ಆಗಸ್ಟ್ 10 ರಂದು ಥಿಯೇಟರ್ ಗೆ 'ಪಾದರಸ' ಎಂಟ್ರಿ
ಇತ್ತೀಚಿಗಷ್ಟೆ '6ನೇ ಮೈಲಿ' ಸಿನಿಮಾದ ಮೂಲಕ ಎಲ್ಲರನ್ನ ರಂಜಿಸಿದ್ದ ನಟ ಸಂಚಾರಿ ವಿಜಯ್ ಈಗ 'ಪಾದರಸ'ದಂತೆ ಮತ್ತೆ ಥಿಯೇಟರ್ ಗೆ ಬರ್ತಿದ್ದಾರೆ.
ಹೌದು, ಸಂಚಾರಿ ವಿಜಯ್ ಅಭಿನಯದ 'ಪಾದರಸ' ಸಿನಿಮಾ ಆಗಸ್ಟ್ 10 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಕ್ಕಾ ಮನರಂಜನೆಯೊಂದಿಗೆ ಬರ್ತಿರೋ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಮೂಡಿಸಿದೆ.
ಯೂಟ್ಯೂಬ್ ನಲ್ಲಿ 'ಪಾದರಸ' ಚಿತ್ರದ ಟ್ರೈಲರ್ 9.6 ಲಕ್ಷ ವೀಕ್ಷಕರು ನೋಡಿದ್ದಾರೆ. ಇನ್ನು ಚಿತ್ರದ ಹಾಡುಗಳು ಕೂಡ ಅಷ್ಟೇ ಮೋಡಿ ಮಾಡಿದ್ದು, ಒಂದೊಳ್ಳೆ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ನೀಡಲಿದೆ ಎಂಬ ಭರವಸೆ ಮೂಡಿಸಿದೆ.

ಸಂಚಾರಿ ವಿಜಯ್ ಅವರು ಈ ಚಿತ್ರದಲ್ಲಿ ಔಟ್ ಅಂಡ್ ಔಟ್ ಪ್ಲೇ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಮತ್ತು ಮನಸ್ವಿ ಜೋಡಿಯಾಗಿದ್ದಾರೆ. ಇನ್ನು ಸಂಚಾರಿ ವಿಜಯ್ ಅವರ ಸ್ನೇಹಿತನ ಪಾತ್ರದಲ್ಲಿ ನಿರಂಜನ್ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ.
ಆರ್ಟ್ ಅಂಡ್ ಸೋಲ್ ಮಿಡಿಯಾ ಸರ್ವಿಸ್ ಲಾಂಛನದಲ್ಲಿ 'ಪಾದರಸ' ಚಿತ್ರ ನಿರ್ಮಾಣವಾಗಿದ್ದು, ಹೃಷೀಕೇಶ್ ಜಂಬರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಎಟಿ ರವೀಶ್ ಸಂಗೀತ ನಿರ್ದೇಶನ ಮಾಡಿದ್ದು, ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಟ್ಟಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್ ಲಾಂಚ್ ಮಾಡಿದ್ದರು.
ಇನ್ನುಳಿದಂತೆ ವಿಜಯ್ ಜೊತೆಗೆ ಹಿರಿಯ ನಟ ಜೈಜಗದೀಶ್, ವಿಜಯ್ ಚೆಂಡೂರ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 10 ರಂದು ಬೆಂಗಳೂರಿನ ಕೆ.ಜಿ ರಸ್ತೆಯ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಪ್ರದರ್ಶನವಾಗಲಿದೆ.


Click it and Unblock the Notifications











