ಮಾಧ್ಯಮಗಳ ಸುದ್ದಿಯ ಹಸಿವಿನ ಫಲ ಇದು: ಶೇಷಾದ್ರಿ
2. ತಮ್ಮ ಈ ಹಿಂದಿನ ಚಿತ್ರಗಳ್ಯಾವುವೂ ಈ ರೀತಿಯ ವಿವಾದಕ್ಕೆ ಒಳಗಾಗಿರಲಿಲ್ಲ ಅನ್ನಿಸುತ್ತದೆ?
ಪ್ರಾಯಶಃ ನನ್ನ 'ಮುನ್ನುಡಿ' ಚಿತ್ರ ಮಾಡಿದ ಸಂದರ್ಭದಲ್ಲಿ ಒಂದು ಸೂಕ್ಷ್ಮ ಕಥಾವಸ್ತುವನ್ನು ಒಳಗೊಂಡಿತ್ತು ಅದು. ಹಾಗಾಗಿ ಮೊದಲನೆ ಸಿನಿಮಾದಲ್ಲಿ ನನಗೆ ಸ್ವಲ್ಪ ಅಳುಕಿತ್ತು. ಬ್ಯಾರಿಗಳ ಬದುಕನ್ನು ಆಧರಿಸಿ ತೆಗೆದಂತಹ ಚಿತ್ರ ಅದು. ಅಲ್ಲಿಯ ಅನುಸರಣೆಯಲ್ಲಿದ್ದ ತುಣುಕುಗಳನ್ನು ನಾನು ಚಿತ್ರಿಸಿ ತೋರಿಸಿದ್ದೆ. ಕೆಲವರು ಹೇಗೆ ಧರ್ಮವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ, ಅದು ಸಂಪೂರ್ಣ ಮುಸ್ಲಿಂ ಹಿನ್ನೆಲೆ ಚಿತ್ರವಾಗಿತ್ತು. ಆಗ ಈ ರೀತಿ ಆದರೆ ಹೇಗೆ ಎದುರಿಸುವುದು ಎಂಬ ಸಣ್ಣ ಯೋಚನೆ ಇತ್ತು.
ನಂತರ ರಾಷ್ಟ್ರೋತ್ಥಾನ ಪರಿಷತ್ತಿನ ಸ್ವದೇಶಿ ಜಾಗರಣ ವೇದಿಕೆಯವರು 'ಭಾರತ್ ಸ್ಟೋರ್ಸ್' ಚಿತ್ರವನ್ನು ನೋಡಿ, ನಮ್ಮ ವಿಚಾರಗಳಿಗೆ ಇದು ಹತ್ತಿರವಾಗಿದೆ, ನಾವು ಸಹ ಎಫ್ ಡಿಐ ವಿರುದ್ಧ ಹೋರಾಡುತ್ತಿದ್ದೇವೆ. ಇನ್ನಷ್ಟು ಬಲವನ್ನು ಕೊಡುತ್ತೆ ಎಂದು ನಂಬಿ ಅವರು ಇದನ್ನು ನೂರಾರು ಕಡೆ ತೋರಿಸ್ತೀವಿ ಎಂದು ಚಿತ್ರವನ್ನು ಕೊಂಡುಕೊಂಡರು. ಆಗ ಆ ಚಿತ್ರ ಬಿಜೆಪಿ ಪಕ್ಷದ ಹಣೆಪಟ್ಟಿ ತಲುಪಿತು. ಅದರ ನಂತರ ಪ್ರಾಯಶಃ ಈ ಚಿತ್ರವೇ ವಿವಾದಕ್ಕೆ ಗುರಿಯಾಗುತ್ತಿರುವುದು.

ನಾನಂತೂ ಕಥೆಯ ವಿಚಾರದಲ್ಲಿ ನಿರೀಕ್ಷೆಯೇ ಮಾಡಿರಲಿಲ್ಲ. ಕಥೆಯ ಮೇಲಿನ ಆರೋಪ ಏನಿದೆ ಅದು ನನ್ನ ಮಟ್ಟಿಗೆ ಅನಿರೀಕ್ಷಿತ. ಆ ಕಥೆಯನ್ನು ನಾನು ಓದಿಯೇ ಇರಲಿಲ್ಲ. ಬಹುಶಃ ಓದಿದ್ದರೆ ಸಿನಿಮಾ ಮಾಡ್ತಿದ್ದೆನೋ, ಮಾಡಿದ್ದರೂ ಅವರನ್ನು ಕೂರಿಸಿಕೊಂಡು ಚಿತ್ರಕಥೆ ಮಾಡುತ್ತಿದ್ದೆನೋ ಅದು ಬೇರೆ ವಿಚಾರ. ಅವರ ಕಥೆ ನನ್ನ ಗಮನಕ್ಕೆ ಬರಬೇಕು ಎಂದು ಯಾಕೆ ಆಶಿಸಬೇಕು.
2007ರಲ್ಲಿ ಬರೆದಂತಹ ಕಥೆಯನ್ನು ನಾನು ಓದಬೇಕು ಎಂದು ಅವರು ನಿರೀಕ್ಷೆ ಮಾಡುತ್ತಾರೆ. ಅದೇ 2011ರ ನವೆಂಬರ್ ನಲ್ಲಿ ನನ್ನ ಇಡೀ ಚಿತ್ರಕಥೆಯನ್ನು 'ಉದಯವಾಣಿ'ಯಲ್ಲಿ ಪ್ರಕಟಿಸಿದ್ದೆ. ಅದನ್ನು ಅವರು ಗಮನಿಸಬಹುದಾಗಿತ್ತಲ್ವಾ? ಇದಿಷ್ಟೇ ಅಲ್ಲದೆ ಈ ಚಿತ್ರದ ಬಗ್ಗೆ ನಿರಂತವಾಗಿ ಎಲ್ಲಿ ಚಿತ್ರೀಕರಣ ಮಾಡುತ್ತಿದ್ದೇನೆ, ಏನಿದು ಕಥೆ ಎಂಬುದನ್ನು ನಾನು ಮಾಧ್ಯಮಗಳ ಮೂಲಕ ಹೇಳುತ್ತಲೇ ಬಂದಿದ್ದೇನೆ. ಅದೆಲ್ಲಾ ಬಿಟ್ಟು ಚಿತ್ರ ಬಿಡುಗಡೆ ದಿನವೇ 12 ಗಂಟೆಗೇ ಯಾಕೆ ಪ್ರೆಸ್ ಮೀಟ್ ಇಟ್ಟುಕೊಳ್ಳಬೇಕು? ಚಿತ್ರ ಇನ್ನೂ ಸಾರ್ವಜನಿಕರ ಮುಂದೆ ಬಂದೇ ಇಲ್ಲ.
ನನ್ನನ್ನು ಒಮ್ಮೆಯಾದರೂ ಸಂಪರ್ಕಿಸಿದ್ದರೆ ಕುಳಿತು ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆ ಬಳಿಕವೂ ಅವರಿಗೆ ಸಮಾಧಾನ ಆಗದಿದ್ದರೆ ನನ್ನ ಕಥೆಗೂ ಅವರ ಕಥೆಗೂ ಎಷ್ಟೆಷ್ಟು ಹೋಲಿಕೆ ಇದೆ ಎಂಬುದನ್ನು ಚರ್ಚಿಸ ಬಹುದಾಗಿತ್ತು. ಅಲ್ಲೂ ಸಮಾಧಾನ ಸಿಗದಿದ್ದರೆ ಮುಂದೆ ಇನ್ನೊಂದು ತೀರ್ಮಾನಕ್ಕೆ ಹೋಗಬಹುದು.
ನಾವಿಬ್ಬರೂ ಅಪರಿಚತರೇನು ಅಲ್ಲ. ಒಂದೇ ಊರಲ್ಲಿದ್ದೀವಿ. ಕೂಗಳತೆ ದೂರದಲ್ಲಿದ್ದೇವೆ. ನನ್ನನ್ನೇ ಸಂಪರ್ಕಿಸುವುದನ್ನು ಬಿಟ್ಟು ಮಾಧ್ಯಮಗಳ ಮೊರೆ ಹೋಗಿದ್ದು, ಗಂಟಗಟ್ಟಳೆ ಅದನ್ನು ಚರ್ಚಿಸಿದ್ದು. ಒಂದು ಚಾನಲ್ ಮಾಡಿದರು ಎಂದು ಇನ್ನೊಂದು ಚಾನಲ್ ಪೈಪೋಟಿಗೆ ಬಿದ್ದಂತೆ ಅವರೂ ಕಾರ್ಯಕ್ರಮ ಮಾಡಿದರು. ಅವರು ಮಾಡಿದರು ಎಂದು ಮೂರನೆಯವರು ಮಾಡಿದರು. ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಹೇಳಿ ನಮ್ಮನ್ನು. ಪರಸ್ಪರ ಕೆಸರೆರಚಿಕೊಳ್ಳುವ ಪ್ರಕ್ರಿಯೆ ಇದು. ಆಶಾದಾಯಕ ಸೂಚನೆ ಇದು ಎಂದು ನನಗೆ ಅನ್ನಿಸುತ್ತಿಲ್ಲ.


Click it and Unblock the Notifications











