»   » ಹೀರೋಗೆ ಇರಬೇಕಾದ ಮುಖ, ಮೈಕಟ್ಟು, ಧ್ವನಿ ಇಲ್ಲದಿದ್ದರೂ,

ಹೀರೋಗೆ ಇರಬೇಕಾದ ಮುಖ, ಮೈಕಟ್ಟು, ಧ್ವನಿ ಇಲ್ಲದಿದ್ದರೂ,

Posted By: Staff
Subscribe to Filmibeat Kannada

ಶಿವಮಣಿ ನಾಯಕನಾಗುವ ಘೋಷಣೆ ಮಾಡಿದ ಬೆನ್ನಿಗೇ ಇನ್ನೊಬ್ಬ ಗಡ್ಡಧಾರಿ ನಿರ್ದೇಶಕ ಓಂಪ್ರಕಾಶ್‌ ಕೂಡ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಅವರು ನಾಯಕ, ನಿರ್ದೇಶಕನಾಗಿರುವ 'ಸಚ್ಚಿ" ಚಿತ್ರ ಬುಧವಾರ ಸೆಟ್ಟೇರಿದೆ.


ಶಿವಮಣಿ ರೀತಿ ಓಂಪ್ರಕಾಶ್‌ ಕೂಡ ಆ್ಯಕ್ಷನ್‌ ಚಿತ್ರಗಳ ಮೂಲಕವೇ ಬೆಳಕಿಗೆ ಬಂದವರು. 'ಸಿಂಹದಮರಿ", 'ಎ.ಕೆ. 47"ನಂಥಾ ಚಿತ್ರಗಳು ಯಶಸ್ಸು ಕಂಡಿವೆ. ದುಬಾರಿ ನಿರ್ದೇಶಕ ಅನ್ನುವ ಬಿರುದು ಕೂಡ ಇವರ ಹೆಸರ ಹಿಂದಿದೆ. ಒಂದು ಕಾಲದ ನಗೆನಟ ಮತ್ತು ಸಾಹಿತಿ ಎನ್‌.ಎಸ್‌. ರಾವ್‌ ಅವರ ಪುತ್ರನಾಗಿರುವ ಓಂಪ್ರಕಾಶ್‌ ಸುಂದರಾಂಗನಲ್ಲ. ಸಾಂಪ್ರದಾಯಿಕ ಹೀರೋಗೆ ಬೇಕಾದ ಎತ್ತರವಾಗಲೀ, ಮುಖವಾಗಲೀ, ಧ್ವನಿಯಾಗಲೀ, ಮೈಕಟ್ಟಾಗಲೀ, ಇವರಿಗಿಲ್ಲ. ಈ ಮೈನಸ್‌ ಪಾಯಿಂಟ್‌ಗಳನ್ನೇ ಪ್ಲಸ್‌ ಆಗಿಸಿಕೊಳ್ಳುವ ಯತ್ನದಲ್ಲಿದ್ದಾರೆ ಓಂ.

ತಮಿಳು, ತೆಲುಗಿನಲ್ಲಿ ಇಂಥಾ ಒರಟು ಮುಖಗಳನ್ನು ಜನ ಸ್ವೀಕರಿಸಿದ್ದಾರೆ. ಓಂ ಪ್ರಕಾಶ್‌ ಕೂಡ ತಮ್ಮ ನಿಲುವಿಗೆ ಒಪ್ಪುವ ಕತೆಯನ್ನೇ ಹೆಣೆದಿದ್ದಾರೆ. ಭೂಗತ ಜಗತ್ತಿನ ಮಾಮೂಲು ರೌಡಿಯಾಬ್ಬನ ಕತೆಯಿದು. ಆತ ಡಾನ್‌ ಅಲ್ಲ, ಬೀದಿಯಲ್ಲಿ ಹೊಡೆದಾಡುವ ಗೂಂಡಾ. ಆತನಿಗೆ ನೆರವಾಗುವುದಕ್ಕೆ ಒಬ್ಬ ಪತ್ರಕರ್ತೆ. ಕೊನೆಗೆ ರೌಡಿಸಂಗೆ ಕೊನೆ ಹಾಡುವುದು ಹೇಗೆ ಅನ್ನುವ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದಂತೆ.

ಓಂ ಪ್ರಕಾಶ್‌ ನಿರ್ದೇಶನದ ಇತರೆ ಚಿತ್ರಗಳಂತೆ 'ಸಚ್ಚಿ" ಕೂಡ ದುಬಾರಿ ಚಿತ್ರವಾಗಲಿದೆ. ಹೊಡೆದಾಟದ ದೃಶ್ಯಗಳಿಗೆ ಗ್ರಾಫಿಕ್‌ ತಂತ್ರಜ್ಞಾನ ಅಳವಡಿಸಲಾಗುವುದು. ಜೊತೆಗೆ ಡಿಟಿಎಸ್‌ ಧ್ವನಿವ್ಯವಸ್ಥೆಯೂ ಇದೆ. ನಿರ್ಮಾಪಕರ ಒತ್ತಾಯದ ಮೇರೆಗೆ ನಾಯಕನಾದೆ ಎನ್ನುವ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಓಂಪ್ರಕಾಶ್‌, ಕತೆ ಬಗ್ಗೆ ನೂರಕ್ಕೆ ನೂರು ಗ್ಯಾರಂಟಿ ಕೊಡ್ತಾರೆ. ಇದು ಇಂದಿನ ಭೂಗತ ಜಗತ್ತಿನ ಸಮಸ್ತ ವಿದ್ಯಮಾನಗಳ್ನೂ ತೋರಿಸಲಿದೆ ಅನ್ನುತ್ತಾರೆ.

ಓಂ ಪ್ರಕಾಶ್‌ ಹೆಸರಿನ ಮಹಿಮೆಯೋ ಅಥವಾ ಅದೃಷ್ಟದ ಕೈವಾಡವೋ, ಸಚ್ಚಿ ಚಿತ್ರ ಸೆಟ್ಟೇರುವ ಮುನ್ನವೇ ರಾಜ್ಯದ ಕೆಲವು ಪ್ರದೇಶಗಳಿಗೆ 25 ಲಕ್ಷಕ್ಕೆ ಮಾರಾಟವಾಗಿದೆ. ತೆಲುಗು, ತಮಿಳು ಮಾರುಕಟ್ಟೆಯಿಂದಲೂ ಬೇಡಿಕೆ ಬಂದಿದೆ. ಈಗಿನ ಟ್ರೆಂಡ್‌ನಲ್ಲಿ ಯಾರು ಬೇಕಾದರೂ ಹೀರೋ ಆಗಬಹುದು ಅನ್ನುವುದನ್ನು ಓಂಪ್ರಕಾಶ್‌ ಸಾಬೀತು ಪಡಿಸಿದ್ದಾರೆ.

English summary
Kannada film director Omprakash is acting as Hero in sachhi
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada