ಕದನ ವಿರಾಮ ; ಫ್ಯಾನ್ಸ್ ವಾರ್ ನಡುವೆ ದರ್ಶನ್‌ಗೆ ಸುದೀಪ್ ಶುಭ ಹಾರೈಕೆ -ಜಗಳಕ್ಕಿಳಿದಿದ್ದವರೆಲ್ಲ ತಬ್ಬಿಬ್ಬು
ದರ್ಶನ್ ಮತ್ತು ಸುದೀಪ್ ಕನ್ನಡ ಚಿತ್ರರಂಗದ ಎರಡು ಪ್ರಮುಖ ಆಧಾರಸ್ತಂಭ. ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ.. ಇಬ್ಬರು ಅದ್ಯಾವ ಮುಹೂರ್ತದಲ್ಲಿ ಪರಸ್ಪರ ಮುಖ ತಿರುಗಿಸಿದರೋ..? ಗೊತ್ತಿಲ್ಲ. ಅಲ್ಲಿಂದ ಶುರುವಾದ ಎರಡು ಬಣದ ನಡುವಿನ ಅಸಹನೆ.. ಅಸಮಾಧಾನ.. ಕೋಪ.. ತಾಪ.. ಈ ಕ್ಷಣದವರೆಗೆ ಕೂಡ ಮುಂದುವರೆದುಕೊಂಡು ಬಂದಿದೆ. ವರ್ಷಾನು ವರ್ಷ ಆರಡಿ ಎತ್ತರದ ನಾಯಕರ ನಡುವೆ ಇದ್ದ ಅಂತರ ಹೆಚ್ಚಾಗುತ್ತಲೇ ಬಂದಿದೆ.
ಹಾಗಂಥ ಇಬ್ಬರಲ್ಲಿ ಒಬ್ಬರು ಕೂಡ ಸ್ನೇಹದ ಹಸ್ತ ಚಾಚಲಿಲ್ಲ ಅಂತಲ್ಲ. ಕಾಲ ಕಾಲಕ್ಕೆ ಸುದೀಪ್ ತುಂಬಾನೇ ಸಂಯಮದಿಂದ ದರ್ಶನ್ ಅವರ ಬಗ್ಗೆ ಮಾತನಾಡುತ್ತಾನೇ ಬಂದಿದ್ದಾರೆ. ತಮ್ಮ ಸ್ನೇಹದ ಆ ದಿನಗಳನ್ನೂ ಮೆಲುಕು ಹಾಕಿದ್ದಾರೆ. ಸ್ನೇಹದ ಹಸ್ತವನ್ನೂ ಕೂಡ ಚಾಚಿದ್ದಾರೆ. ಆದರೆ ಇಲ್ಲಿಯವರೆಗೆ ಸುದೀಪ್ ಅವರ ಈ ನಡೆ ಮತ್ತು ನುಡಿಗಳಿಗೆ ಯಾವುದೇ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿಲ್ಲ.

ಇನ್ನೂ ಹಿಂದೊಮ್ಮೆ ದರ್ಶನ್ ಕಾರು ಮೈಸೂರಿನಲ್ಲಿ ಅಫಾತಕ್ಕೀಡಾಗಿತ್ತಲ್ಲ. ಆಗ ಅಭಿಮಾನಿಗಳ ಹರಕೆ ಹಾರೈಕೆ ಫಲ ಎಂಬಂತೆ ದರ್ಶನ್ ಚಿಕ್ಕ ಪುಟ್ಟ ಗಾಯಗಳ ಹೊರತಾಗಿ ಅಪಾಯದಿಂದ ಪಾರಾಗಿದ್ದರು. ಆಗ ಸುದೀಪ್ ಮಾಡಿದ್ದ ಟ್ವಿಟ್ ಒಂದು ಹಲವರಲ್ಲಿ ಆಶಾಭಾವನೆ ಬಿತ್ತಿತ್ತು. ಯಾಕೆಂದರೆ.. ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಬೇಗನೆ ಹುಷಾರಾಗು ಗೆಳೆಯಾ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಸುದೀಪ್.
ಆದರೆ ಈಗ ಆಸೆ ಬತ್ತಿ ಹೋಗಿದೆ. ಕೆಲ ದಿನಗಳಿಂದ ನಡೆದ ವಿದ್ಯಮಾನಗಳಿಂದ ಹಲವರಿಗೆ ಬೇಸರವಾಗಿದೆ. ಸುದೀಪ್ ಮಾತನಾಡಿದ ಯುದ್ಧದ ಮಾತು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುತ್ತಿನ ಯುದ್ಧಕ್ಕೆ ನಾಂದಿ ಹಾಡಿದೆ. ಇಂತಹ ಸಮಯದಲ್ಲಿ ಅಚ್ಚರಿದಾಯಕವಾಗಿ ಸುದೀಪ್ ಮತ್ತೊಮ್ಮೆ ತಮ್ಮ ಒಂದ್ಕಾಲದ ಗೆಳೆಯ ದರ್ಶನ್ ಕುರಿತು ಮಾತನಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ದರ್ಶನ್ ಮೇಲೆ ತಮಗಿರುವ ಪ್ರೀತಿಯನ್ನು ಮತ್ತೊಮ್ಮೆ ಜಾಹೀರು ಮಾಡಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಇನ್ನೇನು ಕೆಲವೇ ಗಂಟೆಯಲ್ಲಿ ಸುದೀಪ್ ಅಭಿನಯದ ''ಮಾರ್ಕ್'' ಬೆಳ್ಳಿಪರದೆಯ ಮೇಲೆ ಅನಾವರಣವಾಗಲಿದೆ. ಈ ಹಿನ್ನೆಲೆ.. ತಮ್ಮ ಅಭಿಮಾನಿಗಳ ಜೊತೆ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಭಿಮಾನಿಗಳು ಕೇಳುವ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡುತ್ತಿದ್ದರು.

ಇದೇ ಸಮಯದಲ್ಲಿ ಕಿರಾತಕ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ದರ್ಶನ್ ಮತ್ತು ಸುದೀಪ್ ಜೊತೆ ಇರುವ ಫೋಟೊ ಹಂಚಿಕೊಂಡು ಇವರ ಬಗ್ಗೆ ಒಂದು ಮಾತು ಹೇಳಿ ಎಂದು ಕೇಳಿದ್ದಾರೆ. ಬೇರೆಯವರಾಗಿದ್ದರೆ ಬಹುಶಃ ಈ ಪ್ರಶ್ನೆಯನ್ನು ಸ್ಕಿಪ್ ಮಾಡುತ್ತಿದ್ದರೇನೋ. ಆದರೆ ಸುದೀಪ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಸುದೀಪ್ ಅವರ ಈ ನಡೆಯಿಂದ ಕಳೆದ ಎರಡ್ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜಗಳಕ್ಕಿಳಿದಿದ್ದ ಹಲವರು ತಬ್ಬಿಬ್ಬಾಗಿದ್ದಾರೆ. ಮತ್ತೂ ಕೆಲವರು ಸುದೀಪ್ ಅವರ ಈ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಎಲ್ಲ ವೈಮನಸ್ಸು ಮರೆತು ಒಂದಾಗಿ ಎಂದು ಹೇಳುತ್ತಿದ್ದಾರೆ. ಆಶಿಸುತ್ತಿದ್ದಾರೆ. ಇವರ ನಡುವೆ ಕಿಡಿಗೇಡಿಗಳು, ಆತುರಗೆಟ್ಟವರು, ಅಭಿಮಾನದ ಹೆಸರಿನಲ್ಲಿ ರಗಳೆ ಎಬ್ಬಿಸುವವರು, ಒಬ್ಬರಿಗೊಬ್ಬರು ಕೆಸರೆರಚಿಕೊಳ್ಳುವ ಕೆಲಸವನ್ನು ನಿಯತ್ತಿನಿಂದ ಮಾಡುತ್ತಾ ಬಂದ ಕೆಲವರು ಡೆವಿಲ್ ಪೈರಸಿಗೆ ಬಲಿಯಾದಂತೆ ಮಾರ್ಕ್ ಚಿತ್ರವನ್ನು ಪೈರಸಿಗೆ ಬಲಿಯನ್ನು ನಾವು ನೀಡಿಯೇ ನೀಡುತ್ತೇವೆ ಎಂದು ಶಪಥ ಮಾಡಿದ್ದಾರೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ದರ್ಶನ್ ಬಗ್ಗೆ ಸುದೀಪ್ ಮಾಡಿರುವ ಈ ಟ್ವಿಟ್ ವೈರಲ್ ಆಗಿದೆ.


Click it and Unblock the Notifications











