ವೀರೇಶ್ ಚಿತ್ರಮಂದಿರದಲ್ಲಿ ದಾಖಲೆ ಕಲೆಕ್ಷನ್ ಮಾಡಿದ ಪೈಲ್ವಾನ್
Recommended Video
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ಕಿಚ್ಚನ ಸಿನಿಮಾ ಮೂರನೇ ದಿನವೂ ದೊಡ್ಡ ಮೊತ್ತವನ್ನ ಬಾಚಿಕೊಂಡಿದೆ ಎನ್ನಲಾಗಿದೆ.
ಪೈಲ್ವಾನ್ ಚಿತ್ರದ ಒಟ್ಟಾರೆ ಕಲೆಕ್ಷನ್ ಒಂದು ಕಡೆಯಾದರೆ ಬೆಂಗಳೂರಿನ ವೀರೇಶ್ ಚಿತ್ರಮಂದಿರಲ್ಲಿ ಮಾತ್ರ ಮತ್ತೊಂದು ರೀತಿಯ ದಾಖಲೆ ಮಾಡಿದೆ.
ಮೊದಲ ನಾಲ್ಕು ದಿನದಲ್ಲಿ ವೀರೇಶ್ ಸಿನಿಮಾಸ್ ನಲ್ಲಿ ದಾಖಲೆಯ ಗಳಿಕೆ ಕಂಡಿದೆ ಎಂದು ಚಿತ್ರಮಂದಿರದ ಮಾಲೀಕ ಕೆವಿ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ಇದೇ ಸಮಯದಲ್ಲಿ ಪೈಲ್ವಾನ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಗ್ಗೆಯೂ ಆಕ್ರೋಶ ಹೊರಹಾಕಿದ್ದಾರೆ.

ವೀರೇಶ್ ಚಿತ್ರಮಂದಿರಲ್ಲಿ ಪೈಲ್ವಾನ್ ಗಳಿಕೆ ಎಷ್ಟು?
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಸಿನಿಮಾಸ್ ನಲ್ಲಿ ಪೈಲ್ವಾನ್ ಸಿನಿಮಾ ತೆರೆಕಂಡಿತ್ತು. ಮೊದಲ ದಿನದಿಂದಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಪೈಲ್ವಾನ್ ನಾಲ್ಕು ದಿನಕ್ಕೆ 31 ಲಕ್ಷ ಗಳಿಸಿದೆ ಎಂದು ಸ್ವತಃ ಚಿತ್ರಮಂದಿರ ಮಾಲೀಕ ಕೆವಿ ಚಂದ್ರಶೇಖರ್ ತಿಳಿಸಿದ್ದಾರೆ.

ವೀರೇಶ್ ನಲ್ಲಿ ಎಷ್ಟು ಶೋ ಇದೆ
ವೀರೇಶ್ ಸಿನಿಮಾಸ್ ನಲ್ಲಿ ಎರಡು ಸ್ಕ್ರೀನ್ ಇದೆ. ಮೊದಲ ಸ್ಕ್ರೀನ್ ನಲ್ಲಿ ಐದರಿಂದ ಆರು ಶೋ ಇದ್ದರೆ, ಎರಡನೇ ಸ್ಕ್ರೀನ್ ನಲ್ಲಿ ನಾಲ್ಕು ಶೋ ಪ್ರದರ್ಶನ ಕಾಣುತ್ತಿದೆ. ಹಾಗಾಗಿ, ಕಲೆಕ್ಷನ್ ನಲ್ಲಿ ಹೆಚ್ಚಾಗಿದೆ. ಈ ಸಂತಸವನ್ನ ಪ್ರದರ್ಶಕರು ಹಂಚಿಕೊಂಡಿದ್ದಾರೆ.

ಅಪಪ್ರಚಾರದಿಂದ ಸಿನಿಮಾ ಸೋಲಲ್ಲ
ಇನ್ನು ಪೈಲ್ವಾನ್ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ವಿಷಯದ ಬಗ್ಗೆ ಮಾತನಾಡಿರುವ ಕೆವಿ ಚಂದ್ರಶೇಖರ್ ''ಪೈಲ್ವಾನ್ ಚಿತ್ರದ ಗಳಿಕೆ ವಿಷಯದಲ್ಲಿ ನಡೆದಿರುವ ಕಿಡಿಗೇಡಿಗಳ ತಂತ್ರಕ್ಕೆ ಕುತಂತ್ರಕ್ಕೆ ಚಿತ್ರ ಸೋಲುವುದಿಲ್ಲ ಗೆಲ್ಲುವುದಿಲ್ಲ. ಒಮ್ಮೆ ಪ್ರೇಕ್ಷಕ ಚಿತ್ರ ಚೆನ್ನಾಗಿದೆ ಎಂಬ 'ಬಾಯಿ ಮಾತಿನ' ಪ್ರಚಾರ ಬಂದರೆ ಆ ಚಿತ್ರ 50/100 ದಿನಕ್ಕೆ ಕೊಂಡೊಯ್ಯುತ್ತದೆ. ಬಿಡುಗಡೆಯ ಮುನ್ನಾ ನಡೆಯುವ ಪ್ರಚಾರ ಕೇವಲ ಒಂದು/ಎರಡು ಪ್ರದರ್ಶನಕ್ಕೆ ಮಾತ್ರ ಸೀಮತ'' ಎಂದಿದ್ದಾರೆ.

ಕುತಂತ್ರಿಗಳು ಬಿಕಾರಿಯಾಗುತ್ತಾರೆ
''ಪ್ರೇಕ್ಷಕ ಪ್ರಭುಗಳು ಚಿತ್ರ (ದೊಡ್ಡ ನಾಯಕರ ಚಿತ್ರವಾಗಲಿ ಇಲ್ಲ ಹೊಸಬರ ಚಿತ್ರವಾಗಲು) ಚೆನ್ನಾಗಿದ್ದರೆ ಖಂಡಿತ ಕೈಬಿಡುವುದಿಲ್ಲ. ಪ್ರೇಕ್ಷಕ ಪ್ರಭುಗಳನ್ನು ದೂರವಿಡುವ ಪ್ರಯತ್ನಕ್ಕೆ ಕೈಹಾಕಿದರೆ ಚಿತ್ರರಂಗ ನೆಲಕಚ್ಚುವುದು ಖಂಡಿತ. ಜೊತೆಯಲ್ಲಿ ಕುತಂತ್ರ ಮಾಡುವವರು ಸಹಾ ಬಿಕಾರಿಯಾಗುತ್ತಾರೆ'' ಎಂದು ಕೆವಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ಪೈಲ್ವಾನ್ ಮೂರು ದಿನದ ಕಲೆಕ್ಷನ್ ಎಷ್ಟು?
ಸುದೀಪ್ ಪೈಲ್ವಾನ್ ಮೊದಲ ದಿನ (ಗುರುವಾರ) 10 ಕೋಟಿ, ಎರಡನೇ ದಿನ (ಶುಕ್ರವಾರ) 9 ಕೋಟಿ ಹಾಗೂ ಮೂರನೇ ದಿನ (ಶನಿವಾರ) 10 ಕೋಟಿ ಗಳಿಸಿರುವ ಮಾಹಿತಿ ಇದೆ. ನಾಲ್ಕನೇ ದಿನ ಭಾನುವಾರ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ, ಮೊದಲ ವಾರಾಂತ್ಯಕ್ಕೆ ಪೈಲ್ವಾನ್ ಅಬ್ಬರಿಸಿದ್ದಾನೆ ಎಂಬುದು ಮಾತ್ರ ಸತ್ಯ.


Click it and Unblock the Notifications











