ಡ್ರೋನ್ ಪ್ರತಾಪನಾಗಿ ಬರುತ್ತಿದ್ದಾರೆ ಒಳ್ಳೆ ಹುಡ್ಗ ಪ್ರಥಮ್
ಬಿಗ್‌ಬಾಸ್ ಮೂಲಕ ಮನೆಮಾತಗಿದ್ದ ಒಳ್ಳೆ ಹುಡ್ಗ ಪ್ರಥಮ್ ಇದೀಗ ಡ್ರೋನ್ ಪ್ರತಾಪನಾಗಿ ತೆರೆಗೆ ಬರುತ್ತಿದ್ದಾರೆ. ವಿಶೇಷವೆಂದರೆ ಸಿನಿಮಾವನ್ನು ಸ್ವತಃ ಪ್ರಥಮ್ ನಿರ್ದೇಶನ ಮಾಡುತ್ತಿದ್ದಾರೆ.
ಡ್ರೋನ್ ಪ್ರತಾಪ್ ಬಗೆಗಿನ ಸಿನಿಮಾವು ಹಾಸ್ಯಮಯ ಸಂದೇಶ ಹೊಂದಿರಲಿದ್ದು, ಡ್ರೋನ್ ಪ್ರತಾಪ್‌ನ ಅಚಾನಕ್ ಜನಪ್ರಿಯತೆ ಮತ್ತು ಅದರ ಸುತ್ತಲಿನ ವಿಷಯಗಳ ಕುರಿತು ಕತೆ ಹೆಣೆಯಲಾಗಿದೆ.
ಡ್ರೋನ್ ಪ್ರತಾಪ್ ಬಗ್ಗೆ ಅರಿತುಕೊಳ್ಳಲು ಸುಮಾರು ನಾಲ್ಕು ತಿಂಗಳು ನಾನು ವ್ಯಯಿಸಿದ್ದೇನೆ. ಡ್ರೋನ್ ಪ್ರತಾಪನ ಸಾಕಷ್ಟು ಭಾಷಣಗಳನ್ನು ಕೇಳಿ ಆತನ ಹಾವ-ಭಾವ ಅಭ್ಯಸಿಸಿದ್ದೇನೆ. ಆತನ ಪಾತ್ರ ನಿರ್ವಹಿಸುವಷ್ಟರ ಮಟ್ಟಿಗೆ ಸ್ವಯಂ ತರಬೇತಿಗೊಂಡಿದ್ದೇನೆ'' ಎಂದಿದ್ದಾರೆ ಪ್ರಥಮ್.

''ಸಿನಿಮಾವನ್ನು 'ಗೌರಿ ಗಣೇಶ', 'ಸುಬ್ಬಾ ಶಾಸ್ತ್ರಿ', 'ಉಂಡು ಹೋದ ಕೊಂಡು ಹೋದ' ಸಿನಿಮಾಗಳ ರೀತಿಯಲ್ಲಿಯೇ ಮಾಡುವ ಇರಾದೆ ಇದೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದು, ಹಾಸ್ಯಮಯವಾದ ಚಿತ್ರಕತೆ ತಯಾರಿಸಲಾಗಿದೆ'' ಎಂದಿದ್ದಾರೆ ಪ್ರಥಮ್.
''ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ತಬಲಾ ನಾಣಿ ಸಹ ಇರಲಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅದರಲ್ಲಿ ಒಬ್ಬ ನಾಯಕಿ ಮುಂಬೈ ಮೂಲದವರಾಗಿರುತ್ತಾರೆ'' ಎಂದಿದ್ದಾರೆ ಪ್ರಥಮ್.
ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ಧ್ರುವ ಸರ್ಜಾ ಪ್ರೇರಣೆ ಎಂದಿರುವ ಪ್ರಥಮ್, ''ಮಾಮೂಲಿ ಮಾಸ್ ಹೀರೋಗಳಿಗಿಂತಲೂ ಭಿನ್ನವಾದ ಸಾಮರ್ಥ್ಯ ನಿನಗೆದೆಯೆಂದು, ಗಂಭೀರ ವಿಷಯಗಳನ್ನು ಹಾಸ್ಯಾತ್ಮಕವಾಗಿ ಪ್ರೆಸೆಂಟ್ ಮಾಡುವುದನ್ನು ಮುಂದುವರೆಸೆಂದು ಧೃವ ಸರ್ಜಾ ಸಲಹೆ ನೀಡಿದ್ದಾಗಿ'' ಪ್ರಥಮ್ ಹೇಳಿದ್ದಾರೆ.
ಇದೇ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪ್ರಥಮ್, ''ಈ ಸಿನಿಮಾಕ್ಕಾಗಿ ಸುಮಾರು 15 ಕೆ.ಜಿ ತೂಕ ಇಳಿಸಿಕೊಳ್ಳುತ್ತಿದ್ದೇನೆ, 'ಗೌರಿ-ಗಣೇಶ', 'ಯಾರಿಗೂ ಹೇಳ್ಬೇಡಿ', ಉಂಡು ಹೋದ ಕೊಂಡೂ ಹೋದ ಮಾದರಿಯ ಸಿನಿಮಾ ಇದಾಗಿರಲಿದ್ದು, ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಆಗದಂತೆ ಪ್ರೇಕ್ಷಕರನ್ನು ನಗಿಸುವ ಜೊತೆಗೆ ಸಂದೇಶವೊಂದನ್ನು ನೀಡುವ ಪ್ರಯತ್ನ ಈ ಸಿನಿಮಾದ ಮೂಲಕ ಆಗಲಿದೆ'' ಎಂದಿದ್ದರು. ಆಗ ಬೇರೊಬ್ಬ ನಿರ್ದೇಶಕರು ಸಿನಿಮಾವನ್ನು ನಿರ್ದೇಶಿಸುವುದಾಗಿ ಹೇಳಿದ್ದರು. ಆದರೆ ಈಗ ನಿರ್ದೇಶಕ ಟೋಪಿಯನ್ನು ಪ್ರಥಾಮ್ ಅವರೇ ಧರಿಸಿದ್ದಾರೆ.
'ಡ್ರೋನ್ ಪ್ರತಾಪ್ ಸಿನಿಮಾದ ಮುಹೂರ್ತವನ್ನು ಅದ್ಧೂರಿಯಾಗಿ ಮಾಡುವ ಯೋಚನೆಯಲ್ಲಿರುವ ಪ್ರಥಾಪ್, ''ಈ ಹಿಂದೆ ನನ್ನ ಸಿನಿಮಾಗಳಿಗೆ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಎಲ್‌ಕೆ ಅಡ್ವಾಣಿ ಅಂಥಹಾ ಮಹನೀಯರು ಕ್ಲ್ಯಾಪ್ ಮಾಡಿದ್ದರು. ಈ ಬಾರಿಯೂ ಬಹಳ ಪ್ರಖ್ಯಾತ ವ್ಯಕ್ತಿಯನ್ನು ಕರೆತುರುವ ಯೋಜನೆ ಹಾಕಿಕೊಂಡಿದ್ದೇನೆ'' ಎಂದಿದ್ದಾರೆ.
ಡ್ರೋನ್ ಪ್ರತಾಪ್ ಕರ್ನಾಟಕದ ಬಹಳ ವಿ(ಕು)ಖ್ಯಾತರು. ತಾನು ಡ್ರೋನ್ ವಿಜ್ಞಾನಿಯೆಂದು ಹೇಳಿ ಹಲವು ಸುಳ್ಳು ಭಾಷಣಗಳನ್ನು ಮಾಡಿ ಖ್ಯಾತರಾಗಿದ್ದರು. ಆದರೆ ಕೊನೆಗೆ ಅವರ ಸಾಧನೆಯೆಂದು ಹೇಳಿಕೊಂಡಿದ್ದದ್ದೆಲ್ಲ ಸುಳ್ಳೆಂದು ಗೊತ್ತಾಗಿ ವಿಪರೀತವಾಗಿ ಟ್ರೋಲ್‌ಗೆ ನಿಂದನೆಗೆ ಒಳಗಾದರು.
ಬಿಗ್‌ಬಾಸ್ ವಿಜೇತರಾದ ಬಳಿಕ 'ಎಂಎಲ್‌ಎ', 'ದೇವ್ರಂತಾ ಮನುಷ್ಯ' ಸಿನಿಮಾಗಳಲ್ಲಿ ನಟಿಸಿರುವ ಪ್ರಥಮ್, ಇದೀಗ 'ನಟ ಭಯಂಕರ', 'ಕರ್ನಾಟಕದ ಅಳಿಯ' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆ ಸಿನಿಮಾಗಳು ಕೊರೊನಾ ಕಾರಣಕ್ಕೆ ತಡವಾಗಿದ್ದು ಬಿಡುಗಡೆಗೆ ತಯಾರಾಗಿವೆ.


Click it and Unblock the Notifications











