ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಗೌರವ
2025ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕಲಾ ಕ್ಷೇತ್ರಕ್ಕಾಗಿ ಸಿನಿಮಾ ಕಲಾವಿದರಿಗೂ ಗೌರವ ಸಿಕ್ಕಿದೆ.
ಕನ್ನಡ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಒಲಿದಿದೆ. ಹಲವು ವರ್ಷಗಳಿಂದ ಅವರಿಗೆ ಪದ್ಮ ಪ್ರಶಸ್ತಿ ಸಿಕ್ಕಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಭಾರತರತ್ನ, ಪದ್ಮವಿಭೂಷಣ ಬಳಿಕ ಪದ್ಮಭೂಷಣ ಪ್ರಶಸ್ತಿಯು ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಲ್ಲಿ ಮೂರನೇ ಸ್ಥಾನದಲ್ಲಿದೆ.

ಪ್ರತಿಬಾರಿ ಪದ್ಮ ಪ್ರಶಸ್ತಿ ಪಟ್ಟಿ ಹೊರ ಬಂದಾಗ ಅನಂತ್ ನಾಗ್ ಅವರಿಗೆ ಯಾಕೆ ಪ್ರಶಸ್ತಿ ಸಿಗುತ್ತಿಲ್ಲ ಎನ್ನುವ ಚರ್ಚೆ ನಡೆಯುತ್ತಿತ್ತು. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಭಿಯಾನ ನಡೆಸಿದ್ದು ಇದೆ. ಆದರೆ ಪ್ರತಿ ಬಾರಿ ನಿರಾಸೆಯೇ ಎದುರಾಗುತ್ತಿತ್ತು. ಆದರೆ ಈ ಬಾರಿ ಆ ಗೌರವ ಸಿಕ್ಕಂತಾಗಿದೆ.
ಚಿತ್ರರಂಗದ ಹಲವರಿಗೆ ಈ ಬಾರಿ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ. ತಮಿಳು ನಟ ಅಜಿತ್, ತೆಲುಗು ನಟ ಬಾಲಕೃಷ್ಣ, ಮಹಾರಾಷ್ಟ್ರದ ಗಾಯಕ ಪಂಕಜ್ ಉದಾಸ್, ಫಿಲ್ಮ್ ಮೇಕರ್ ಶೇಖರ್ ಕಪೂರ್, ನಟಿ, ಭರತನಾಟ್ಯ ಕಲಾವಿದೆ ಶೋಭನಾ ಅವರಿಗೂ ಪದ್ಮಭೂಷಣ ಪ್ರಶಸ್ತಿ ಗೌರವ ಲಭಿಸಿದೆ.
ಗಾಯಕ ಅರ್ಜಿತ್ ಸಿಂಗ್ ಹಾಗೂ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ ಈ ಪಟ್ಟಿಯಲ್ಲಿ 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಇನ್ನು ಪ್ರಶಸ್ತಿ ಪುರಸ್ಕೃತರಲ್ಲಿ 23 ಮಂದಿ ಮಹಿಳಾ ಸಾಧಕರಿದ್ದು ಪಟ್ಟಿಯಲ್ಲಿ ವಿದೇಶಿಯರು/ಎನ್‌ಆರ್‌ಐ/ಪಿಐಒ/ಒಸಿಐ ವರ್ಗದಿಂದ 10 ಜನರು ಇದ್ದಾರೆ. 13 ಮಂದಿಗೆ ಮರಣೋತ್ತರವಾಗಿ ಪದ್ಮ ಗೌರವ ಸಿಕ್ಕಿದೆ.


Click it and Unblock the Notifications











