ರಚಿತಾ ರಾಮ್ ಆಡಿದ್ದ ಈ ಮಾತಿನಿಂದ ನಿರ್ದೇಶಕ ಪಿ ವಾಸು ಬೇಸರ
Recommended Video
ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮೊದಲ ಬಾರಿಗೆ 'ಆಯುಷ್ಮಾನ್ ಭವ' ಸಿನಿಮಾದ ಮೂಲಕ ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡಿದ್ದಾರೆ. ಇದೀಗ ಈ ಸಿನಿಮಾದ ನಿರ್ದೇಶಕ ಪಿ ವಾಸು, ನಾಯಕಿ ರಚಿತಾ ರಾಮ್ ಬಗ್ಗೆ ಬೇಸರಗೊಂಡಿದ್ದಾರೆ.
ಸಿನಿಮಾದಲ್ಲಿ ಚೆನ್ನಾಗಿ ನಟಿಸಿಲ್ಲ, ಚಿತ್ರೀಕರಣ ವೇಳೆ ಚಿತ್ರತಂಡಕ್ಕೆ ಸಹಕಾರ ನೀಡಿಲ್ಲ, ಪ್ರಚಾರಕ್ಕೆ ಬಂದಿಲ್ಲ.. ಈ ರೀತಿ ಯಾವುದೋ ಒಂದು ಕಾರಣಕ್ಕೆ ನಿರ್ದೇಶಕ ಪಿ ವಾಸು ನಟಿ ರಚಿತಾ ರಾಮ್ ಮೇಲೆ ಬೇಸರಗೊಂಡಿಲ್ಲ. ಬದಲಿಗೆ ರಚಿತಾ ರಾಮ್ ಆಡಿದ್ದ ಒಂದು ಮಾತು ಅವರ ಬೇಸರಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ 'ಆಯುಷ್ಮಾನ್ ಭವ' ಸಿನಿಮಾದ ಮೊದಲ ಪ್ರೆಸ್ ಮೀಟ್ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಪಿ ವಾಸು ಬರಲು ಆಗಿರಲಿಲ್ಲ. ಆದರೆ, ಇದೇ ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ ವಾಸು ಬಗ್ಗೆ ನಟಿ ರಚಿತಾ ರಾಮ್ ಒಂದು ಹೇಳಿಕೆ ನೀಡಿದ್ದರು. ರಚಿತಾ ರಾಮ್ ತಮಾಷೆಯಾಗಿ, ಸಾಮಾನ್ಯವಾಗಿ ಈ ಮಾತು ಆಡಿರಬಹುದು ಆದರೆ, ಅದರಿಂದ ನಿರ್ದೇಶಕ ಪಿ ವಾಸು ಮನಸ್ಸಿಗೆ ನೋವಾಗಿದೆ.

ರಚಿತಾ ರಾಮ್ ಏನ್ ಹೇಳಿದ್ರು?
''ನೀವು (ಪಿ ವಾಸು) ಏನು ಹೇಳುತ್ತಿರೋ ಅದನ್ನು ಮಾಡುತ್ತೇನೆ. ನಾನು ತಪ್ಪು ಮಾಡಿದ್ದರೆ, ವಾಸು ಸರ್ ಗೆ ಸೇರುತ್ತದೆ. ಸಖತ್ ಆಗಿ ಮಾಡಿದ್ದರೂ ಅದು ವಾಸು ಸರ್ ಗೆ ಸೇರುತ್ತದೆ.'' ಇದು ರಚಿತಾ ರಾಮ್ ಸಿನಿಮಾದ ಬಗ್ಗೆ ಮಾತನಾಡಿದ್ದ ಮಾತು. ವೇದಿಕೆ ಮೇಲೆ ಅತಿಯಾದ ಉತ್ಸಾಹದಿಂದ ಮಾತನಾಡಿದ್ದ ರಚಿತಾ ತಾವು ತಪ್ಪು ಮಾಡಿದ್ದರೂ ಅದಕ್ಕೆ ಪಿ ವಾಸು ಕಾರಣ ಎಂದಿದ್ದರು.

ಪಿ ವಾಸು ಬೇಸರ
ಕಳೆದ ಶನಿವಾರ 'ಆಯುಷ್ಮಾನ್ ಭವ' ಸಿನಿಮಾದ ಮತ್ತೊಂದು ಪ್ರೆಸ್ ಮೀಟ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಪಿ ವಾಸು ರಚಿತಾ ರಾಮ್ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಿದರು. ಕಳೆದ ಪ್ರೆಸ್ ಮೀಟ್ ಗೆ ನಾನು ಬರಲು ಆಗಲಿಲ್ಲ. ಆದರೆ ಆ ಕಾರ್ಯಕ್ರಮದಲ್ಲಿ ''ಆಕೆ ಹಾಗೆ ಹೇಳಲು ಹೇಗೆ ಸಾಧ್ಯ'' ಎಂದು ತಮ್ಮ ಬೇಸರವನ್ನು ಹೊರಹಾಕಿದರು. ರಚಿತಾ ಮಾತು ಪಿ ವಾಸುಗೆ ನೋವಾಗಿದೆ ಎನ್ನುವುದು ಇದರಿಂದಲೇ ತಿಳಿಯಿತು.

ರಚಿತಾ ನಟನೆಯನ್ನು ಹೊಗಳಿದ ವಾಸು
ಪಿ ವಾಸು ಬೇಸರ ಆಗಿರುವುದು ರಚಿತಾ ರಾಮ್ ಹೇಳಿಕೆ ಬಗ್ಗೆ ಅಷ್ಟೇ. ಹೀಗಾಗಿ, ರಚಿತಾ ರಾಮ್ ನಟನೆಯ ಬಗ್ಗೆ ವಾಸುಗೆ ಯಾವುದೇ ಅಸಮಾಧಾನ ಇಲ್ಲ. ''ಆಕೆ ಅದ್ಭುತವಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಆಕೆಗೆ ಸಿನಿಮಾದಿಂದ ತುಂಬ ಒಳ್ಳೆಯ ಹೆಸರು ಬರುತ್ತದೆ.'' ಎಂದು ರಚಿತಾ ರಾಮ್ ಅಭಿನಯದವನ್ನು ಪಿ ವಾಸು ಹೊಗಳಿದರು.

ಅಂದು ಪಿ ವಾಸು ಇರಲಿಲ್ಲ, ಇಂದು ರಚಿತಾ ಬರಲಿಲ್ಲ
ಕೆಲ ದಿನಗಳ ಹಿಂದೆ ನಡೆದ ಪ್ರೆಸ್ ಮೀಟ್ ನಲ್ಲಿ ಪಿ ವಾಸು ಇರಲಿಲ್ಲ. ಮಲೇಶಿಯಾ ಪ್ರವಾಸದಲ್ಲಿ ಇದ್ದ ಕಾರಣ ಈ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿರಲಿಲ್ಲ. ಆ ವೇಳೆ ರಚಿತಾ ರಾಮ್ ಪಿ ವಾಸು ಬಗ್ಗೆ ಮಾತನಾಡಿದ್ದರು. ಆದರೆ, ಕಳೆದ ಶನಿವಾರ ಪಿ ವಾಸು ಬಂದಿದ್ದು, ರಚಿತಾ ರಾಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಪಿ ವಾಸು ಹಾಗೂ ರಚಿತಾ ನಡುವೆ ಮನಸ್ತಾಪ ಆಗಿರಬಹುದು ಎನ್ನುವ ಅನುಮಾನವೂ ಇದೆ.


Click it and Unblock the Notifications











