ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದ್ದ 27 ದೃಶ್ಯಗಳ ಜೊತೆಗೆ ಒಟಿಟಿಗೆ ಬರಲಿದೆ ಅಕ್ಷಯ್ ಕುಮಾರ್ ನಟನೆಯ ಓಎಂಜಿ 2!
ವಿವಾದ, ಪ್ರಕರಣ, ಕೊಲೆ ಬೆದರಿಕೆಗಳಿಂದ ಸುದ್ದಿಯಲ್ಲಿದ್ದ ಅಕ್ಷಯ್ ಕುಮಾರ್ ನಟನೆಯ 'ಓ ಮೈ ಗಾಡ್ 2' ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಜೊತೆಗೆ ಯಾಮಿ ಗೌತಮ್ ನಟಿಸಿದ್ದರು. ಈ ಸಿನಿಮಾಗೆ ಸೆನ್ಸಾರ್ ಬೋರ್ಡ್ 'ಎ' ಪ್ರಮಾಣ ಪತ್ರ ನೀಡಿತ್ತು.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಶಿವನ ಅವತಾರದಲ್ಲಿ ಚಿತ್ರಿಸಲಾಗಿದೆ. ಶೂ, ಜಟೆಗಳನ್ನು ಧರಿಸಿ ಮಾಡ್ರನ್ ಶಿವನಂತೆ ತೋರಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಜೊತೆಗೆ ಅಕ್ಷಯ್ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡಿದರೇ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿತ್ತು. ಈ ಎಲ್ಲಾ ವಿವಾದಗಳಿಗೆ ಕಾರಣವಾಗಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ಓ ಮೈ ಗಾಡ್ 2 ಒಟಿಟಿಗೆ ಬರಲಿದೆ.

ಸೆನ್ಸಾರ್ ಕಟ್ ಇಲ್ಲದೆ ಒಟಿಟಿಗೆ ಓಎಂಜಿ 2!
ಹದಿಹರೆಯದವರಿಗೆ ನೀಡಬೇಕಾದ ಲೈಂಗಿಕ ಶಿಕ್ಷಣದ ಸುತ್ತ ಈ ಚಿತ್ರ ಸುತ್ತುತ್ತದೆ. ಶಾಲಾ- ಕಾಲೇಜುಗಳಲ್ಲಿ, ಮನೆಗಳಲ್ಲಿಯೂ ಕೂಡ ಅವರಿಗೆ ಅವಶ್ಯಕವಿರುವ ಲೈಂಗಿಕ ಶಿಕ್ಷಣ ನೀಡುವುದು ಎಲ್ಲರ ಕರ್ತವ್ಯ ಎಂದು ಸಿನಿಮಾ ವಾದಿಸುತ್ತದೆ. ಆದರೆ, ಈ ಸಿನಿಮಾದಲ್ಲಿ ದೇವರನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಪ್ರತಿಭಟನೆಗಳು ನಡೆದು ಚಿತ್ರಕ್ಕೆ ಎ ಪ್ರಮಾಣಪತ್ರ ದೊರೆತಿತ್ತು.
'OMG 2' ಸಿನಿಮಾದಲ್ಲಿ 27 ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿತ್ತು. ಬಳಿಕ 'ವಯಸ್ಕರಿಗೆ ಮಾತ್ರ' ಎಂಬ ಎ ಪ್ರಮಾಣಪತ್ರವನ್ನು ನೀಡಿತ್ತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೇ, ಕಳೆದ 12 ವರ್ಷಗಳಲ್ಲಿ ಎ ಪ್ರಮಾಣಪತ್ರ ಪಡೆದ ಅಕ್ಷಯ್ ಕುಮಾರ್ ಅವರ ಮೊದಲ ಚಿತ್ರವಾಗಿದೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಅಮಿತ್ ರೈ ಅವರು ಸಿನಿಮಾಗೆ ಎ ಸರ್ಟಿಫಿಕೇಟ್ ಬಂದಿದ್ದು ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಚಿತ್ರವು ಒಟಿಟಿಯಲ್ಲಿ ಯಾವುದೇ ಸೆನ್ಸಾರ್ ಕಟ್ ಇಲ್ಲದೆ ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ಓ ಮೈ ಗಾಡ್ 2'
ಅಕ್ಷಯ್ ಕುಮಾರ್ ಅವರ 'ಓ ಮೈ ಗಾಡ್ 2' ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ನಟಿಸಿರುವ ಈ ಚಿತ್ರವು 2012 ರ ಬ್ಲಾಕ್‌ಬಸ್ಟರ್‌ನ ಮುಂದುವರಿದ ಭಾಗವಾಗಿದೆ, ಇದರಲ್ಲಿ ಪರೇಶ್ ರಾವಲ್ ಕೂಡ ನಟಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಮಿತ್, " ಎಲ್ಲರೂ ನೋಡುವಂತೆ ನಾವು ಚಲನಚಿತ್ರವನ್ನು ನಿರ್ಮಿಸಿದ್ದೇವು. ಆದರೆ ಈ ಪ್ರಮಾಣಪತ್ರದಿಂದ ನಮಗೆ ಆಘಾತವಾಗಿದೆ. ನಮಗೆ ಯು/ಎ ಸರ್ಟಿಫಿಕೇಟ್ ನೀಡುವಂತೆ ಅವರನ್ನು ಬೇಡಿಕೊಂಡೆವು (12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ಚಲನಚಿತ್ರವನ್ನು ವೀಕ್ಷಿಸಬಹುದು) ಆದರೆ ಅವರು ನೀಡಲಿಲ್ಲ. ಕೊನೆಯವರೆಗೂ ಅವರನ್ನು ಒಪ್ಪಿಸಲು ಪ್ರಯತ್ನಿಸಿದೆವು. ಆದರೆ, ಆಗಲಿಲ್ಲ" ಎಂದು ಹೇಳಿದ್ದಾರೆ.
ಓ ಮೈ ಗಾಡ್ 2 ನ ಒಟಿಟಿ ಬಿಡುಗಡೆ ಬಗ್ಗೆ ಮಾತನಾಡಿರುವ ಅವರು, ಯಾವುದೇ ಸೆನ್ಸಾರ್ ಕಟ್ ಇಲ್ಲದೆ ಬಿಡುಗಡೆಯಾಗುತ್ತದೆ ಎಂದಿದ್ದಾರೆ. "ಜನರು ಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂಬುದೇ ನಮಗೆ ಸಂತೋಷ. ಚಿತ್ರದ ಉದ್ದೇಶವು ಶುದ್ಧವಾಗಿತ್ತು. ಯಾರೂ ಪ್ರೇಕ್ಷಕರನ್ನು ಟೈಟಲ್ ಮಾಡಲು ಬಯಸಲಿಲ್ಲ, ಆದ್ದರಿಂದ ಅವರು ಅದನ್ನು ಇಷ್ಟಪಟ್ಟಿದ್ದಾರೆ. ನಾವು ಸಿನಿಮಾವನ್ನು ಅಸಭ್ಯವೆಂದು ತೋರದ ರೀತಿಯಲ್ಲಿ ನಿಭಾಯಿಸಿದ್ದೇವೆ. ಹಾಸ್ಯಮಯ ರೀತಿಯಲ್ಲಿ ವಾಸ್ತವದ ಬಗ್ಗೆ ಮಾತನಾಡಿದ್ದೇವೆ" ಎಂದು ತಿಳಿಸಿದ್ದಾರೆ.


Click it and Unblock the Notifications











