»   » ಬೆಳ್ಳಿತೆರೆಗೆ ಪಂಚಮ, ಕಿರುತೆರೆಗೆ ಪಂಚಮಿ !

ಬೆಳ್ಳಿತೆರೆಗೆ ಪಂಚಮ, ಕಿರುತೆರೆಗೆ ಪಂಚಮಿ !

Posted By:
Subscribe to Filmibeat Kannada

ಕನ್ನಡದಲ್ಲಿ ಹಲವು ಹತ್ತು ಟಿ.ವಿ. ಚಾನಲ್‌ಗಳು ಹುಟ್ಟಿಕೊಂಡ ಮೇಲೆ ಕೆಲವು ಕಲಾವಿದರಿಗಂತೂ ಕೈತುಂಬಾ ಕೆಲಸ ಸಿಕ್ಕಿದೆ. ಎಲ್ಲ ಚಾನೆಲ್‌ಗಳಲ್ಲೂ ಒಂದೇ ಮುಖ ಇರುತ್ತದೆ ಎನ್ನುವುದನ್ನು ಬಿಟ್ಟರೆ, ದೂರದರ್ಶನದ ಮೆಗಾ ಧಾರಾವಾಹಿಗಳಾದಿಯಾಗಿ ಹಲವು ಸೀರಿಯಲ್‌ಗಳಲ್ಲಿ ಪ್ರತಿಭಾವಂತ ನಟ - ನಟಿಯರು ಮಿಂಚುತ್ತಿದ್ದಾರೆ.

ಟಿ.ಎನ್‌. ಸೀತಾರಾಂ, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್‌ ಮೊದಲಾದ ಖ್ಯಾತ ಚಿತ್ರ ನಿರ್ದೇಶಕರೂ ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ, ಈ ಸಾಲಿಗೆ ಈಗ ಡಿ. ರಾಜೇಂದ್ರ ಸಿಂಗ್‌ ಬಾಬು...

ಅಂದಹಾಗೆ, ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಪಂಚಮಿಯೂ ಒಬ್ಬರು. ಉದಯ ಟಿ.ವಿಯಲ್ಲಿ ಪ್ರಸಾರವಾದ ಹಾಗೂ ಪ್ರಸಾರವಾಗುತ್ತಿರುವ ಕಾವೇರಿ, ಪಾರ್ವತಿ, ಓ ನನ್ನ ಬೆಳಕೆ ಮೊದಲಾದ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಪಂಚಮಿ, ಎಂ.ಕಾಂ. ಪದವೀಧರೆ. ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಕನಸು ಹೊತ್ತು ಬಂದ ಈಕೆ ಈಗ ಕಿರುತೆರೆಯ ಖ್ಯಾತಿಯಿಂದಷ್ಟೇ ತೃಪ್ತರಾಗಿದ್ದಾರೆ.

ಜೀವನ ಪೂರ್ತಿ ಮದುವೆಯೇ ಆಗದೆ ಇರುತ್ತೇನೆ ಎಂದು ಸಂಕಲ್ಪ ಮಾಡಿರುವ ಪಂಚಮಿ ಸಿನಿಮಾರಂಗದಲ್ಲಿ ಹೆಸರು ಮಾಡುವ ಕನಸು ಕಟ್ಟಿದ್ದರು. ಆದರೆ, ಇವರ ಕನಸು ಕನಸಾಗೇ ಉಳಿದಿದೆ. ಒಮ್ಮೆ ಫಾರಿನ್‌ಗೆ ಹೋಗಿ ಬಂದ ನಂತರವೇ ಎಂಜಿನಿಯರ್‌ಗಳಿಗೆ ಹಾಗೂ ಡಾಕ್ಟರ್‌ಗಳಿಗೆ ಡಿಮ್ಯಾಂಡ್‌ ಹೆಚ್ಚತ್ತಲ್ಲಾ ಹಾಗೆ ಕನ್ನಡದ ನಟ - ನಟಿಯರು ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಕನ್ನಡಕ್ಕೆ ವಾಪಸಾದರೆ ಮಾತ್ರ ಅವರಿಗೆ ಡಿಮ್ಯಾಂಡು ಎನ್ನುವುದು ಪಂಚಮಿಯ ಸಿಕ್ತ್ಸ್‌ ಸೆನ್ಸ್‌ ಹೇಳುವ ಕಿವಿಮಾತು.

ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದ ನಂತರ ಪುನಾ ಕನ್ನಡಕ್ಕೆ ಬರುವ ನಟರಿಗೆ ಸ್ಯಾಂಡಲ್‌ವುಡ್‌ ರೆಡ್‌ ಕಾರ್ಪೆಟ್‌ ಸ್ವಾಗತ ನೀಡುತ್ತದೆ ಎನ್ನುವುದು ಜಗಜ್ಜಾಹೀರಾಗಿರುವ ವಿಷಯ. ಪಂಚಮಿಯ ಈ ಅಭಿಪ್ರಾಯ ಖಂಡಿತಾ ತಪ್ಪಲ್ಲ ಬಿಡಿ. ಅಂದಹಾಗೆ ಈ ಪಂಚಮಿ ಯಾರು ಗೊತ್ತೆ ? ರಂಗಭೂಮಿಯಲ್ಲಿ ಸಮುದ್ರ, ಆಕಾಶದ ಸೆಟ್‌ ಹಾಕಿ, ಆನೆ, ಕುದುರೆಗಳನ್ನು ರಂಗದ ಮೇಲೆ ತಂದು ಕ್ರಾಂತಿಯನ್ನೇ ಮಾಡಿದ ಗ್ರೇಟ್‌ ಗುಬ್ಬಿ ವೀರಣ್ಣನವರ ಮೊಮ್ಮಗಳು.

ಈಗ್ಗೆ 8 ವರ್ಷಗಳ ಹಿಂದೆಯೇ ಅತಿ ಮಧುರ ಅನುರಾಗ ಎಂಬ ಚಿತ್ರದಲ್ಲಿ ನಟಿಸಿದ ಐದಡಿ ಐದಂಚಿನ ಈ ಚೆಲುವೆ ಅಭಿನಯ ಸಾಮ್ರಾಟರ ಮನೆ ಮಗಳಾದರೂ, ಅಭಿನಯ ಕೌಶಲವಿದ್ದರೂ ಚಿತ್ರ ರಂಗದಲ್ಲಿ ಮಿಂಚಲೇ ಇಲ್ಲ. ಆದರೆ, ಕಿರು ತೆರೆ ಈಕೆಯನ್ನು ಕೈಬೀಸಿ ಕರೆಯಿತು. ಸದ್ಯಕ್ಕೆ ಇದುವೆ ಆಕೆಗೆ ತವರು ಮನೆ, ಗಂಡನ ಮನೆ !

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada