"ನೋವು ತಾತ್ಕಾಲಿಕ.. ಹೆಮ್ಮೆ ಶಾಶ್ವತ" ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್
ನಟ ದರ್ಶನ್ ಸದ್ಯ 'ಕಾಟೇರ' ಸಿನಿಮಾ ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗದೇ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ದರ್ಶನ್ ಹೋದ ಕಡೆಯೆಲ್ಲಾ ಸಾಗರದಂತೆ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಮತದಾನಕ್ಕೆ ದಿನಗಣನೆ ಶುರುವಾಗಿದ್ದು ಚುನಾವಣೆ ಪ್ರಚಾರ ಜೋರಾಗಿದೆ. ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.
'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕ್ರಾಂತಿ' ಸಿನಿಮಾ ನಂತರ 'ಕಾಟೇರ'ನಾಗಿ ದರ್ಶನ್ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಾಲಘಟ್ಟದ ಕಥೆಯನ್ನು ಹೇಳಲಾಗುತ್ತಿದೆ. ಸರ್ಕಾರ ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ರೈತರಿಗೆ ಏನೆಲ್ಲಾ ಸಮಸ್ಯೆಗಳು ಎದುರಾಯಿತು ಎನ್ನುವುದರ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಇದನ್ನು ಇತ್ತೀಚೆಗೆ ಚುನಾವಣೆ ಪ್ರಚಾರದ ವೇಳೆ ಸ್ವತಃ ದರ್ಶನ್ ಬಿಚ್ಚಿಟ್ಟಿದ್ದರು. ಚಿತ್ರದಲ್ಲಿ ಲುಂಗಿ ಉಟ್ಟು ಬಹಳ ವಿಭಿನ್ನವಾದ ಲುಕ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ.

ಫಿಟ್‌ನೆಸ್ ಫ್ರೀಕ್ ಆಗಿರುವ ದರ್ಶನ್ ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುವುದನ್ನು ಬಿಡುವುದಿಲ್ಲ. ತಮ್ಮದೇ ಮನೆಯಲ್ಲಿ ಚಿಕ್ಕದೊಂದು ಜಿಮ್ ಸಿದ್ಧಪಡಿಸಿಕೊಂಡಿರುವ ದರ್ಶನ್ ವರ್ಕೌಟ್ ಮಾಡುತ್ತಾರೆ. ದೇಹ ದಂಡಿಸಿ ಫಿಟ್ ಅಂಡ್ ಫೈನ್ ಆಗಿ ಇರುತ್ತಾರೆ. ತೆರೆಮೇಲೆ ಸೊಗಸಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವರ್ಕೌಟ್ ಮಾಡದೇ ತೂಕ ಹೆಚ್ಚಾಗಿತ್ತು. ನಂತರ ಡಯೆಟ್, ವರ್ಕೌಟ್ ಮಾಡಿ ತೂಕ ಇಳಿಸಿ 'ಕ್ರಾಂತಿ' ಚಿತ್ರದಲ್ಲಿ ನಟಿಸಿದ್ದರು. ಅದಕ್ಕಿಂತಹ ತೂಕ ಇಳಿಸಿ ಈಗ 'ಕಾಟೇರ'ನಾಗಿ ಅಬ್ಬರಿಸೋಕೆ ಬರ್ತಿದ್ದಾರೆ.

ಸದ್ಯ ದರ್ಶನ್ ವರ್ಕೌಟ್ ವಿಡಿಯೋವೊಂದು ರಿಲೀಸ್ ಆಗಿದೆ. "ನೋವು ತಾತ್ಕಾಲಿಕ.. ಹೆಮ್ಮೆ ಶಾಶ್ವತ" ಅನ್ನುವ ಟೈಟಲ್ ಕೊಟ್ಟು ಡಿ ಕಂಪೆನಿ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಅಭಿಮಾನಿಗಳು ಮತ್ತೊಮ್ಮೆ ದರ್ಶನ್ ವರ್ಕೌಟ್ ನೋಡಿ ಫಿದಾ ಆಗಿದ್ದಾರೆ. ದರ್ಶನ್ ಡೆಡಿಕೇಷನ್ ಸೂಪರ್ ಎಂದು ಅಭಿಮಾನಿಗಳು ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡುತ್ತಿದ್ದಾರೆ. ಟ್ರಡ್‌ಮಿಲ್ ಮೇಲೆ ವಾಕಿಂಗ್‌ನಿಂದ ಶುರು ಮಾಡಿ ಚೆಸ್ಟ್, ಬೈಸಿಪ್ಸ್, ಶೋಲ್ಡರ್ ವರ್ಕೌಟ್ ಸೇರಿದಂತೆ ದರ್ಶನ್ ಜಿಮ್ ಕಸರತ್ತಿನ ಸಂಪೂರ್ಣ ಝಲಕ್ ಈ ವಿಡಿಯೋದಲ್ಲಿದೆ.
ದರ್ಶನ್ ಚುನಾವಣೆ ಪ್ರಚಾರ ವೇಳೆಯೂ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್, ಫಿಟ್‌ನೆಸ್ ನೋಡಿ ಅಭಿಮಾನಿಗಳು ಕೊಂಡಾಡುತ್ತಾರೆ. ಆ ರೀತಿ ಕಾಣಿಸಿಕೊಳ್ಳಲು ದರ್ಶನ್ ವರ್ಕೌಟ್, ಡಯೆಟ್ ತಪ್ಪದೇ ಪಾಲಿಸುತ್ತಾರೆ. ಕೋಚ್ ಹೇಮಂತ್ ಮಾರ್ಗದರ್ಶನದಲ್ಲಿ ಹಲವು ವರ್ಷಗಳಿಂದ ದರ್ಶನ್ ದೇಹ ದಂಡಿಸುತ್ತಿದ್ದಾರೆ. ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆದರೂ ಜಿಮ್‌ನಲ್ಲಿ ಕೋಚ್ ಹೇಳಿದಂತೆ ಕೇಳುತ್ತಾರೆ. ಅವರ ಮಾರ್ಗದರ್ಶನದಲ್ಲಿ ದೇಹದ ಮಾಂಸಖಂಡ ಬೆಳೆಸುತ್ತಾರೆ, ಗಟ್ಟಿಗೊಳಿಸುತ್ತಾರೆ. ಈ ವಿಚಾರವನ್ನು ಈ ಹಿಂದಿನ ವರ್ಕೌಟ್ ವಿಡಿಯೋದಲ್ಲಿ ಸ್ವತಃ ದರ್ಶನ್ ಹೇಳಿದ್ದರು.
ಯಾವುದೇ ನಟ ಆದರೂ ಫಿಟ್‌ನೆಸ್ ಬಹಳ ಮುಖ್ಯ. ಫಿಟ್‌ನೆಸ್ ಇಲ್ಲದೇ ದೇಹದ ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ಚಿತ್ರರಂಗದಿಂದ ದೂರಾದ ನಟ- ನಟಿಯರು ಇದ್ದಾರೆ. ಲಾಕ್‌ಡೌನ್ ನಂತರ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿ ದರ್ಶನ್ ಅಚ್ಚರಿ ಮೂಡಿಸಿದ್ದರು. ಇದೀಗ ಅದನ್ನೇ ಮೆಂಟೇನ್ ಮಾಡಿಕೊಂಡು ಹೋಗುತ್ತಿದ್ದಾರೆ. ಸಣ್ಣ ಆಗಿದ್ದೀನಿ ಎನ್ನುವ ಕಾರಣಕ್ಕೆ ಕಸರತ್ತು ನಿಲ್ಲಿಸಿಲ್ಲ. ಪ್ರತಿದಿನ ತಪ್ಪಿಸುವುದು ಇಲ್ಲ.
ಇನ್ನು ದರ್ಶನ್ ಐದಾರು ಸಿನಿಮಾಗಳನ್ನು ಲೈನಪ್ ಮಾಡಿಕೊಂಡಿದ್ದಾರೆ. ಒಬ್ಬ ತೆಲುಗು ನಿರ್ಮಾಪಕರು ಕೂಡ ಈ ಲಿಸ್ಟ್‌ನಲ್ಲಿದ್ದಾರೆ. 'ಕಾಟೇರ' ನಂತರ ಗೆಳೆಯ ಸಚ್ಚಿದಾನಂದ ನಿರ್ಮಾಣದ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಅವರು ಈಗ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೇ ಸಚ್ಚಿದಾನಂದ ಪರ ದರ್ಶನ್ ಪ್ರಚಾರ ಕೂಡ ಮಾಡಿದ್ದಾರೆ. ಆ ಚಿತ್ರಕ್ಕೂ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ. ಇನ್ನು ಸೂರಪ್ಪ ಬಾಬು ಸೇರಿದಂತೆ ಮೂರ್ನಾಲ್ಕು ಜನರೊಟ್ಟಿಗೆ ಸಿನಿಮಾ ಮಾಡುವ ಮಾತುಕತೆ ನಡೀತಿದೆ.


Click it and Unblock the Notifications











