ಮೂವರು ನಾಯಕಿಯರೊಂದಿಗೆ 49ನೇ ಸಿನಿಮಾಗೆ ಸಜ್ಜಾದ ಓಂಪ್ರಕಾಶ್ ರಾವ್:'ಫೀನಿಕ್ಸ್' ಎದ್ದು ಬಂದ ಡೈರೆಕ್ಟರ್
ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 48 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್. ಈಗ 49ನೇ ಸಿನಿಮಾ ಸಜ್ಜಾಗುತ್ತಿದ್ದಾರೆ. ಇವರ ವೃತ್ತಿ ಬದುಕಿನಲ್ಲಿ ಬಹುತೇಕ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇ ಹೆಚ್ಚು. ಈ ಬಾರಿ ತಮ್ಮ ಶೈಲಿಯನ್ನು ಬದಲಿಸುವುದಕ್ಕೆ ಹೊರಟಿದ್ದಾರೆ.
ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಮಾಸ್ ಆಕ್ಷನ್ ಸಿನಿಮಾಗಳನ್ನು ಕೊಟ್ಟಿರೋ ಓಂ ಪ್ರಕಾಶ್ ರಾವ್ ಸದ್ಯ ಹೊಸ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. ಅದುವೇ 'ಫೀನಿಕ್ಸ್'. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಮೂವರು ನಾಯಕಿಯರೊಂದಿಗೆ ಈ ಸಿನಿಮಾ ಮಾಡುವುದಕ್ಕೆ ಓಂ ಪ್ರಕಾಶ್ ರಾವ್ ಮುಂದಾಗಿದ್ದಾರೆ.

ಓಂ ಪ್ರಕಾಶ್ ಬಹಳ ದಿನಗಳಿಂದ ಸಿನಿಮಾಗಳನ್ನು ನಿರ್ದೇಶನ ಮಾಡಿರಲಿಲ್ಲ. ಈಗ ವಿಶಿಷ್ಟವಾದ ಕಥೆಯೊಂದಿಗೆ ಸಿನಿಮಾ ಮಾಡುವುದಕ್ಕೆ ಮತ್ತೆ ಬಂದಿದ್ದಾರೆ. ಈ ಬಾರಿ ಮಹಿಳಾ ಪ್ರಧಾನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಅಂದ್ಹಾಗೆ ಈ ಸಿನಿಮಾದಲ್ಲಿ ನಿಮಿಕಾ ರತ್ನಾಕರ್, ಶಿಲ್ಪ ಶೆಟ್ಟಿ ಹಾಗೂ ಕೃತಿಕಾ ಲೋಬೊ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾವನ್ನು ಓಂ ಪ್ರಕಾಶ್ ಅವರ ಶ್ರೀಗುರು ಚಿತ್ರಾಲಯ ಬ್ಯಾನರ್‌ನಲ್ಲಿ ತ್ರಿಶಾ ಪ್ರಕಾಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ 49ನೇ ಸಿನಿಮಾ ಆಗಿದ್ದು, 50ರ ಹೊಸ್ತಿಲಲ್ಲಿ ಇದ್ದಾರೆ. ಹೀಗಾಗಿ ಈ ಸಿನಿಮಾ ವಿಶಿಷ್ಠವಾಗಿರುತ್ತೆ ಅನ್ನೋ ನಿರೀಕ್ಷೆಯಿದೆ. ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿನ್ನಿ ವಿನೋದ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರದೀಪ್ ರಾಹುತ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಸ್ವಸ್ತಿಕ್ ಶಂಕರ್, ಅನಿಲ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದು, ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಈ ಸಿನಿಮಾವನ್ನು ಬೆಂಗಳೂರು, ಜರ್ಮನಿ ಹಾಗೂ ಆಸ್ಟ್ರಿಯಾದಲ್ಲಿ ಶೂಟಿಂಗ್ ನಡೆಯಲಿದೆ. ಈ ಬಗ್ಗೆ ನಿರ್ದೇಶಕ ಓಂಪ್ರಕಾಶ್ ರಾವ್ ಅವರೇ ಮಾಹಿತಿ ನೀಡಿದ್ದಾರೆ.
ಸುಬ್ರಹ್ಮಣಿ ಎಂಬುವವರು 'ಫೀನಿಕ್ಸ್'ಗೆ ಕಥೆ ಬರೆದಿದ್ದು, ಇದಕ್ಕೆ ಓಂ ಪ್ರಕಾಶ್ ರಾವ್ ಚಿತ್ರಕಥೆ ಬರೆದಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾ ಮೂಲಕ ಸಾಧುಕೋಕಿಲ ಮತ್ತೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರವಿಕುಮಾರ್ ಕ್ಯಾಮರಾ, ಲಕ್ಷ್ಮಣ್ ರೆಡ್ಡಿ ಎಡಿಟಿಂಗ್ ಹಾಗೂ ವಿಜಯನ್ ಸಾಹಸ ನಿರ್ದೇಶನವಿದೆ. ಹಾಗೇ ಎಂ.ಎಸ್ ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ.


Click it and Unblock the Notifications











