ದರ್ಶನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ನಿಮ್ಮಲ್ಲಿ ಈ 2 ಬದಲಾವಣೆ ಆಗಬೇಕು ಎಂದ ಪ್ರಥಮ್; ಕೆಂಡಕಾರಿದ ಫ್ಯಾನ್ಸ್!
ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಇಂದು ( ಫೆಬ್ರವರಿ 16 ) 46ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಹಲವು ಕಾರಣಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ನಟ ದರ್ಶನ್ ಈ ಬಾರಿ ಅಭಿಮಾನಿಗಳನ್ನು ಭೇಟಿಯಾಗಿ ಪ್ರೀತಿಯಿಂದ ನಡೆದುಕೊಂಡಿದ್ದಾರೆ.
ಇನ್ನು ಈ ಬಾರಿಯ ಹುಟ್ಟುಹಬ್ಬಕ್ಕೆ ಕೇಕ್, ಹಾರ ಹಾಗೂ ಉಡುಗೊರೆ ತರುವ ಬದಲು ದಿನಸಿ ಸಾಮಗ್ರಿಗಳನ್ನು ತನ್ನಿ, ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡೋಣ ಎಂದು ದರ್ಶನ್ ಹೇಳಿದ್ದರು. ಅದರಂತೆ ಅಭಿಮಾನಿಗಳೂ ಸಹ ಮೂಟೆ ಮೂಟೆ ದಿನಸಿ ಸಾಮಗ್ರಿಗಳನ್ನು ದರ್ಶನ್ ಮನೆಗೆ ತಲುಪಿಸಿದ್ದಾರೆ.
ಹುಟ್ಟುಹಬ್ಬದ ಸಲುವಾಗಿ ಶುಭಾಶಯ ಕೋರಲು ರಾತ್ರಿಯಿಂದಲೇ ಮನೆ ಮುಂದೆ ಸಾಲಗಟ್ಟಿ ನಿಂತಿದ್ದ ತನ್ನ ಅಭಿಮಾನಿಗಳನ್ನು ದರ್ಶನ್ ಭೇಟಿಯಾಗಿ ಕೈಕುಲುವ ಮೂಲಕ ಸತ್ಕರಿಸಿದ್ದಾರೆ. ಇನ್ನು ಫ್ಯಾನ್ಸ್ ಮಾತ್ರವಲ್ಲದೇ ಸಿನಿ ರಸಿಕರು ಹಾಗೂ ಚಿತ್ರರಂಗದ ಹಲವು ಕಲಾವಿದರು ದರ್ಶನ್ ಹುಟ್ಟುಹಬ್ಬದ ಕಾರಣ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಜತೆಗಿನ ತಮ್ಮ ಫೋಟೊಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಪೈಕಿ ನಟ ಒಳ್ಳೆ ಹುಡ್ಗ ಪ್ರಥಮ್ ಮಾಡಿರುವ ವಿಶ್ ವಿಭಿನ್ನವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಈ ಟ್ವೀಟ್ ನೋಡಿದ ದರ್ಶನ್ ಅಭಿಮಾನಿಗಳು ಪ್ರಥಮ್ ವಿರುದ್ಧ ಕೆಂಡಕಾರಿದ್ದಾರೆ.

ಎರಡು ಬದಲಾವಣೆಯಾಗಬೇಕು ಎಂದ ಪ್ರಥಮ್
ದರ್ಶನ್ ಜತೆಗಿನ ತಮ್ಮ ಸೆಲ್ಫಿ ಚಿತ್ರವನ್ನು ಟ್ವೀಟ್ ಮಾಡಿರುವ ಪ್ರಥಮ್ "ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ ಸರ್. ಎರಡು ಮಾತು ಹೇಳ್ತೀನಿ. ದಯವಿಟ್ಟು ಸ್ವೀಕರಿಸಿ. ಅಂಬರೀಶ್ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕೆ ದೊಡ್ಡ ಮಾಸ್ ಹೀರೊ ನೀವು. ಭಗವಂತ ಎಲ್ಲಾ ಕೊಟ್ಟಿದ್ದಾನೆ ನಿಮಗೆ, ಎಷ್ಟು ಫ್ಯಾನ್ಸ್ ಇದ್ದಾರೆ ನೋಡಿ? ಇಷ್ಟಿದ್ದ ಮೇಲೆ ಕೂಲಾಗಿರಿ, ಆರಾಮಾಗಿರಿ. ಎರಡನೆಯದು ನಿಮ್ಮ ಹಾಗೂ ಮಾಧ್ಯಮದ ನಡುವಿನ ಮುನಿಸು ನಿಲ್ಲಲಿ. ನೀವು ಹಾಗೂ ಮೀಡಿಯಾ ಒಂದಾಗ್ಲಿ ಅನ್ನೋದೇ ಪ್ರಾಮಾಣಿಕ ಆಸೆ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್ ಅವರಿಗೆ ಕೂಲ್ ಆಗಿರುವಂತೆ ಹಾಗೂ ಮಾಧ್ಯಮದ ಜತೆ ಸರಿ ಹೋಗುವಂತೆ ಪ್ರಥಮ್ ಬಯಸಿದ್ದಾರೆ.

ಕಿಡಿಕಾರಿದ ದರ್ಶನ್ ಫ್ಯಾನ್ಸ್
ಇನ್ನು ಪ್ರಥಮ್ ಮಾಡಿರುವ ಈ ಟ್ವೀಟ್ ದರ್ಶನ್ ಅವರ ಅಭಿಮಾನಿಗಳನ್ನು ಅಕ್ಷರಶಃ ಕೆರಳಿಸಿದೆ. ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರಬೇಕೆಂದರೆ ಕೇವಲ ಶುಭ ಕೋರಿ, ಅದನ್ನು ಬಿಟ್ಟು, ಅದು ಮಾಡಿ, ಇದು ಮಾಡಿ ಎಂಬ ಸಲಹೆಗಳನ್ನು ಕೊಡಲು ಬರಬೇಡಿ ಎಂದು ಪ್ರಥಮ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರತಿಯೊಬ್ಬ ದರ್ಶನ್ ಅಭಿಮಾನಿಯೂ ಸಹ ಇದೇ ರೀತಿ ಬರೆದುಕೊಂಡಿದ್ದಾರೆ.

ಈ ಹಿಂದೆಯೂ ಉಂಟಾಗಿತ್ತು ಪ್ರಥಮ್ - ದರ್ಶನ್ ವಿವಾದ
ಇನ್ನು ದರ್ಶನ್ ಅಭಿಮಾನಿಗಳ ಕೋಪಕ್ಕೆ ಪ್ರಥಮ್ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಟ ಭಯಂಕರ ಚಿತ್ರ ಬಿಡುಗಡೆಯಾದಾಗ ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಕ್ರಾಂತಿ ಚಿತ್ರಕ್ಕಿಂತ ಹೆಚ್ಚು ಎಂಬ ಪೋಸ್ಟರ್ ಹರಿದಾಡಿದ್ದವು. ಪಕ್ಕಾ ಚಿತ್ರತಂಡ ಪ್ರಕಟಿಸುವ ಅಧಿಕೃತ ಪೋಸ್ಟರ್ ರೀತಿ ಇದ್ದ ಕಾರಣ ದರ್ಶನ್ ಅಭಿಮಾನಿಗಳು ಪ್ರಥಮ್ ವಿರುದ್ಧ ಹರಿಹಾಯ್ದಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಥಮ್ ದೇವರ ಆಣೆಗೂ ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ, ದರ್ಶನ್ ದೊಡ್ಡ ಹೀರೊ ಅವರ ಚಿತ್ರಗಳ ರೀತಿ ನನ್ನ ಚಿತ್ರ ಗಳಿಕೆ ಮಾಡುವುದಿಲ್ಲ, ಈ ರೀತಿ ಹೋಲಿಕೆ ಬೇಡ ಎಂದು ಬರೆದುಕೊಂಡಿದ್ದರು.


Click it and Unblock the Notifications











