»   » ಚಿತ್ರದ ಹೆಸರು ಧ್ರುವ. ಓಂಪುರಿಯೇ ಇನ್ಸ್‌ಪೆಕ್ಟರ್‌ ಮಾವ!

ಚಿತ್ರದ ಹೆಸರು ಧ್ರುವ. ಓಂಪುರಿಯೇ ಇನ್ಸ್‌ಪೆಕ್ಟರ್‌ ಮಾವ!

Posted By: Staff
Subscribe to Filmibeat Kannada

ಎ.ಕೆ.47 ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರದ ಮೂಲಕ ಮಿಂಚಿದ್ದ ಓಂ ಪುರಿ ಮತ್ತೆ ಅದೇ ವೇಷ ಹಾಕಲು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಚಿತ್ರದ ಹೆಸರು ಧ್ರುವ. ಎ.ಕೆ.47ಗೆ ಹಿಂದಿ ಹಾಗೂ ಕನ್ನಡದ ಚುರುಕು ಸಂಭಾಷಣೆ ಬರೆದಿದ್ದ ಎಂ.ಎಸ್‌.ರಮೇಶ್‌ ಅವರದ್ದೇ ಕತೆ ಹಾಗೂ ನಿರ್ದೇಶನ. ಸುರೇಶ್‌ ಗೌಡ ಮತ್ತು ಪಿ.ಎಸ್‌.ಶ್ರೀನಿವಾಸ್‌ ನಿರ್ಮಾಪಕರು.

ಜನವರಿ 17, ಗುರುವಾರ ಧ್ರುವ ತಂಡ ಆಯೋಜಿಸಿದ್ದ ಪ್ರೆಸ್‌ ಮೀಟ್‌ಗೆ ಓಂ ಪುರಿ ಬರೋಬ್ಬರಿ ಒಂದು ತಾಸು ಲೇಟ್‌. 'ಬೆಂಗಳೂರು ಚೆನ್ನಾಗಿದೆ. ಆದರೆ ಟ್ರಾಫಿಕ್ಕಿನ ಕಿರಿಕ್ಕೂ ಜಾಸ್ತಿಯಾಗಿದೆ ಕೂಡ. ಚೀನಾ ಪ್ರಧಾನಿ ರುಂಗ್ಜಿ ಭರಾಟೆಯಿಂದ ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕಿಕೊಂಡೆ" ಅಂತ ಅಪಾಲಜೀಸ್‌ ಕೇಳಿಯೇ ನಗುವಿನೊಂದಿಗೆ ತಂಡ ಸೇರಿಕೊಂಡರು.

ಸಿನಿಮಾ ಬಗ್ಗೆ ಓಂಪುರಿ ಮಾತು....

ಎ.ಕೆ.47 ಚಿತ್ರಕ್ಕೆ ಎಂ.ಎಸ್‌.ರಮೇಶ್‌ ಸೊಗಸಾಗಿ ಸಂಭಾಷಣೆ ಬರೆದಿದ್ದರು. ಕಾಂಟೆಂಪರರಿ ವಿಷಯಗಳನ್ನ ಸಿನಿಮಾ ಮಾಡುವ ಅವರ ಉದ್ದೇಶ ಶ್ಲಾಘನೀಯ. ಈ ವಿಷಯದಲ್ಲಿ ರಮೇಶ್‌, ಮಣಿರತ್ನಂ ಹಾಗೂ ವಿನೋದ್‌ ಚೋಪ್ರಾ ತರಹ. ರಾಜಕಾರಣದ ಕೂಪಕ್ಕೆ ಬಿದ್ದು ನಲುಗುವ ಯುವಕನೇ ನಾಯಕ. ಆತನನ್ನು ಕೂಪದಿಂದ ಹೊರಗೆ ತೆಗೆಯುವಂಥ ಪಾತ್ರ ನನ್ನದು. ವಿದ್ಯಾರ್ಥಿಗಳನ್ನು ರಾಜಕಾರಣಿಗಳು ಶೋಷಿಸಕೂಡದು ಅನ್ನುವುದು ಕತೆಯ ಸಂದೇಶ. ಸಬ್ಜೆಕ್ಟ್‌ ತುಂಬಾ ಚೆನ್ನಾಗಿದೆ.

ಅಂದು- ಇಂದು : ಓಂಪುರಿ ಫ್ಯಾಷ್‌ಬ್ಯಾಕ್‌ಗೆ ಹೋದರು... '1975. ಆಗಿನ್ನೂ ನಾನು ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿದ್ದೆ. ಬಿ.ವಿ.ಕಾರಂತ್‌ ಬೆಂಗಳೂರಿಗೆ ಕರೆಸಿದ್ದರು. ಚೋರ್‌ ಚೋರ್‌ ಚುಂಟಾ ಅನ್ನುವ ಸಿನಿಮಾ ಅದು. ಆಮೇಲೆ ತಬ್ಬಲಿಯು ನೀನಾದೆ ಮಗನೆ ಕನ್ನಡ ಚಿತ್ರದಲ್ಲಿ ಆ್ಯಕ್ಟ್‌ ಮಾಡಿದೆ".

ಒರಟು ಮುಖದ ಓಂಪುರಿ ಈಗ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಾತ್ರಕ್ಕೆ ಹೇಳಿ ಮಾಡಿಸಿದವರು ಎಂಬ ನಂಬಿಕೆ ಗಿಟ್ಟಿಸಿಕೊಂಡಿದ್ದಾರೆ. ಹಿಂದಿ ಚಿತ್ರ ಗುಪ್ತ್‌ ಹಾಗೂ ಕನ್ನಡದ ಎ.ಕೆ.47 ಇದಕ್ಕೆ ಪ್ರಮುಖ ನಿದರ್ಶನಗಳು. ಮೊನ್ನೆಯಷ್ಟೆ ಬಿಡುಗಡೆಯಾಗಿರುವ ಬಾಲಿವುಡ್‌ ಕಾಲಿಂಗ್‌ ಚಿತ್ರದ ಅಭಿನಯಕ್ಕೂ ಓಂಪುರಿಗೆ ಶಹಬ್ಭಾಸ್‌ಗಿರಿ ಸಿಕ್ಕಿದೆ.

ಕನ್ನಡಕ್ಕೆ ಇನ್ನೊಂದು ಹೊಸ ಮುಖ ಶರೀನ್‌ : ಧ್ರುವ ಚಿತ್ರದ ನಾಯಕಿ ಶರೀನ್‌. ಬಾಲ್ಡ್‌ವಿನ್‌ನ ಮೊದಲ ಪಿಯೂಸಿ ವಿದ್ಯಾರ್ಥಿನಿ. ರೀಮೇಕಿಗೆ ಒಲ್ಲೆ ಅನ್ನುವುದು ಈಕೆಯ ದೃಢ ನಿರ್ಧಾರ. ನೀಲ ಮೇಘ ಶ್ಯಾಮದ ಆಫರನ್ನು ಶರೀನ್‌ ರಿಜೆಕ್ಟ್‌ ಮಾಡಿದ್ದಾರೆ. ಅಂದಹಾಗೆ, ಶರೀನ್‌ ನಟಿಸುತ್ತಿರುವ ಎರಡನೇ ಚಿತ್ರವಿದು. ಈಗಾಗಲೇ ತಮಿಳು ಚಿತ್ರವೊಂದರಲ್ಲಿ ಈಕೆ ನಟಿಸಿ ಆಗಿದೆ.

English summary
Om Puri is back to the action in Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada