»   » 7 ನೇ ಯತ್ನದಲ್ಲಾದರೂ ಕಮಲ್‌ಗೆಟುಕೀತೆ ಆಸ್ಕರ್‌!

7 ನೇ ಯತ್ನದಲ್ಲಾದರೂ ಕಮಲ್‌ಗೆಟುಕೀತೆ ಆಸ್ಕರ್‌!

Posted By: ಸುಭಾಷ್‌ ಕೆ. ಝಾ
Subscribe to Filmibeat Kannada

ಮುಂಬಯಿ : ಭಾರತದ ಸಿನಿಮಾ ಜಗತ್ತು ಕಂಡ ಅದ್ಭುತ ನಟರಲ್ಲಿ ಒಬ್ಬರಾದ ಕಮಲಹಾಸನ್‌ ಅವರ ವಿವಾದಿತ ಚಿತ್ರ ಹೇ ರಾಮ್‌ ಆಸ್ಕರ್‌ ಸ್ಪರ್ಧೆಯ ಕಣದಲ್ಲಿ ಭಾರತದ ಅಧಿಕೃತ ಹುದ್ದರಿಯಾಗಿ ಪ್ರವೇಶ ಪಡೆದಿದೆ.

ಚೆನ್ನೈನಲ್ಲಿ ಮಾತಿಗೆ ಸಿಕ್ಕಿದ ಕಮಲ್‌ ಈ ವಿಷಯ ತಿಳಿಸಿದ್ದಾರೆ. ನವಂಬರ್‌ 7 ಕ್ಕೆ 47 ಕ್ಕೆ ಕಾಲಿಟ್ಟ ಅವರಿಗಿದು ಹುಟ್ಟು ಹಬ್ಬದ ಉಡುಗೊರೆ. ಅಂದಹಾಗೆ, ಆಸ್ಕರ್‌ ಕಣದಲ್ಲಿ ಕಮಲ್‌ ಅವರ ಚಿತ್ರಗಳು ಪ್ರವೇಶಿಸುತ್ತಿರುವುದು ಇದೇ ಮೊದಲೇನಲ್ಲ. ಅವರ ತೆಲುಗು ಚಿತ್ರ ಸಾಗರ ಸಂಗಮಂ, ಸ್ವಾತಿಮುತ್ಯಂ, ನಾಯಗನ್‌, ತೇವರ ಮಗನ್‌, ಕುರುಡಿಪ್ಪುನಲ್‌ ಮತ್ತು ಇಂಡಿಯನ್‌ ಚಿತ್ರಗಳು ಈಗಾಗಲೇ ಆಸ್ಕರ್‌ ಪ್ರವೇಶ ಪಡೆದು ಸ್ಪರ್ಧೆಗೆ ನಾಮಾಂಕಿತವಾಗದೇ ಮರಳಿವೆ. ಪ್ರತಿಬಾರಿಯೂ ನಿರಾಶರಾಗಿರುವ ಕಮಲ್‌ ಈ ಬಾರಿ ಪ್ರಶಸ್ತಿ ದಕ್ಕೀತೇನೋ ಅನ್ನುವ ನಿರೀಕ್ಷೆಯಲ್ಲಿದ್ದಾರೆ.

ಆದರೆ, ತಮ್ಮ ಚಿತ್ರ ಆಸ್ಕರ್‌ ಕಣ ಪ್ರವೇಶಿಸಿರುವ ಬಗ್ಗೆ ನಿರೀಕ್ಷಿತ ಪ್ರತಿಕ್ರಿಯೆ ಕಂಡುಬರದಿರುವ ಬಗ್ಗೆ ಅವರಿಗೆ ವಿಷಾದವಿದೆ. ಆಸ್ಕರ್‌ಗೆ ಪ್ರವೇಶ ಪಡೆಯುವುದು ದೇಶವೇ ಹೆಮ್ಮೆ ಪಡುವ ವಿಷಯವಾಗಿದೆ. ಆದರೆ, ಈ ವಿಷಯವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಕಮಲ್‌ ಹೇಳುತ್ತಾರೆ.

ಸಾಗರ ಸಂಗಮಂ ಮತ್ತು ಹೇ ರಾಮ್‌- ಮೆಲುಕು ಹಾಕಲು ಎರಡು ಸಾಕು

ತಮ್ಮ ಮಹತ್ವಾಕಾಂಕ್ಷೆಯ ಹೇ ರಾಮ್‌ ಚಿತ್ರದ ಬಗ್ಗೆ ಎದೆ ತುಂಬಿ ಮಾತನಾಡುವ ಕಮಲ್‌, ಚಿತ್ರದ ಮಿತಿಗಳನ್ನೂ ಒಪ್ಪುತ್ತಾರೆ. ಕೆಲವು ಹಾಡುಗಳಲ್ಲಿ ತುಸು ಅಶ್ಲೀಲತೆ ಇರುವುದನ್ನು ಸ್ಥಳೀಯ ಪ್ರೇಕ್ಷಕರಿಗಾಗಿ ಮಾಡಿಕೊಂಡ ರಾಜಿ ಅನ್ನುತ್ತಾರೆ. ತಮ್ಮ ಚಿತ್ರ ಆಸ್ಕರ್‌ ಕಣ ಪ್ರವೇಶಿಸುವ ಮೂಲಕ, ಭಾರತ ಅಂತರರಾಷ್ಟ್ರೀಯ ಸಿನಿಮಾ ಜಗತ್ತಿನ ಗಮನ ಸೆಳೆದಿದೆ ಎನ್ನುವ ಅವರು, ಇತ್ತೀಚೆಗೆ ತಾನೇ ತಮ್ಮ ಹೊಸ ದ್ವಿ ಭಾಷಾ ಚಿತ್ರ ಅಭಯ್‌ನ ಚಿತ್ರೀಕರಣವನ್ನು ಊಟಿ ಮತ್ತು ದೆಹಲಿಗಳಲ್ಲಿ ನಡೆಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನು ಮಾಡುವಷ್ಟು ಸಮರ್ಥ ನಿರ್ದೇಶಕರು ಬಾಲಿವುಡ್‌ನಲ್ಲಿದ್ದಾರೆ. ಆದರೆ ಸಿನಿಮಾ ರಂಗವನ್ನು ಆಳುತ್ತಿರುವುದು ವಾಣಿಜ್ಯೋದ್ಯಮಿಗಳು. ಏನನ್ನಾದರೂ ಹೊಸದನ್ನು ಸಾಧಿಸಬೇಕೆಂಬ ತುಡಿತ ನಟರಲ್ಲಿದ್ದಾಗ ಮಾತ್ರ ಉತ್ತಮ ಸಿನಿಮಾ ಬರಲು ಸಾಧ್ಯ ಮುಂತಾಗಿ ತಮ್ಮ ಅನ್ನಿಸಿಕೆಗಳನ್ನು ಅವರು ಬಿಚ್ಚಿಡುತ್ತಾರೆ.

ಇತ್ತೀಚೆಗೆ ನಡೆದ ಟೊರಾಂಟೊ ಚಿತ್ರೋತ್ಸವದಲ್ಲಿ ಹೇ ರಾಮ್‌ ಪ್ರದರ್ಶನ ಕಂಡು ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ. ಹಾಲೆಂಡ್‌ನ ರೊಟ್ಟೆರ್‌ ಡಂ ಚಿತ್ರೋತ್ಸವಕ್ಕೂ ಹೇ ರಾಮ್‌ ಆಯ್ಕೆಯಾಗಿದೆ.

ಹೇ ರಾಮ್‌ ನನಗಾಗಿ ನಿರ್ಮಿಸಿಕೊಂಡ ಚಿತ್ರ. ನಿಜ ಹೇಳುತ್ತೇನೆ, ನನ್ನ 170 ಚಿತ್ರಗಳಲ್ಲಿ 17 ಚಿತ್ರಕ್ಕಿಂತ ಹೆಚ್ಚಿನವುಗಳನ್ನು ಹೆಸರಿಸಲು ನನ್ನಿಂದಾಗದು. ಸಾಗರಂ ಸಂಗಮಂ ಹಾಗೂ ಹೇ ರಾಮ್‌ಗಳಲ್ಲಿ ಮಾತ್ರ ಮನಸ್ಸಿಗೆ ತೃಪ್ತಿಯಾಗುವಂತೆ ದುಡಿದಿದ್ದೇನೆ. ನನ್ನ ವೃತ್ತಿ ಜೀವನದ ಕನಸುಗಳನ್ನುಂಡು ಹೇ ರಾಮ್‌ ಹುಟ್ಟಿದೆ ಎಂದು ಕಮಲ್‌ ಹೇಳುತ್ತಾರೆ. (ಐಎಎನ್‌ಎಸ್‌)

English summary
Hey ram: indian movie contesting for oscar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada