ಬಿ ಸರೋಜಾ ದೇವಿ ಅಂತಿಮ ದರ್ಶನ ; ಶ್ರೀನಾಥ್, ರಾಕ್‌ಲೈನ್ ವೆಂಕಟೇಶ್ ವಿರುದ್ದ ಭುಗಿಲೆದ್ದ ಆಕ್ರೋಶ
ಹುಟ್ಟು ಉಚಿತ.. ಸಾವು ಖಚಿತ.. ಆದರೆ.. ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಆಗುವ ದುಃಖ ಅಷ್ಟಿಷ್ಟಲ್ಲ. ಜೀವನ ಪೂರ್ತಿ ಆ ದುಃಖ ಮನಸ್ಸಿನಲ್ಲಿ ಇದ್ದೇ ಇರುತ್ತೆ. ಹಲವು ಬಾರಿ ಕೆಲವು ವ್ಯಕ್ತಿಗಳು ಸಾಯುವುದಕ್ಕೂ ಮೊದಲು ಒಮ್ಮೆ ಅವರ ಬಳಿ ಮಾತನಾಡಬೇಕಿತ್ತು ಎನ್ನುವ ಯೋಚನೆ ಬಂದೇ ಬರುತ್ತೆ. ಇನ್ನೂ.. ಸಾವಿನ ಮನೆಯಲ್ಲಿ ನೋವಿನ ನರ್ತನ ಇರುತ್ತೆ. ಇಂತಹ ಸಮಯದಲ್ಲಿ..
ಕೆಲ ಶಿಷ್ಟಾಚಾರಗಳನ್ನು ಪಾಲಿಸುವುದು ತುಂಬಾ ಮುಖ್ಯ. ಆದರೆ.. ಕೆಲವರು ಈ ಶಿಷ್ಟಾಚಾರಗಳನ್ನು ಪಾಲಿಸುವುದೇ ಇಲ್ಲ. ಅದರಲ್ಲಿಯೂ ಕಿರಿಯರಿಗೆ ಬುದ್ದಿ ಹೇಳಿ ತಿದ್ದಿ ತೀಡಬೇಕಾದ ಹಿರಿಯರೇ ತಾವು ಎಲ್ಲಿದ್ದೇವೆ..? ಯಾಕೆ ಬಂದಿದ್ದೇವೆ..? ಎನ್ನುವುದನೇ ಮರೆಯುತ್ತಾರೆ. ಸಾವಿನ ಮನೆಯಲ್ಲಿ ಶಿಷ್ಟಾಚಾರಗಳನ್ನೆಲ್ಲ ಗಾಳಿಗೆ ತೂರಿ ನೋಡುಗರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಉದಾಹರಣೆಗೆ ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀನಾಥ್ ಮತ್ತು ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

ಹೌದು. ಎಲ್ಲರಿಗೆ ಗೊತ್ತಿರುವಂತೆ ಭಾರತೀಯ ಚಿತ್ರರಂಗದ ಅಭಿನಯ ಸರಸ್ವತಿ.. ಕನ್ನಡದ ಗಿಳಿ.. ಬಿ.ಸರೋಜಾದೇವಿ ನಿನ್ನೆ { ಜುಲೈ 14 } ಇಹಲೋಕ ತ್ಯಜಿಸಿದರು. ಹಿರಿಯ ನಟಿಯ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಬಹುತೇಕರು ಕಣ್ಣೀರು ಹಾಕಿದರು. ಮಲ್ಲೇಶ್ವರಂನಲ್ಲಿರುವ ಸರೋಜಾದೇವಿ ಅವರ ಮನೆಗೆ ತೆರಳಿ ಅವರ ಅಂತಿಮ ದರ್ಶನವನ್ನು ಕೂಡ ಪಡೆದರು.
ಕೇವಲ ಕನ್ನಡದವರು ಮಾತ್ರ ಅಲ್ಲ ಕಮಲ್ ಹಾಸನ್.. ರಜಿನಿಕಾಂತ್.. ಅರ್ಜುನ್ ಸರ್ಜಾ.. ಹೀಗೆ ಅಕ್ಕ ಪಕ್ಕ ರಾಜ್ಯದ ಖ್ಯಾತನಾಮರೆಲ್ಲ ಸರೋಜಾ ದೇವಿಯರನ್ನು ನೆನೆದು ಬಿಕ್ಕಿದರು. ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡರು.
ಕಾಲಿವುಡ್‌ನ ಸ್ಟಾರ್‌ಗಳಾದ ವಿಶಾಲ್.. ಕಾರ್ತಿ ಕೂಡ ಬಂದು ಸರೋಜಮ್ಮನ ಅಂತಿಮ ದರ್ಶನ ಪಡೆದು ಭಾವುಕರಾದರು. ಆದರೆ.. ಸಾವಿನ ಮನೆಯಲ್ಲಿ ಶ್ರೀನಾಥ್ ಮತ್ತು ರಾಕ್ ಲೈನ್ ವೆಂಕಟೇಶ್ ನಗು ನಗುತ್ತಾ ಓಡಾಡಿಕೊಂಡಿದ್ದರು. ಸಾವಿನ ಮನೆಯಲ್ಲಿ ಕ್ಯಾಮರಾಗಳಿಗೆ ಜೊತೆಯಾಗಿ ನಿಂತು ಫೋಸ್ ಕೊಡುತ್ತಿದ್ದರು. ಇವರ ಈ ನಡೆ ಹಲವರನ್ನು ಕೆರಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಚಿತ್ರರಂಗದ ಈ ಹಿರಿಯರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಕನ್ನಡ ಚಿತ್ರರಂಗದ ಹಿರಿಯರ ಈ ನಡೆಗೆ ಹಲವಾರು ಜನ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ಧಾರೆ. ಸಾವಿನ ಮನೆಯಲ್ಲಿಯೂ ಫೋಟೊಶೂಟ್ ಮಾಡಿಸಿಕೊಳ್ಳುವ ಅವಶಕ್ಯತೆ ಇತ್ತಾ ? ಎಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸಾವಿನ ಮನೆಯಲ್ಲಿ ಫೋಟೊಶೂಟ್ ಮಾಡಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶ್ರೀನಾಥ್ ಅವರಿಂದ ಈ ನಡುವಳಿಕೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಿದ್ದಾರೆ. ಮಸಣದ ಮನೆಯಲ್ಲಿ ಮಂದಹಾಸ.. ಮುಖದಲ್ಲಿ ಒಂದೂಚೂರು ವಿಷಾದ ಇಲ್ಲ ಎಂದು ತಮ್ಮ ಬೇಸರವನ್ನು ಕೂಡ ಅನೇಕರು ಹೊರ ಹಾಕುತ್ತಿದ್ದಾರೆ.
''ಫಸ್ಟ್ ಡೇ ಫಸ್ಟ್ ಶೋ'' ಯೂಟ್ಯೂಬ್ ಚಾನೆಲ್ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು 200ಕ್ಕೂ ಅಧಿಕ ಚಿತ್ರಗಳಲ್ಲಿ 5 ಭಾಷೆಗಳಲ್ಲಿ ಅಭಿನಯಿಸಿದ್ದ, ಮೂಲತಃ ಚನ್ನಪಟ್ಟಣದ ದಶವಾರ ಗ್ರಾಮದವರಾಗಿದ್ದ ಕನ್ನಡದ ಮೇರು ನಟಿ ಬಿ ಸರೋಜಾದೇವಿಯವರ ಅಂತ್ಯಸಂಸ್ಕಾರ ಇಂದು { ಜುಲೈ 15} ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಅಂತ್ಯಸಂಸ್ಕಾರ ಕೆಲಸಗಳು ನಡೆಯಲಿವೆ ಎಂದು ಸರೋಜಾದೇವಿಯವರ ಪುತ್ರ ಗೌತಮ್ ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ಧಾರೆ.ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನ ನಡೆಯಲಿದ್ದು ಸರ್ಕಾರಿ ಗೌರವದೊಂದಿಗೆ ಬಿ ಸರೋಜಾದೇವಿಯವರ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.


Click it and Unblock the Notifications











