ಹೊಸ ಕಥೆ ಇದ್ರೆ ಮಾತ್ರ ಜನರು ಗೆಲ್ಲಿಸ್ತಾರೆ, ಕಾಂತಾರ ಗೆದ್ದದ್ದೂ ಅದೇ ಕಾರಣಕ್ಕೆ ಎಂದ ಸುದೀಪ್!
ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಯಾರು ಗೆದ್ರು, ತೆಲುಗು ಚಿತ್ರರಂಗದಲ್ಲಿ ಯಾರು ಗೆದ್ರು, ತಮಿಳಿನಲ್ಲಿ ಯಾರು ಹಿಟ್ ಕೊಟ್ರು ಹಾಗೂ ಬಾಲಿವುಡ್‌ನಲ್ಲಿ ಯಾರು ರೂಲ್ ಮಾಡ್ತಿದ್ದಾರೆ ಎಂಬ ಅಂಶಗಳ ಬಗ್ಗೆ ಸಿನಿ ರಸಿಕರು ಚರ್ಚಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಚಿತ್ರ ಸೂಪರ್ ಹಿಟ್ ಎಂದ ಕೂಡಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆ ಚಿತ್ರದ ಸಾಧನೆ ಏನು ಎಂಬ ಪ್ರಶ್ನೆ ಮೂಡಿಬಿಡುತ್ತದೆ.
ಅದರಲ್ಲೂ ಸ್ಟಾರ್ ನಟರ, ನಿರ್ದೇಶಕರ ಚಿತ್ರಗಳು ಸೆಟ್ಟೇರಿದೆ ಎಂಬ ಸುದ್ದಿ ಹೊರಬಿದ್ದ ಕೂಡಲೇ ಎಷ್ಟು ಭಾಷೆಗಳಲ್ಲಿ ತಯಾರಿಸುತ್ತಿದ್ದಾರೆ, ಯಾವ ಕಂಟೆಂಟ್ ಮೇಲೆ ಚಿತ್ರ ಮಾಡ್ತಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿಬಿಡುತ್ತದೆ. ಸ್ಟಾರ್ ನಟ, ನಿರ್ದೇಶಕರನ್ನು ಬಿಡಿ, ಯುವ ನಟ, ನಿರ್ದೇಶಕರೂ ಸಹ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಿನಿಮಾಗಳನ್ನು ಮಾಡಿ ದೇಶವ್ಯಾಪಿ ಹೆಸರು ಮಾಡಬೇಕು, ಕೇವಲ ತಮ್ಮ ಭಾಷೆಗಳ ಸಿನಿ ರಸಿಕರನ್ನು ಮಾತ್ರವಲ್ಲದೇ ಪರಭಾಷಾ ಸಿನಿ ರಸಿಕರ ಮನವನ್ನೂ ಸಹ ಗೆಲ್ಲಬೇಕು ಎಂಬ ಯೋಜನೆಯೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ತಯಾರಿಸುತ್ತಿದ್ದಾರೆ ಹಾಗೂ ಹಲವರು ಈ ಪ್ರಯತ್ನದಲ್ಲಿ ಗೆದ್ದಿದ್ದಾರೆ ಕೂಡ.
ಹೀಗೆ ದೇಶದೆಲ್ಲೆಡೆ ಪ್ಯಾನ್ ಇಂಡಿಯಾ ಎಂಬ ಸಿನಿಮಾ ಮಾರುಕಟ್ಟೆಯ ಕ್ರೇಜ್ ದೊಡ್ಡದಾಗಿ ಹರಡಿದ್ದು, ಇದರ ಕುರಿತ ಚರ್ಚೆಗಳೂ ಸಹ ಶುರುವಾಗಿವೆ. ಇನ್ನು ಈ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಹಲವು ಸಂದರ್ಶನಗಳಲ್ಲಿ ಅನೇಕ ಸ್ಟಾರ್ ನಟರು ಮಾತನಾಡಿದ್ದು, ಬಹುತೇಕರು ಪ್ಯಾನ್ ಇಂಡಿಯಾ ಬೇಕು, ಇದು ಬೆಳವಣಿಗೆಗೆ, ಬದಲಾವಣೆಗೆ ಸಹಾಯಕಾರಿ ಎಂಬುದನ್ನು ತಿಳಿಸಿದ್ದಾರೆ. ಇನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟದಲ್ಲಿ ಪಸರಿಸುವ ಮುನ್ನವೇ ದೇಶದ ಹಲವು ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಿ ಅಲ್ಲಿನ ಸಿನಿ ರಸಿಕರಿಗೆ ಪರಿಚಿತಗೊಂಡಿದ್ದ ಕಿಚ್ಚ ಸುದೀಪ್ ಸಹ ಈ ಸಾಲಿಗೆ ಸೇರ್ಪಡೆಗೊಂಡಿದ್ದು, ಪ್ಯಾನ್ ಇಂಡಿಯಾ ಪರ ಬ್ಯಾಟ್ ಬೀಸಿದ್ದಾರೆ ಹಾಗೂ ಯಾವ ರೀತಿಯ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಲಿವೆ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಚೈನೀಸ್ ಸಿನಿಮಾಗಳನ್ನು ಉದಾಹರಣೆ ನೀಡಿದ ಸುದೀಪ್
ಸಿಎನ್‌ಎನ್ ನ್ಯೂಸ್ 18 ನಡೆಸಿದ ಟೌನ್‌ಹಾಲ್ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಿಚ್ಚ ಸುದೀಪ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹೇಗೆ ಗೆಲ್ಲುತ್ತವೆ, ಯಾವ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಾಡಬೇಕು ಎಂಬುದನ್ನು ನಿರ್ಧರಿಸುವುದು ಹೇಗೆ, ಇದರ ಒತ್ತಡ ನಿರ್ಮಾಪಕರ ಮೇಲೆ ಯಾವ ರೀತಿ ಬೀಳಲಿದೆ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ ಕಿಚ್ಚ ಸುದೀಪ್ ಚೈನೀಸ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದರು. ಬೇರೆ ಭಾಷೆಗಳಿಗೆ ಡಬ್ ಮಾಡಿ ವಿಶ್ವದಾದ್ಯಂತ ತಮ್ಮ ಸಿನಿಮಾಗಳು ಹಬ್ಬುವಂತೆ ಮಾಡಿದರು, ಇಂಗ್ಲಿಷ್ ಭಾಷೆಗೆ ಡಬ್ ಆದ ಚೈನೀಸ್ ಭಾಷೆಗಳು ದೇಶದೆಲ್ಲೆಡೆ ಗೆದ್ದವು, ಪ್ರೇಕ್ಷಕನಿಗೆ ಹೊಸತನ್ನು ನೋಡುವ ಬಯಕೆ ಇರುತ್ತದೆ, ಹಾಗಾಗಿಯೇ ಹೊಸತನದಿದ್ದ ಚೈನೀಸ್ ಕೊರಿಯನ್ ಚಿತ್ರಗಳನ್ನು ಭಾರತದ ಸಿನಿ ರಸಿಕರೂ ಮೆಚ್ಚಿಕೊಂಡರು ಎಂದು ಸುದೀಪ್ ತಿಳಿಸಿದರು.

ಕಾಂತಾರ ಗೆದ್ದದ್ದೂ ಸಹ ಹೀಗೆಯೇ!
ಇದೇ ವೇಳೆ ಕಾಂತಾರ ಚಿತ್ರ ಒಂದು ಕನ್ನಡ ಚಿತ್ರ, ಕರ್ನಾಟಕದ ಆಚರಣೆಯಾದ ಭೂತಕೋಲದ ಕಥೆ ಇರುವ ಚಿತ್ರ, ಈ ಚಿತ್ರವನ್ನು ಉತ್ತರ ಪ್ರದೇಶದ ಸಿನಿ ರಸಿಕ ಮೆಚ್ಚಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಯೂ ಸಹ ಸುದೀಪ್ ಅವರಿಗೆ ಎದುರಾಯಿತು. ಇದರ ಬಗ್ಗೆಯೂ ಮಾತನಾಡಿದ ಸುದೀಪ್ ಕಾಂತಾರ ನಮ್ಮ ನಾಡಿನ ಕಥೆಯಾದರೂ ಬೇರೆ ಭಾಷೆಯ ಜನರಿಗೆ ಹೊಸತು, ಸಾಮಾನ್ಯ ಕಥೆಗಳನ್ನು ನೋಡಿರುವ ಸಿನಿ ರಸಿಕರಿಗೆ ಆ ಚಿತ್ರ ಹೊಸ ಅನುಭವವನ್ನು ನೀಡಿತು, ಚಿತ್ರ ನಿರ್ಮಿಸಿದವರು ನಮ್ಮ ಮಣ್ಣಿನ ಕಥೆಯನ್ನೇ ಚಿತ್ರ ಮಾಡಿದರು, ಅದು ಬೇರೆ ರಾಜ್ಯದ ಸಿನಿ ರಸಿಕರಿಗೆ ಹೊಸತು, ಹಾಗಾಗಿ ಗೆಲುವು ಕಂಡಿತು, ಪ್ಯಾನ್ ಇಂಡಿಯಾ ಚಿತ್ರಗಳು ಗೆಲ್ಲುವುದೇ ಈ ರೀತಿ ಎಂದು ತಿಳಿಸಿದರು.

ಆಸ್ಕರ್ ಬಗ್ಗೆಯೂ ಸುದೀಪ್ ಮಾತು
ಇನ್ನೂ ಮುಂದುವರಿದು ಸಂದರ್ಶಕ ಕೆಲವರು ಆಸ್ಕರ್ ಕುರಿತು ಭಾರತೀಯರು ಹೆಚ್ಚು ತಲೆ ಕೆಡಿಸಿಕೊಳ್ಳಬಾರದು, ಅದೊಂದು ಪಾಶ್ಚಿಮಾತ್ಯದ ಪ್ರಶಸ್ತಿ, ನಮ್ಮ ಸಿನಿಮಾಗಳಿಗೆ ನಮ್ಮ ಜನ ತೋರಿಸುವ ಮೆಚ್ಚುಗೆಯೇ ದೊಡ್ಡಮಟ್ಟದ ಪ್ರಶಸ್ತಿ ಎನ್ನುತ್ತಾರೆ, ಇದಕ್ಕೆ ಏನು ಹೇಳ್ತೀರ ಎಂದು ಸುದೀಪ್‌ಗೆ ಪ್ರಶ್ನೆ ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್ ಅದು ಅವರವರ ಅಭಿಪ್ರಾಯ, ಪ್ರತೀ ಅಭಿಪ್ರಾಯವನ್ನು ನಾವು ಗೌರವಿಸಬೇಕು ಎಂದರು. ಕೆಲವರು ಆಸ್ಕರ್‌ಗೇಕೆ ಅಷ್ಟು ಮನ್ನಣೆ ಎಂದರೆ ಅದು ಅವರ ಅಭಿಪ್ರಾಯ, ಅದನ್ನು ನಾವು ಗೌರವಿಸಬೇಕು, ಕೆಲವರು ಆಸ್ಕರ್ ಪ್ರಶಸ್ತಿಯೇ ದೊಡ್ಡದು ಎಂದರೆ ಅದನ್ನೂ ಸಹ ಗೌರವಿಸಬೇಕು ಎಂದು ಸುದೀಪ್ ತಿಳಿಸಿದರು.


Click it and Unblock the Notifications











