ಸೂರಿ ಬದಲು ಬೇರೆ ನಿರ್ದೇಶಕ ಮಾಡ್ತಾರಾ ಟಗರು 2? ಸ್ವತಃ ಶಿವಣ್ಣ ಕೊಟ್ಟ ಉತ್ತರವಿದು!
ಮೊನ್ನೆ ( ಜುಲೈ 12 ) ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಅವರ 62ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಭರ್ಜರಿಯಾಗಿ ಆಚರಿಸಿದ್ರು. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬೆಂಗಳೂರಿನ ಶಿವರಾಜ್‌ಕುಮಾರ್ ಮನೆ ಮುಂದೆ ಬಂದು ಜಮಾಯಿಸಿದ್ದರು.
ಮತ್ತೊಂದೆಡೆ ಹಲವಾರು ಶಿವಣ್ಣನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣನ ಫೋಟೊಗಳನ್ನು ಹಾಗೂ ವಿಡಿಯೊಗಳನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು. ಹೀಗೆ ಶಿವನಣ್ಣನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಅಭಿಮಾನಿಗಳಿಗೆ ಶಿವಣ್ಣ ನಟಿಸಲಿರುವ ಮುಂದಿನ ಚಿತ್ರಗಳ ತಂಡಗಳು ಶಿವಣ್ಣನ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಶುಭ ಕೋರಿದರು.

ಹೀಗೆ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದು ಬಿಡುಗಡೆಗೊಂಡ ಪೋಸ್ಟರ್‌ಗಳ ಪೈಕಿ ಟಗರು 2 ಚಿತ್ರದ ಪೋಸ್ಟರ್ ಸಹ ಒಂದು. ಹೌದು, ಲಹರಿ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಗರು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟರ್ ಮೇಲೆ 'ಅಟೆನ್ಷನ್ ಹೀ ಈಸ್ ಕಮಿಂಗ್ ಬ್ಯಾಕ್' ಎಂದು ಬರೆದುಕೊಂಡಿದೆ.
ಈ ಮೂಲಕ ಟಗರು ಎರಡನೇ ಭಾಗ ಬಿಡುಗಡೆಯಾಗಲಿದೆಯಾ ಎಂಬ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೇ ಲಹರಿ ಫಿಲ್ಮ್ಸ್ ಈ ಅಪ್‌ಡೇಟ್ ಏನಿರಬಹುದು ಊಹಿಸುತ್ತಿರಿ ಎಂದು ಸಿನಿ ರಸಿಕರು ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಈ ಪೋಸ್ಟರ್ ಹಾಗೂ ಬರಹವನ್ನು ಕಂಡ ಕೂಡಲೇ ಇದು ಟಗರು 2 ಚಿತ್ರದ ಅಪ್‌ಡೇಟ್ ಎಂಬುದನ್ನು ಸಿನಿ ರಸಿಕರು ಊಹಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಖುಷಿ ಹೊರಹಾಕಿದ್ದಾರೆ. ಈ ಚಿತ್ರಕ್ಕೆ ಟಗರು ಚಿತ್ರವನ್ನು ನಿರ್ಮಿಸಿದ್ದ ಕೆಪಿ ಶ್ರೀಕಾಂತ್ ಒಡೆತನದ ವೀನಸ್ ಎಂಟರ್‌ಟೈನ್‌ಮೆಂಟ್ಸ್ ಬಂಡವಾಳ ಹೂಡಲಿದೆ. ಇಷ್ಟು ಮಾಹಿತಿಯನ್ನು ಬಿಟ್ಟರೆ ಪೋಸ್ಟರ್‌ನಲ್ಲಿ ಹೆಚ್ಚೇನೂ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳದೇ ಇದ್ದು, ನಿರ್ದೇಶಕರು ಯಾರಾಗಬಹುದು ಎಂಬ ಕುತೂಹಲ ಕೆರಳಿದೆ.
ಈ ಪೋಸ್ಟರ್‌ನಲ್ಲಿ ಸೂರಿ ಹೆಸರು ಇರದೇ ಇರುವುದನ್ನು ಕಂಡು ಕೆಲವರು ಚಿತ್ರವನ್ನು ಸೂರಿ ಬದಲು ಬೇರೆ ನಿರ್ದೇಶಕರು ಯಾರಾದರೂ ನಿರ್ದೇಶನ ಮಾಡಲಿದ್ದಾರಾ ಎಂಬ ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದರು. ಈ ಪ್ರಶ್ನೆಗೆ ಇದೀಗ ಸ್ವತಃ ಶಿವರಾಜ್‌ಕುಮಾರ್ ಅವರೇ ಮಾಧ್ಯಮದವರ ಜತೆ ಮಾತನಾಡಿ ಉತ್ತರಿಸಿದ್ದಾರೆ. ಟಗರು 2 ಬರ್ತಿದೆ ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ "ಮೊದಲೇ ಪ್ಲಾನ್ ಇತ್ತು ಟಗರು 2 ಬರಬೇಕು ಅಂತ. ಸೂರಿ ಅವರು ಸದ್ಯ ಬ್ಯಾಡ್ ಮ್ಯಾನರ್ಸ್‌ನಲ್ಲಿ ಬ್ಯುಸಿ ಇದ್ದಾರೆ. ಬ್ಯಾಡ್ ಮ್ಯಾನರ್ಸ್ ಮುಗಿದ ಬಳಿಕ ಬಂದು ಮಾತನಾಡ್ತೀನಿ ಅಂತ ಹೇಳಿದ್ದಾರೆ. ಏಕೆಂದರೆ ಟಗರು ಸೀಕ್ವೆಲ್ ಅನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಘೋಸ್ಟ್ ಹೇಗೆ ಶ್ರೀನಿಯವರ ವಿಷನ್ ಆಗಿದೆಯೋ ಅದೇ ರೀತಿ ಟಗರು ಸೂರಿ ಅವರ ವಿಷನ್" ಎಂದು ಹೇಳಿಕೆ ನೀಡಿ ಟಗರು 2 ಬರುವುದೂ ಪಕ್ಕಾ ಹಾಗೂ ಇದಕ್ಕೆ ಸೂರಿ ಆಕ್ಷನ್ ಕಟ್ ಹೇಳುವುದೂ ಸಹ ಪಕ್ಕಾ ಎಂದಿದ್ದಾರೆ.


Click it and Unblock the Notifications










