾಗಾಗಿ ಸಿಡಿ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹಾಕಿಕೊಳ್ಳಿ. ಯಾಕೆಂದರೆ ಇಂಥಹಾ ಸಿಡಿಗಳು ಬರಬೇಕಾದರೆ ಸುನಾಮಿ ರೀತಿ ಬರುತ್ತೆ, ಮಿಕ್ದೋರೆಲ್ಲ ನಾವು ಮಂಕ್ ಮಾದೇವ್‌ಸ್ವಾಮಿ ಥರ ಆಗಿಬಿಡ್ತೀವಿ. ನಮ್ಮ ಸಿನಿಮಾ ಏನೂ ಸೌಂಡ್ ಮಾಡೋಕಾಗಲ್ಲ. ಪ್ರೋಮೋ ಮಾಡಿದೀವಿ, ಟ್ರೈಲರ್ ಮಾಡಿದ್ದೀವಿ. ಅದೆಲ್ಲ ವೇಸ್ಟ್ ಆಗಿಬಿಡುತ್ತದೆ. ಸಿಡಿ ಮಾಡಿದವರು ಇಷ್ಟು ದಿನವೇ ತಡೆದುಕೊಂಡಿದ್ದೀರ, ಇನ್ನು ಸ್ವಲ್ಪ ದಿನ ತಡೆದುಕೊಳ್ಳಿ, ಫೆಬ್ರವರಿ ಆರಕ್ಕೆ ಬೇಕಾದರೆ ರಿಲೀಸ್ ಮಾಡಿಕೊಳ್ಳಿ'' ಎಂದಿದ್ದಾರೆ ಪ್ರಥಮ್.

ಸಿಡಿ ರೋಚಕತೆ ಮುಂದೆ ಸಿನಿಮಾ ಮಂಕಾಗುತ್ತದೆ: ಪ್ರಥಮ್
''ಫೆಬ್ರವರಿ ಮೂರನೇ ತಾರೀಖು ನಮ್ಮ ಸಿನಿಮಾ ಬಿಡುಗಡೆ ಆಗಿ ಸ್ವಲ್ಪ ಕಲೆಕ್ಷನ್ ಆದ ಮೇಲೆ ನಿಮ್ಮ ಸಿಡಿ ಬಿಡುಗಡೆ ಮಾಡಿ. ನಿಮ್ಮ ಸಿಡಿ ಬೇಗ ಬಿಡುಗಡೆ ಮಾಡಿದರೆ ಅದರ ರೋಚಕತೆ ಮುಂದೆ ನಮ್ಮ ಸಿನಿಮಾ, ಟ್ರೈಲರ್ ಎಲ್ಲ ಮಂಕಾಗಿಬಿಡುತ್ತದೆ. ಸಿಡಿ ಮಾಡಿದವರು, ಬಿಡುಗಡೆ ಮಾಡಲು ಕಾಯುತ್ತಿರುವವರು ಎಲ್ಲರೂ ಇನ್ನು ಸ್ವಲ್ಪ ದಿನ ಕಾಯಿರಿ. ಆ ಮೇಲೆ ನಿಮ್ಮ ಸಿಡಿ ಬಿಡುಗಡೆ ಮಾಡಿರಿ. ದಯವಿಟ್ಟು, ನಿಮ್ಮ ಕಾಲಿಗೆ ಬಿದ್ದು, ಕೈಮುಗಿದು ಕೇಳುತ್ತಿದ್ದೇನೆ. ದಯವಿಟ್ಟು ಸಿಡಿ ಬಿಡುಗಡೆ ಕಾರ್ಯಕ್ರಮ ಮುಂದೂಡಿಕೊಳ್ಳಿ'' ಎಂದು ನಟ ಪ್ರಥಮ್ ತಮ್ಮದೇ ಶೈಲಿಯಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕನ ರಾಸಲೀಲೆ ವಿಡಿಯೋ
ಅಸಲಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್ ಶಾಟ್ ಅಸಲಿಗೆ, ಬಿಜೆಪಿ ಮುಖಂಡರೊಬ್ಬರ ರಾಸಲೀಲೆ ವಿಡಿಯೋದ ಸ್ಕ್ರೀನ್ ಶಾಟ್ ಆಗಿದೆ. ಬಿಜೆಪಿಯ ದಿಯು-ದಮನ್‌ನ ಅಧ್ಯಕ್ಷರಾಗಿದ್ದ ಗೋಪಾಲ್ ಟಂಡೆ ಎಂಬುವರು ಮಹಿಳೆಯೊಟ್ಟಿಗೆ ಮಾಡಿದ್ದಾರೆನ್ನಲಾಗಿರುವ ರಾಸಲೀಲೆಯ ವಿಡಿಯೋದ ಸ್ಕ್ರೀನ್ ಶಾಟ್ ಅನ್ನೇ ಕೆಲವು ಬಿಜೆಪಿ ಬೆಂಬಲಿಗ ಪೇಜ್‌ಗಳು ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕನ ರಾಸಲೀಲೆಯ ವಿಡಿಯೋದ ಚಿತ್ರವೆಂದು ಹಂಚಿಕೊಳ್ಳುತ್ತಿದೆ. ಅಸಲಿಗೆ ಇದು ಬಿಜೆಪಿ ನಾಯಕನ ರಾಸಲೀಲೆ ವಿಡಿಯೋದ ಸ್ಕ್ರೀನ್‌ಶಾಟ್ ಆಗಿದೆ.


Click it and Unblock the Notifications











