'ಕಾಟೇರ'ನ ಆರ್ಭಟಕ್ಕೆ ಬ್ರೇಕ್ ಹಾಕುವವರಿಲ್ಲ; 'ರೋಣ', 'ಜೇಮ್ಸ್' ಹಿಂದಿಕ್ಕಿ ಮತ್ತೊಂದು ಹೊಸ ದಾಖಲೆ
ಥಿಯೇಟರ್‌ಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಪ್ರದರ್ಶನ ಇನ್ನು ನಿಂತಿಲ್ಲ. ಓಟಿಟಿಗೆ ಬಂದು ಎರಡು ವಾರ ಕಳೆದರೂ ಇನ್ನು ಕೆಲವೆಡೆ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇನ್ನು ಜೀ5ನಲ್ಲಿ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಡಿಸೆಂಬರ್ 29ಕ್ಕೆ ತೆರೆಕಂಡಿದ್ದ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 200 ಕೋಟಿ ರೂ.ಗೂ ಅಧಿಲ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚರ್ಚೆ ನಡೆದಿತ್ತು. ಇತ್ತೀಚೆಗೆ ಸಿನಿಮಾ 50 ದಿನಗಳ ಸಂಭ್ರಮಾಚರಣೆ ಮಾಡಲಾಗಿದೆ. ಈ ವೇಳೆ ಇಡೀ ಚಿತ್ರತಂಡ ಭಾಗಿ ಆಗಿ ಸಂಭ್ರಮಿಸಿತ್ತು. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಬ್ಲಾಕ್‌ಬಸ್ಟರ್ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಬರೀ ಕನ್ನಡದಲ್ಲಿ ಅದು ಕೂಡ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಚಿತ್ರಕ್ಕೆ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.
ಕೆಲವೆಡೆ ಜನ ಟ್ರ್ಯಾಕ್ಟರ್ ಮಾಡಿಕೊಂಡು ಬಂದು ಚಿತ್ರಮಂದಿರಗಳಲ್ಲಿ 'ಕಾಟೇರ' ಸಿನಿಮಾ ನೋಡಿದ್ದರು. ಹಳ್ಳಿ ಜನರ ನೋವು ನಲಿವಿನ ಕಥೆಯನ್ನು ತೆರೆಗೆ ತಂದ ಪರಿ ಎಲ್ಲರಿಗೂ ಇಷ್ಟವಾಗಿತ್ತು. 70ರ ದಶಕದ ಕರ್ನಾಟಕದ ಹಳ್ಳಿಗಳ ನೈಜ ಚಿತ್ರಣವನ್ನು ಸಾಧ್ಯವಾದಷ್ಟು ತೆರೆಗೆ ತರುವಲ್ಲಿ ಚಿತ್ರತಂಡ ಗೆದ್ದಿತ್ತು. ಇದೇ ಕಾರಣಕ್ಕೆ ಭೀಮ್ನಳ್ಳಿ ಕಥೆ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿತ್ತು.
ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ಕಾಟೇರ' ಚಿತ್ರವನ್ನು ಸೊಗಸಾಗಿ ತೆರೆಗೆ ತರಲಾಗಿತ್ತು. ಮಾಸ್ತಿ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಬೆಂಗಳೂರಿನಲ್ಲಿ ಇನ್ನು ಐದಾರು ಶೋಗಳಲ್ಲಿ ಇಂದಿಗೂ 'ಕಾಟೇರ' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ನಡುವೆ ಬುಕ್‌ಮೈ ಶೋನಲ್ಲಿ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಕೆಲ ದಿನಗಳ ಹಿಂದೆ ಬುಕ್‌ಮೈಶೋನಲ್ಲಿ ಮಾತ್ರ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದ್ದು ಸುದ್ದಿ ಆಗಿತ್ತು.

ಇದೀಗ ಬುಕ್‌ಮೈ ಶೋನಲ್ಲಿ ಅತಿ ಹೆಚ್ಚು ವೋಟ್ಸ್ ಪಡೆದ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ 'ಕಾಟೇರ'ನ ಆರ್ಭಟ ಶುರುವಾಗಿದೆ. 59 ಸಾವಿರದ 600 ವೋಟ್ಸ್ ಪಡೆದು ದರ್ಶನ್ ಸಿನಿಮಾ ಸದ್ದು ಮಾಡ್ತಿದೆ. ಆ ಮೂಲಕ 'ಜೇಮ್ಸ್' ಸಿನಿಮಾ ದಾಖಲೆಯನ್ನು ಹಿಂದಿಕ್ಕಿ 'ಕಾಟೇರ' ಸಿನಿಮಾ ಮುನ್ನುಗ್ಗಿದೆ.
ಬುಕ್‌ಮೈ ಶೋನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡುವವರು ಮಾತ್ರ ವೋಟ್ ಮಾಡುವ ರೇಟಿಂಗ್ ನೀಡಲು ಅವಕಾಶ ಇರುತ್ತದೆ. ಆ ಲೆಕ್ಕದಲ್ಲಿ 'ಕಾಟೇರ' ಚಿತ್ರಕ್ಕೆ 59 ಸಾವಿರದ 600 ವೋಟ್ಸ್ ಸಿಕ್ಕಿದೆ. ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಚಿತ್ರಕ್ಕೆ 59 ಸಾವಿರದ 500 ವೋಟ್ಸ್ ಸಿಕ್ಕಿತ್ತು. ಆದರೆ 'ಜೇಮ್ಸ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಇನ್ನು ಈ ಲಿಸ್ಟ್‌ನಲ್ಲಿ 'ವಿಕ್ರಾಂತ್ ರೋಣ' ಚಿತ್ರಕ್ಕೆ ಸಿಕ್ಕಿದ್ದು 41 ಸಾವಿರದ 200 ವೋಟ್‌ಗಳು ಮಾತ್ರ.,
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬಂದಿತ್ತು. ಆದರೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ 'ಕಾಟೇರ' ಸಿನಿಮಾ 'ವಿಕ್ರಾಂತ್ ರೋಣ' ಹಾಗೂ 'ಜೇಮ್ಸ್' BMS ವೋಟ್ಸ್ ಮೀರಿಸಿದೆ. ಇನ್ನು ಈ ಪಟ್ಟಿಯಲ್ಲಿ ಯಶ್ ನಟನೆಯ 'KGF' ಹಾಗೂ ರಿಷಬ್ ಶೆಟ್ಟಿ 'ಕಾಂತಾರ' ಚಿತ್ರಗಳು ಮೊದಲ ಎರಡು ಸ್ಥಾನಗಳಲ್ಲಿ ಜಾಗ ಮಾಡಿಕೊಂಡಿವೆ.


Click it and Unblock the Notifications










