ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸುದೀಪ್ ಹೋಗ್ತಾರಾ, ಇಲ್ವಾ?
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. 'ಪೈಲ್ವಾನ್' ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. 'ತ್ರಯಂಬಕಂ' ಚಿತ್ರಕ್ಕಾಗಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರೆ 'ಮೋಹನದಾಸ' ಚಿತ್ರಕ್ಕೆ ಮೊದಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ.
25ಕ್ಕೂ ಪ್ರಶಸ್ತಿಗಳನ್ನು 30ಕ್ಕೂ ಅಧಿಕ ಮಂದಿ ಸ್ವೀಕರಿಸಲಿದ್ದಾರೆ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅತ್ಯುತ್ತಮ ನಟ ಪ್ರಶಸ್ತಿ ಪಡೆಯಲು ನಟ ಸುದೀಪ್ ಸಮಾರಂಭಕ್ಕೆ ಹಾಜರಾಗುತ್ತಾರಾ? ಇಲ್ವಾ? ಎನ್ನುವುದನ್ನು ಕಾದು ನೋಡಬೇಕಿದೆ. ಕೆಲ ವರ್ಷಗಳ ಸುದೀಪ್ ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ದೂರ ಉಳಿದಿದ್ದರು. 5 ವರ್ಷಗಳ ಹಿಂದೆ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದರು.

ಪ್ರೇಕ್ಷಕರ ಚಪ್ಪಾಳೆಯೇ ನನಗೆ ದೊಡ್ಡ ಪ್ರಶಸ್ತಿ ಎಂದು ಸುದೀಪ್ ಹೇಳುತ್ತಿರುತ್ತಾರೆ. ವೇದಿಕೆಯಲ್ಲಿ ಒಮ್ಮೆ ಮಾತನಾಡಿದ್ದ ಕಿಚ್ಚ "ನಾನು ಪ್ರಶಸ್ತಿಗಳಿಗೆ ಬೆಲೆ ಕೊಡಲ್ಲ ಎಂದು ಹೇಳಲ್ಲ. 15 ವರ್ಷಗಳಿಂದ ನಾನು ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೋಗಿಲ್ಲ. ಪ್ರಶಸ್ತಿಗಳಿಂದ ನನಗೇನೋ ನೋವಾಗಿದೆ ಅಂತ ಇದರ ಅರ್ಥ ಅಲ್ಲ. ದೂರು ಇರುವುದರಿಂದಲೇ ಖುಷಿ ಸಿಕ್ಕಿದೆ. ಸ್ವಾರ್ಥ ಹೊರಡು ಹೋಗಿದೆ. ಕೊನೆಯದಾಗಿ 2003ರಲ್ಲಿ ನಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದೆ ಎಂದು ಮತ್ತೊಂದು ವೇದಿಕೆಯಲ್ಲಿ ಹೇಳಿದ್ದರು.
ಕೆಲವೊಮ್ಮೆ ಕಿಚ್ಚನಿಗೆ ಪ್ರಶಸ್ತಿ ಘೋಷಣೆ ಆಗಿದ್ದರೂ ಸ್ವೀಕರಿಸಲು ಖುದ್ದಾಗಿ ಅವರು ಹೋಗಿರಲಿಲ್ಲ. ಆದರೆ 17 ವರ್ಷಗಳ ಬಳಿಕ ಅಂದ್ರೆ 2020ರಲ್ಲಿ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದರು. ಚೆನ್ನೈನಲ್ಲಿ ನಡೆದ ಜೀ ಸಿನಿ ಅವಾರ್ಡ್ಸ್ 2020 ವೇದಿಕೆ ಏರಿದ್ದರು. 'ಕನ್ನಡ ಚಿತ್ರರಂಗದ ಹೆಮ್ಮೆ' ಎಂಬ ಪ್ರಶಸ್ತಿ ಪಡೆದಿದ್ದರು. ನಟಿ ನಯನತಾರಾ ಈ ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದರು.
"ಬಹಳ ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿದ್ದು ವಿಚಿತ್ರ ಅನುಭವ ಎನಿಸಿತು. ಬಹಳ ಖುಷಿ ಆಯಿತು. ಸ್ನೇಹಿತನಿಗಾಗಿ ನಿರ್ಧಾರ ಬದಲಿಸಿದೆ. ನಾನು ಕಾರ್ಯಕ್ರಮಕ್ಕೆ ಹಾಜರಾಗಿದ್ದು ಕೆಲವರಿಗೆ ಖುಷಿ ತಂದಿದೆ. ಅದು ನನಗೂ ಸಂತಸದ ವಿಚಾರ" ಎಂದು ಸುದೀಪ್ ಬರೆದುಕೊಂಡಿದ್ದರು. ಆ ಬಳಿಕ ಕೂಡ ಹೆಚ್ಚು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಇದೀಗ ರಾಜ್ಯ ಪ್ರಶಸ್ತಿ ಪಡೆಯಲು ವೇದಿಕೆ ಏರಲಿದ್ದಾರೆ.
ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರದಲ್ಲಿ ಕುಸ್ತಿಪಟು ಆಗಿ ಸುದೀಪ್ ನಟಿಸಿದ್ದರು. ಪಾತ್ರಕ್ಕಾಗಿ ದೇಹ ದಂಡಿಸಿ ಕುಸ್ತಿ ಪಟ್ಟುಗಳನ್ನು ಕಲಿತು ಪ್ರೇಕ್ಷಕರ ಮುಂದೆ ಬಂದಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆಕಾಂಕ್ಷಾ ಸಿಂಗ್ ನಾಯಕಿಯಾಗಿ ಮಿಂಚಿದ್ದರು. ಇನ್ನುಳಿದಂತೆ ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಗೆದ್ದಿದೆ. ಯಶಸ್ವಿಯಾಗಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗಪ್ಪಳಿಸಿದ್ದ ಸಿನಿಮಾ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಮುಂದೆ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಸುದೀಪ್ ನಟಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಸಿಸಿಎಲ್ ಕ್ರಿಕೆಟ್ ಟೂರ್ನಿಗಾಗಿ ಸುದೀಪ್ ತಾಲೀಮು ನಡೆಸುತ್ತಿದ್ದಾರೆ. ಈ ವೀಕೆಂಡ್ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಸಿಕೊಡಲಿದ್ದಾರೆ.


Click it and Unblock the Notifications











