»   » ಟೆನಿಸ್‌ ಪಟುಗಳೆಲ್ಲಾ ವಿಂಬಲ್ಡನ್‌ ಪ್ರಶಸ್ತಿಯನ್ನೊಮ್ಮೆ ಪಡೆಯಲೇಬೇಕು

ಟೆನಿಸ್‌ ಪಟುಗಳೆಲ್ಲಾ ವಿಂಬಲ್ಡನ್‌ ಪ್ರಶಸ್ತಿಯನ್ನೊಮ್ಮೆ ಪಡೆಯಲೇಬೇಕು

Posted By: Super
Subscribe to Filmibeat Kannada

ಟೆನಿಸ್‌ ಪಟುಗಳೆಲ್ಲಾ ವಿಂಬಲ್ಡನ್‌ ಪ್ರಶಸ್ತಿಯನ್ನೊಮ್ಮೆ ಪಡೆಯಲೇಬೇಕು ಎಂದು ಹಂಬಲಿಸುವಂತೆ, ಎಲ್ಲ ದೇಶದ, ಎಲ್ಲ ಭಾಷೆಯ ಚಿತ್ರನಟರೂ ತಮ್ಮ ಜೀವಿತಾವಧಿಯಲ್ಲೊಮ್ಮೆ ಪ್ರಶಸ್ತಿಗಳ ಚಕ್ರವರ್ತಿ ಆಸ್ಕರ್‌ ಪ್ರಶಸ್ತಿಯನ್ನೊಮ್ಮೆ ಪಡೆಯಲೇ ಬೇಕು ಎಂದು ಹಂಬಲಿಸುತ್ತಾರೆ.

ಭಾರತದ ಪಾಲಿಗಂತೂ ಆಸ್ಕರ್‌ ಗಗನಕುಸುಮವಾಗಿಯೇ ಪರಿಣಮಿಸಿದೆ. ಭಾರತದ ಕ್ರಿಯಾಶೀಲ ನಿರ್ದೇಶಕರನೇಕರು ಆಸ್ಕರ್‌ ಕನಸು ಕಂಡು ಶತಪ್ರಯತ್ನ ನಡೆಸಿದ್ದಾರೆ. ಆದರೆ, ಕನ್ನಡ ಚಿತ್ರಗಳು ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲೇ ಸೈ ಎನಿಸಿಕೊಳ್ಳಲೂ ಹೆಣಗಾಡುತ್ತಿವೆ. (ಕನ್ನಡ ಚಿತ್ರ ಚೋಮನದುಡಿ ಆಸ್ಕರ್‌ ಪ್ರಶಸ್ತಿಗೆ ಹೆಸರಿಸಲ್ಪಡದಿದ್ದರೂ, ದೇಶದಿಂದ ಆಸ್ಕರ್‌ಗೆ ಶಿಫಾರಸಾಗಿತ್ತು)

ಸ್ವಾತಿಮುತ್ಯಂ, ಸಾಗರ ಸಂಗಮಂ, ಥೇವರ್‌ಮಗನ್‌, ನಾಯಗನ್‌, ಇಂಡಿಯನ್‌ನಿಂದ ಸಾಧಿಸಲಾಗದ್ದನ್ನು ತಮ್ಮ ಇತ್ತೀಚಿನ ಹೇ ರಾಮ್‌ ಮೂಲಕ ಸಾಧಿಸುವ ಕನಸನ್ನು ಕಮಲಹಾಸನ್‌ ಕಂಡಿದ್ದಾರೆ.

ಕಳೆದ ವರ್ಷ ಶೇಖರ್‌ ಕಪೂರ್‌ ಎಲಿಜಬೆತ್‌ ಮೂಲಕ ಕಂಡ ಆಸ್ಕರ್‌ ಕನಸು ಕೈಗೂಡಲೇ ಇಲ್ಲ. 1983ರಲ್ಲಿ ರಿಚರ್ಡ್‌ ಅಟೆನ್‌ಬರೋ ನಿರ್ದೇಶನದ ಗಾಂಧೀ ಚಿತ್ರ ಆಸ್ಕರ್‌ ಪ್ರಶಸ್ತಿ ಗಳಿಸಿತು. (ಶೇಷ್ಠ ಚಿತ್ರ) ಭಾರತೀಯ ಕಥಾ ವಸ್ತುವಿಗೆ ದೊರೆತ ಪ್ರಥಮ ಆಸ್ಕರ್‌ ಇದು. ಆದರೆ, ಈವೆರಗೂ ಮತ್ತಾವುದೇ ಭಾರತೀಯ ಚಿತ್ರ ಆಸ್ಕರ್‌ ಪ್ರಶಸ್ತಿ ಪಡೆಯುವಲ್ಲಿ ಸಫಲವಾಗಿಲ್ಲ. ಭಾರತೀಯ ಮೂಲದ ಅಮೆರಿಕಾ ನಿವಾಸಿ ಶ್ಯಾಮಲನ್‌ ಈ ಹಾದಿಯಲ್ಲಿ ಬಹುದೂರ ಸಾಗಿದ್ದರಾದರೂ ಸ್ವಲ್ಪದರಲ್ಲಿ ಪ್ರಶಸ್ತಿ ವಂಚಿತರಾದರು. ಮೂಲ ಕತೆ ಹಾಗೂ ಕ್ರಿಯಾಶೀಲ ಅತ್ಯತ್ತಮ ನಿರ್ದೇಶಕ ಸ್ಪರ್ಧಾ ವಿಭಾಗದಲ್ಲಿ ಇವರ ಹೆಸರು ನಾಮಿನೇಟ್‌ ಆಗಿದ್ದಾಗ, ಭಾರತೀಯ ಮೂಲದ ವ್ಯಕ್ತಿಗಾದರೂ ಆಸ್ಕರ್‌ ಬರಲಿ ಎಂದು ಬಹಳ ಜನ ಚಿತ್ರಪ್ರೇಮಿಗಳು ಹಂಬಲಿಸಿದ್ದರು. ಇಲ್ಲಿ ಶ್ಯಾಮಲನ್‌ 'ಸಿಕ್ಸ್ತ್‌ ಸೆನ್ಸ್‌ " ವರ್ಕ್‌ ಆಗಲಿಲ್ಲ.

ಡಿಸ್ನಿ ಸಾಧನೆ : ವಾಲ್ಟ್‌ ಡಿಸ್ನಿ ಅತಿ ಹೆಚ್ಚು ಆಸ್ಕರ್‌ ಪ್ರಶಸ್ತಿ ಪಡೆದ ದಾಖಲೆ ಮೆರೆದಿದ್ದಾರೆ. 24 ಬಾರಿ ಆಸ್ಕರ್‌ ಹಾಗೂ 6 ಬಾರಿ ವಿಶೇಷ ಆಸ್ಕರ್‌ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. 1959 ಬೆನ್‌ಹರ್‌ 11 ಆಸ್ಕರ್‌ ಗಳಿಸಿತ್ತು. 1998ರಲ್ಲಿ ವಿಶ್ವಾದ್ಯಂತ ಭಾರಿ ಸುದ್ದಿ ಮಾಡಿದ ಟೈಟಾನಿಕ್‌ ಸಹ 11 ಆಸ್ಕರ್‌ ಪಡೆದು ಬೆನ್‌ಹರ್‌ ದಾಖಲೆ ಸಮಗೊಳಿಸಿತು. ಟೈಟಾನಿಕ್‌ 14 ಪ್ರಶಸ್ತಿಗಳಿಗೆ ಹೆಸರಿಸಲ್ಪಟ್ಟಿದ್ದ ಕಾರಣ ಮತ್ತೊಂದು ಹೊಸ ದಾಖಲೆಯನ್ನೂ ಸೃಷ್ಟಿಸಿದೆ.

ಆಸ್ಕರ್‌ ಹುಟ್ಟಿನ ಬಗ್ಗೆ ನಿಮಗೆ ಗೊತ್ತೆ : ಚಲನ ಚಿತ್ರದಲ್ಲಿ ಶಿಕ್ಷಣ, ಸಂಸ್ಕೃತಿಯ ಜತೆಗೆ ವೈಜ್ಞಾನಿಕ ಗುಣಮಟ್ಟವನ್ನು ಹೆಚ್ಚಿಸುವ ಮಹತ್ವದ ಉದ್ದೇಶದಿಂದ ಮೋಷನ್‌ ಪಿಕ್ಚರ್ಸ್‌ ಆರ್ಟ್‌ ಅಂಡ್‌ ಸೈನ್ಸ್‌ ಎಂಬ ಅಕಾಡಮಿ ಆರಂಭದಲ್ಲಿ ಜನ್ಮ ತಾಳಿತು. ಚಲನ ಚಿತ್ರ ರಂಗದ ದಿಗ್ಗಜರು ಈ ಅಕಾಡೆಮಿ ಸ್ಥಾಪಿಸಿದರು.

ಗಂಭೀರ ಸ್ವರೂಪದಿಂದ ಅಭಿವೃದ್ಧಿಯ ಪಥದಲ್ಲಿ ನಾಗಾಲೋಟದಿಂದ ಸಾಗಿದ ಈ ಅಕಾಡೆಮಿ, ಅತ್ಯುತ್ತಮ ಕೆಲಸವನ್ನು ಪ್ರಶಂಸಿಸಿ, ಹುರಿದುಂಬಿಸುವ ಕಾಯಕದಲ್ಲಿ ತೊಡಗಿತು. ಪರಸ್ಪರ ಗೌರವದ ಪ್ರತೀಕವಾಯ್ತು. 1929ರ ಮೇ 16ರಂದು ರಾತ್ರಿ ಈ ಅಕಾಡೆಮಿಯ ಗೆಳೆಯರ ಕೂಟದಲ್ಲಿ ಆಸ್ಕರ್‌ ಪ್ರಶಸ್ತಿ ಅಧಿಕೃತವಾಗಿ ಜನ್ಮಪಡೆಯಿತು.

ಆಸ್ಕರ್‌ ಬಗ್ಗೆ ಆದರ : ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ನೋಡಲು ಎಲ್ಲರೂ ನಿದ್ದೆಗೆಟ್ಟು ರಾತ್ರಿಯೆಲ್ಲಾ ಎದ್ದಿರುತ್ತಾರೆ. ಆಸ್ಕರ್‌ಬಗ್ಗೆ ಬಹಳ ಗೌರವವಿದೆ. ಒಂದು ಬಾರಿ 4 ಸಾವಿರಕ್ಕೂ ಹೆಚ್ಚು ಪ್ರಶಸ್ತಿಯ ನಾಮಪತ್ರಗಳು ಕಾಣೆಯಾಗಿದ್ದ ಹಾಗೂ 55 ಆಸ್ಕರ್‌ಪ್ರಶಸ್ತಿಗಳೇ ಕಳುವಾಗಿದ್ದ ವಿಷಯವನ್ನು ಹೊರತು ಪಡಿಸಿದಂತೆ ಆಸ್ಕರ್‌ ಬಗ್ಗೆ ಬಹಳ ಗೌರವವಿದೆ. ಆಸ್ಕರ್‌ ಅನ್ನು ಸಂಶಯ ದೃಷ್ಟಿಯಿಂದ ನೋಡುವವರೂ ಇದ್ದಾರೆ. ಅವರು ಇದಕ್ಕೆ ನಾಮಪತ್ರ ಕಳುವಾದ ಉದಾಹರಣೆಯನ್ನೇ ನೀಡುತ್ತಾರೆ. 1929ರ ತನಕ ಅಮೆರಿಕಾ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಪ್ರಶಸ್ತಿ ಈಗ ವಿಶ್ವದ ಎಲ್ಲ ಚಿತ್ರಗಳಿಗೂ ಅನ್ವಯಿಸುತ್ತದೆ. ಚಲನಚಿತ್ರ ರಂಗದ ಜೀವಮಾನದ ಸಾಧನೆಯನ್ನು ಗುರುತಿಸಿ ಸತ್ಯಜಿತ್‌ ರೇ ಅವರಿಗೆ ಆಸ್ಕರ್‌ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಬಾರಿಯಾದರೂ ಭಾರತೀಯ ಚಿತ್ರ ಆಸ್ಕರ್‌ ಗಳಿಸಲಿ ಎಂದು ಹಾರೈಸೋಣ.

English summary
This prestigious award so far evaded India even though there is abundant talent

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada