Oscar Nominations 2026 list: 'ಕಾಂತಾರ-1' ಹಾಗೂ 'ಮಹಾವತಾರ್ ನರಸಿಂಹ' ಹೊರಕ್ಕೆ
ಭಾರತೀಯ ಫಿಲ್ಮ್ ಮೇಕರ್ಸ್ ಪಾಲಿಗೆ ಆಸ್ಕರ್ ಪ್ರಶಸ್ತಿ ಇನ್ನು ಗಗನ ಕುಸುಮವಾಗಿಯೇ ಉಳಿದಿದೆ. ಪ್ರಶಸ್ತಿ ಇರಲಿ ನಾಮಿನೇಷನ್ಸ್ ಪಟ್ಟಿ ಸೇರಲು ಕೂಡ ಭಾರತದ ಸಿನಿಮಾಗಳು ವಿಫಲವಾಗುತ್ತಿವೆ. 'ಹೋಮ್‌ಬೌಂಡ್' ಮಾತ್ರವಲ್ಲ 'ಕಾಂತಾರ-1' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳು ಈ ಬಾರಿ ಅಕಾಡೆಮಿ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿವೆ.
98ನೇ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ 'ಹೋಮ್‌ಬೌಂಡ್' ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿತ್ತು. ಭಾರತದಿಂದ ಅಧಿಕೃತವಾಗಿ ಪ್ರಶಸ್ತಿ ರೇಸ್‌ಗೆ ಈ ಎರಡೂ ಚಿತ್ರಗಳು ಆಯ್ಕೆ ಆಗದಿದ್ದರೂ ಪ್ರತ್ಯೇಕ ಅರ್ಜಿ ಮೂಲಕ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 'ಕಾಂತಾರ-1' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳು ಸ್ಪರ್ಧಿಸಿದ್ದವು. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದವು. ನಿನ್ನೆ(ಜನವರಿ 22) ಆಸ್ಕರ್ ನಾಮಿನೇಷನ್ಸ್ ಲಿಸ್ಟ್ ಘೋಷಣೆ ಆಗಿದೆ. ಎರಡೂ ಚಿತ್ರಗಳಿಗೆ ನಿರಾಸೆಯಾಗಿದೆ.

'ಸಿನ್ನರ್ಸ್' ಎಂಬ ಹಾಲಿವುಡ್ ಸಿನಿಮಾ ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಟ್ ಆಗಿ ಹೊಸ ದಾಖಲೆ ಬರೆದಿದೆ. ಆದರೆ ಭಾರತದ 3 ಸಿನಿಮಾಗಳು ಒಂದೇ ಒಂದು ವಿಭಾಗದಲ್ಲಿ ನಾಮಿನೇಷನ್ ಪಡೆಯುವಲ್ಲಿ ವಿಫಲವಾಗಿದೆ. 'ಕಾಂತಾರ'-1 ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಕಳೆದ ವರ್ಷ ಸಿನಿಮಾ 800 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಕ್ರೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಆನಿಮೇಟೆಡ್ ಸಿನಿಮಾ 'ಮಹಾವತಾರ್ ನರಸಿಂಹ' ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತೆರೆಗೆ ತಂದಿತ್ತು. ಆನಿಮೇಷನ್ ಸಿನಿಮಾಗಳ ವಿಭಾಗದಲ್ಲಿ ಈ ಚಿತ್ರ ನಾಮಿನೇಷನ್ ಪಟ್ಟಿಯಲ್ಲಿ ಜಾಗ ಪಡೆಯಬಹುದು ಎಂದು ಕೆಲವರು ನಿರೀಕ್ಷಿಸಿದ್ದರು. ಅದು ಸುಳ್ಳಾಗಿದೆ.

'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಈವರೆಗೆ ಆಸ್ಕರ್ ವೇದಿಕೆಯಲ್ಲಿ ಇದು ಅಪರೂಪದ ಸಾಧನೆ ಎನ್ನಬಹುದು. ಇನ್ನುಳಿದಂತೆ ಭಾರತೀಯರು ನಿರ್ಮಿಸಿದ ಚಿತ್ರಕ್ಕೆ ಫೀಚರ್ ಸಿನಿಮಾಗಳ ವಿಭಾಗದಲ್ಲಿ ಯಾವುದೇ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಈ ಬಾರಿ 'ಕಾಂತಾರ- 1' ಸಿನಿಮಾ ಆ ಕೊರಗು ನೀಗಿಸಬಹುದು ಎಂದು ಕೆಲವರು ಭಾವಿಸಿದ್ದರು.
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ- 1' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದರು. ಅಂದಾಜು 100 ಕೋಟಿ ರೂ. ಬಜೆಟ್ ಸಿನಿಮಾ 500 ಕೋಟಿ ರೂ. ನಿರ್ಮಾಪಕರಿಗೆ ವಾಪಸ್ ತಂದುಕೊಟ್ಟಿರುವ ಅಂದಾಜಿದೆ. ಈ ಸಿನಿಮಾ ಮೂಲಕ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಷಬ್ ಅಬ್ಬರಿಸಿದ್ದಾರೆ.
ಬೆಸ್ಟ್ ಇಂಟರ್‌ನ್ಯಾಷನಲ್ ಫೀಚರ್ ಸಿನಿಮಾ ವಿಭಾಗದಲ್ಲಿ ಭಾರತದ 'ಹೋಮ್‌ಬೌಂಡ್' ಸಿನಿಮಾ ನಾಮಿನೇಟ್ ಆಗುವ ನಿರೀಕ್ಷೆ ಇತ್ತು. ಆದರೆ 'ಸೆಂಟಿಮೆಂಟಲ್ ವ್ಯಾಲ್ಯೂ' (ನಾರ್ವೆ), 'ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್' (ಫ್ರಾನ್ಸ್), 'ದಿ ಸೀಕ್ರೆಟ್ ಏಜೆಂಟ್' (ಬ್ರೆಜಿಲ್), 'ಸಿರಾತ್' (ಸ್ಪೇನ್), ಹಾಗೂ 'ದಿ ವಾಯ್ಸ್ ಆಫ್ ಹಿಂದ್ ರಜಬ್' (ಟುನೀಶಿಯಾ) ಚಿತ್ರಗಳು ಈ ವಿಭಾಗದಲ್ಲಿ ನಾಮಿನೇಟ್ ಆಗಿವೆ.
ಪ್ರತಿಬಾರಿ ಆಸ್ಕರ್ ಪ್ರಶಸ್ತಿ ಅಂದಾಗ ಭಾರತೀಯ ಸಿನಿರಸಿಕರು ಕಾತರದಿಂದ ಕಾಯುತ್ತಾರೆ. 'ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ' ಅಧಿಕೃತವಾಗಿ ಸಿನಿಮಾಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿ ಕಳುಹಿಸುತ್ತದೆ. ಆದರೆ ನಾಮಿನೇಷನ್ ಹಂತ ತಲುಪಲು ಭಾರತದ ಸಿನಿಮಾಗಳು ವಿಫಲವಾಗುತ್ತವೆ. ಕೆಲ ಫಿಲ್ಮ್ ಮೇಕರ್ಸ್ ಆಸ್ಕರ್ ಮೇಲೆ ಕಣ್ಣಿಟ್ಟು ಸಿನಿಮಾಗಳನ್ನು ಕಟ್ಟಿಕೊಡುವುದು ಇದೆ.


Click it and Unblock the Notifications











