ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ತಯಾರಾಗಿ ಭಾರಿ ವಿವಾದಕ್ಕೆ ಕಾರಣವಾಗಿದ್ದ 'ಪದ್ಮಾವತಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಲು ಮುಂದಾಗಿದೆ. 'ರಾಣಿ ಪದ್ಮಾವತಿ' ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ವಿರೋಧ ಎದುರಿಸಿದ್ದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕೆಲ ಷರತ್ತುಗಳನ್ನು ವಿಧಿಸಿದೆ.
'ಪದ್ಮಾವತಿ' ಚಿತ್ರದಲ್ಲಿ 26 ದೃಶ್ಯಗಳಿಗೆ ಕತ್ತರಿ ಹಾಕಿರುವ ಸೆನ್ಸಾರ್ ಬೋರ್ಡ್, ಚಿತ್ರದ ಟೈಟಲ್ ಬದಲಾಯಿಸುವಂತೆ ಸೂಚಿಸಿದೆ. ಹೀಗಾಗಿ, 'ಪದ್ಮಾವತಿ' ಬದಲು 'ಪದ್ಮಾವತ್' ಎಂದು ಶೀರ್ಷಿಕೆ ಬದಲಾಗುವ ಸಾಧ್ಯತೆ ಇದೆ. ಮತ್ತು ಚಿತ್ರ ಪ್ರದರ್ಶನಕ್ಕೆ ಮುಂಚೆ ಘೋಷಣೆ ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದೆ.
ಅಂದ್ಹಾಗೆ, 'ಪದ್ಮಾವತಿ' ಚಿತ್ರವನ್ನ ವಿರೋಧಿಸಿ ರಜಪೂತ ಕರಣಿ ಸೇನೆ ಕಾರ್ಯಕರ್ತರು ರಾಷ್ಟ್ರದೆಲ್ಲೆಡೆ ಪ್ರತಿಭಟನೆ ಮಾಡಿದ್ದರು. ಚಿತ್ರವನ್ನ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು. ಇದರ ಮಧ್ಯೆ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕತ್ತರಿಸಿದವರಿಗೆ ಬಹುಮಾನವೆಂದು ಕೂಡ ಘೋಷಿಸಿದ್ದರು.
ಇದಕ್ಕು ಮುಂಚೆ ಲಂಡನ್ ಸೆನ್ಸಾರ್ ಮಂಡಳಿಯಲ್ಲಿ 'ಪದ್ಮಾವತಿ' ಚಿತ್ರ ಸೆನ್ಸಾರ್ ಪ್ರಮಾಣ ಪತ್ರ ಪಡೆದುಕೊಂಡಿತ್ತು. ಡಿಸೆಂಬರ್ 1 ರಂದು ತೆರೆಕಾಣಬೇಕಿದ್ದ 'ಪದ್ಮಾವತಿ' ಚಿತ್ರ ಅಂತಿಮವಾಗಿ ಭಾರತದಲ್ಲಿ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಈಗ ಚಿತ್ರ ಬಿಡುಗಡೆ ಯಾವಾಗ ಎಂಬುದು ಮಾತ್ರ ಕುತೂಹಲವಾಗಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.