ನಮ್ಮ ಖುಷಿ ಕೇವಲ ರೀಲ್ಸ್‌ಗಷ್ಟೇ ಸೀಮಿತವಾಗಿತ್ತು ; ಡಿವೋರ್ಸ್ ಹಿಂದಿನ ಕಾರಣ ಹೇಳಿದ ಚಂದನ್ ಶೆಟ್ಟಿ
ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.
ಇಂಥಾ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಿ ಸರಿಯಾಗಿ ಒಂದು ವರ್ಷವಾಗಿದೆ. ಆದರೆ.. ಇವತ್ತು ಕೂಡ ಇವರ ವಿಚ್ಛೇದನದ ವಿಚಾರದ ಕುರಿತು ಅನೇಕರಲ್ಲಿರುವ ಕುತೂಹಲ ಕಡಿಮೆಯಾಗಿಲ್ಲ. ಇವತ್ತು ಕೂಡ ಇಬ್ಬರು ದೂರವಾಗಿದ್ದೇಕೆ ? ಮನಸ್ತಾಪ ಶುರುವಾಗಿದ್ದು ಎಲ್ಲಿಂದ ? ಎನ್ನುವ ಪ್ರಶ್ನೆ ಹಲವರಲ್ಲಿ ಇದ್ದೇ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸದ್ಯ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಮತ್ತೊಮ್ಮೆ ಚಂದನ್ ಶೆಟ್ಟಿ ಅವರಿಗೆ ಈ ವಿಚ್ಛೇದನದ ಕುರಿತು ಪ್ರಶ್ನೆಗಳು ಎದುರಾಗಿವೆ. ಈ ಪ್ರಶ್ನೆಗಳಿಗೆ ಚಂದನ್ ಶೆಟ್ಟಿ ಉತ್ತರವನ್ನು ಕೂಡ ನೀಡಿದ್ದಾರೆ. ಹಾಗಿದ್ದರೆ ಚಂದನ್ ಶೆಟ್ಟಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ

ಮೊದಲ ಮೂರು ವರ್ಷ ಚೆನ್ನಾಗಿತ್ತು
ಈ ಕುರಿತು ಸುವರ್ಣ ನ್ಯೂಸ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಮದುವೆಯಾದ ಮೂರು ವರ್ಷದ ನಂತರ.. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ವಿಚಾರ ಅರಿವು ಆಗಲು ಶುರುವಾಯ್ತು. ಇನ್ನು ನಮ್ಮ ರೀಲ್ಸ್ ನೋಡಿದ ಅನೇಕರು ನಾವು ಚೆನ್ನಾಗಿದ್ದೇವೆ ಎಂದುಕೊಂಡಿದ್ದರು, ಆದರೆ ಆ ಖುಷಿ ರೀಲ್ಸ್‌ಗೆ ಮಾತ್ರ ಸೀಮಿತವಾಗಿತ್ತು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಯಾರನ್ನೂ ದೂಷಿಸಲು ನಾನು ಇಷ್ಟ ಪಡುವುದಿಲ್ಲ
ಮೊದಲು ಕೂಡ ನಾನು ಯಾರನ್ನು ದೂಷಿಸಿಲ್ಲ. ಈಗಲೂ ದೂಷಿಸುವುದಿಲ್ಲ ಮುಂದೆಯೂ ಕೂಡ ಬ್ಲೇಮ್ ಗೇಮ್‌ನ ನಾನು ಆಡುವುದಿಲ್ಲ ಯಾಕೆಂದರೆ ಪರಸ್ಪರ ಕೆಸರು ಎರಚಿದರೆ ಗಲೀಜಾಗುವುದು ನಾವೇ, ನೋಡುವವರಿಗೆ ಅದು ಅಸಹ್ಯ ಅನ್ಸುತ್ತೆ, ಯಾಕೆಂದರೆ ನಾವು ಹಲವಾರು ಡಿವೋರ್ಸ್‌ಗಳನ್ನು ನೋಡಿದ್ದೇವೆ, ಜಗಳ ಮಾಡಿಕೊಂಡು ದೂರ ಆಗಿರುವುದನ್ನು ನೋಡಿದ್ದೇವೆ, ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಜೀವನದ ಈ ಹಂತದಲ್ಲಿ ಇದೆಲ್ಲ ಮಾಡಿಕೊಳ್ಳುವ ಅವಶ್ಯಕತೆ ನನಗೆ ಇರಲಿಲ್ಲ, ಆದರೆ ಜೀವನ ದೊಡ್ಡದು, ನನ್ನದು ಜೀವನ ಇದೆ, ನಿವೇದಿತಾ ಅವರದ್ದು ಇನ್ನು ಚಿಕ್ಕ ವಯಸ್ಸು ಅವರದ್ದು ದೊಡ್ಡ ಬದುಕು ಇದೆ, ಇನ್ನೂ ಸಾಧನೆ ಮಾಡುವಂತಹದ್ದು ತುಂಬಾನೇ ಇದೆ ಎಂದು ಚಂದನ್ ಶೆಟ್ಟಿ ಸುವರ್ಣಗೆ ನೀಡಿದ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಡಿವೋರ್ಸ್ ಮುನ್ನ ಇಬ್ಬರು ಚರ್ಚೆ ಮಾಡಿದ್ದೇನು ?
ಎಷ್ಟೇ ಪ್ರಯತ್ನ ಮಾಡಿದರು ಕೂಡ ಹೊಂದಾಣಿಕೆಯಾಗದಿದ್ದಾಗ ಡಿವೋರ್ಸ್ ಪಡೆಯುವ ನಿರ್ಧಾರ ಮಾಡಿದ್ವಿ, ಜೊತೆಯಲ್ಲಿ ಕುಳಿತು ಮಾತನಾಡಿದ್ವಿ, ನಾವಿಬ್ಬರೂ ಜೋಡಿಯಾಗಿದ್ದು ಮಾಡುವ ಜೀವನಕ್ಕಿಂತ ನಮ್ಮಿಬ್ಬರ ವೃತ್ತಿ-ಪ್ರವೃತ್ತಿಗಳು ಮುಖ್ಯ ಎಂದಾದಾಗ ಬೇರೆಯಾಗಿ ಬದುಕುವುದು ಒಳ್ಳೆಯದು, ಅದೇ ಸರಿ ಎಂಬುದನ್ನು ಮೊದಲು ನಾವಿಬ್ಬರೂ ಮೊದಲು ನಿರ್ಧಾರ ಮಾಡಿದ್ವಿ, ಇನ್ನು ನಾವು ಇಬ್ಬರು ಖುಷಿಯಾಗಿಲ್ಲ ಎನ್ನುವುದು ನಮ್ಮ ಮನೆಯವರಿಗೆ ಕೂಡ ಗೊತ್ತಿತ್ತು, ಅವರ ಬಳಿ ಕೂಡ ಆ ನಂತರ ಚರ್ಚೆ ಮಾಡಿದ್ವಿ, ಅವರನ್ನು ಒಪ್ಪಿಸಿದ್ವಿ ಎಂದು ಹೇಳಿರುವ ಚಂದನ್ ಶೆಟ್ಟಿ ಪತ್ರಿಕಾಗೋಷ್ಠಿ ಮಾಡುವ ಮುನ್ನ ನಾನು ಮತ್ತು ನಿವೇದಿತಾ ಇಬ್ಬರು ಕುಳಿತು ಯಾವ ವಿಚಾರ ಮಾತನಾಡಬೇಕು, ಯಾವ ವಿಚಾರ ಮಾತನಾಡಬಾರದು ಎಂದು ಚರ್ಚೆಯನ್ನು ಕೂಡ ಮಾಡಿದ್ವಿ ಎಂದು ಹೇಳಿದ್ದಾರೆ.

ಇಬ್ಬರದ್ದು ಭಿನ್ನವಾದ ಅಭಿರುಚಿ
ನಿವೇದಿತಾ ಮತ್ತು ನನ್ನ ಬದುಕು ತುಂಬಾನೇ ತದ್ವಿರುದ್ದ. ಅವಳು ತುಂಬಾ ಪಾಶ್ ಹುಡುಗಿ.. ನಾನು ತುಂಬಾ ಸಿಂಪಲ್. ಲೈಫ್‌ಸ್ಟೈಲ್ ಹೊಂದಾಣಿಕೆ ಆಗುತ್ತಿರಲಿಲ್ಲ. ನಾನು ಮೊದಲ ದಿನದಿಂದ ಡಿವೋರ್ಸ್ ಆಗುವವರೆಗೂ ನಿವೇದಿತಾಗೆ ಸಪೋರ್ಟ್ ಮಾಡುತ್ತಾ ಬಂದಿದ್ದೆ. ಅವಳಿಗೆ ಏನು ಇಷ್ಟವೋ ಹಾಗೆಯೇ ಬಿಟ್ಟಿದ್ದೆ. ನನ್ನ ನಾನು ಮರೆತುಬಿಟ್ಟಿದ್ದೆ. ನನ್ನ ಪಾರ್ಟ್‌ನರ್‌ನ ಖುಷಿಯಾಗಿಡಬೇಕು ಎನ್ನುವ ಚೌಕಟ್ಟಿನಲ್ಲೇ ಇದ್ದೆ. ಆದರೆ ಎಷ್ಟು ಕಷ್ಟಪಟ್ಟರೂ ಅದು ವರ್ಕೌಟ್ ಆಗಲಿಲ್ಲ ಅಂದಾಗ ದೂರ ಆಗಬೇಕು ಎನ್ನುವ ನಿರ್ಧಾರಕ್ಕೆ ನಾವು ಇಬ್ಬರು ಬಂದೆವು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಎಲ್ಲರಿಗೂ ಬದುಕುವ ಸ್ವಾತಂತ್ರ್ಯ ಇದೆ
ಎಲ್ಲರಿಗೆ ಅವರ ಅವರ ಬದುಕು ಇದೆ. ಅವರ ಅವರಿಗೆ ಬದುಕುವ ಸ್ವಾತಂತ್ರ್ಯ ಇದೆ.. ನಾನು ಯಾವತ್ತು ಯಾರ ಕೆಲಸಕ್ಕೆ ಅಡ್ಡಿ ಪಡಿಸಿದವನಲ್ಲ. ಇರುವುದು ಒಂದೇ ಬದುಕು ನಿನಗೆ ಅನ್ಸಿದ್ದು ಮಾಡು ಎಂದು ಹೇಳುವಂತಹ ವ್ಯಕ್ತಿ ನಾನು, ಇದೇ ಸ್ವಾತಂತ್ರ್ಯವನ್ನು ನಾನು ಕೂಡ ನಿರೀಕ್ಷೆ ಮಾಡುತ್ತೇನೆ.. ನಮ್ಮ ನಡುವೆ ಕೂಡ ಆಗಿದ್ದು ಇದೆ. ಇನ್ನು.. ನಾವು ಅಧಿಕೃತವಾಗಿ ಡಿವೋರ್ಸ್ ಪಡೆದ ನಂತರ ಕೂಡ ನಾವು ಒಂದು ದಿನ ಜೊತೆಯಲ್ಲಿದ್ವಿ, ಹಿತೈಶಿಯಾಗಿ ನಾನೇ ಅವರನ್ನು ಕೋರ್ಟ್‌ದಿಂದ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದೇ ಎಂದು ಕೂಡ ಚಂದನ್ ಶೆಟ್ಟಿ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ. ಡಿವೋರ್ಸ್ ವಿಚಾರದಲ್ಲಿ ನಿವೇದಿತಾ ತುಂಬಾನೇ ಪ್ರಬುದ್ಧವಾಗಿ ವರ್ತಿಸಿದರು ಎಂದು ಕೂಡ ಹೇಳಿದ್ದಾರೆ.


Click it and Unblock the Notifications











