»   » ತುಮಕೂರು ಸಾಹಿತ್ಯ ಸಮ್ಮೇಳನದ ಒಣ ಗೋಷ್ಠಿ

ತುಮಕೂರು ಸಾಹಿತ್ಯ ಸಮ್ಮೇಳನದ ಒಣ ಗೋಷ್ಠಿ

Posted By: Super
Subscribe to Filmibeat Kannada

ಚಪ್ಪಾಳೆ ಮೊರೆಯುತ್ತಲೇ ಇತ್ತು . ಆಕೆ ನಗುತ್ತಿದ್ದರು-ಅಲ್ಲಿ ತುಂಬಿತ್ತು ಧನ್ಯತೆ!

ಅದು ತುಮಕೂರು ಸಾಹಿತ್ಯ ಸಮ್ಮೇಳನ. ಮೂರು ದಿನಗಳ ಹಲವಾರು ಗೋಷ್ಠಿಗಳ ವಿದ್ವತ್‌ ಪ್ರಬಂಧಗಳಿಗೆ, ಕವಿತೆಗಳಿಗೆ ಬೀಳದ ಚಪ್ಪಾಳೆ, ಸಂಭ್ರಮ ಅಲ್ಲಿತ್ತು . ಸಮ್ಮೇಳನಾಧ್ಯಕ್ಷ ಡಾ.ಯು.ಆರ್‌.ಅನಂತಮೂರ್ತಿ ಅವರೇ ಪುಳಕಿತರಾಗಿ ಎದ್ದು ನಿಂತರು. ಇಷ್ಟಕ್ಕೂ ಆ ಪುಳಕದ ಕ್ಷಣಗಳಿಗೆ ಕಾರಣವಾದದ್ದು ಸಾಹಿತಿ /ರಾಜಕಾರಣಿಯಲ್ಲ ; ಸಿನಿಮಾ ಕಲಾವಿದೆ. ಅವರು ಪಂಡರೀಬಾಯಿ- ಕನ್ನಡ ಸಿನಿಮಾದ ಅಮ್ಮ!

ಪಂಡರೀಬಾಯಿ ಯಾರಿಗೆ ಗೊತ್ತಿಲ್ಲ . ರಾಜ್‌ಕುಮಾರ್‌ ಅವರ ಸಿನಿಮಾದ ನಾಯಕಿಯಾಗಿದ್ದ ಅವರು ನಂತರದಲ್ಲಿ ರಾಜ್‌ ಅವರಿಗೆ ತಾಯಿಯಾದವರು. ಕನ್ನಡದ ಬಹುತೇಕ ನಾಯಕ ನಟರಿಗೆ ಅಮ್ಮನಾಗಿ ತುತ್ತುಣಿಸಿದ ಪಂಡರೀಬಾಯಿ ಕನ್ನಡ ಸಿನಿಮಾಗಳ ಅಮ್ಮನೆಂದೇ ಪ್ರಸಿದ್ಧರು. ನೋಡುತ್ತಿರುವುದು ಸಿನಿಮಾ ಎನ್ನುವುದು ಅರಿವಿದ್ದರೂ, ಪಂಡರೀಬಾಯಿ ಅವರ ಮಾತೃ ವಾತ್ಯಲ್ಯದ ಅಭಿನಯ ಕಂಡು ಹನಿಗಣ್ಣಾಗದವರು, ಅಮ್ಮನನ್ನು ನೆನೆಯದವರು ಕಡಿಮೆ.

ಅಪಘಾತದಲ್ಲಿ ಕೈ ಕಳಕೊಂಡ ಪಂಡರೀಬಾಯಿ ಹೆಚ್ಚೂ ಕಡಿಮೆ ಬಣ್ಣದ ಬದುಕಿನಿಂದ ದೂರ ಸರಿದಿದ್ದಾರೆ. ಜೀವನ ಚೈತ್ರ ಅವರ ಕೊನೆಯ ದಿನಗಳ ವೈಭವದ ಚಿತ್ರ. ಮಗನ ವೈಭವ ಹಾಗೂ ದುರಂತ ಎರಡಕ್ಕೂ ಸಾಕ್ಷಿಯಾಗಿ ನಿಲ್ಲುವ ಪಾತ್ರದಲ್ಲಿ ಪಂಡರೀಬಾಯಿ ನಟನೆ ಪಾತ್ರಕ್ಕೊಂದು ಮೆರುಗು ತಂದಿತ್ತು . ಅಂಥ ಅಮ್ಮನನ್ನು ಎದುರಿಗೆ ಕಂಡಾಗ ಜನತೆ ಪುಳಕಗೊಳ್ಳದಿದ್ದೀತೆ?

ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಂಡರೀಬಾಯಿ ಅವರನ್ನು ಸನ್ಮಾನಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಜನತೆಯ ಮೆಚ್ಚುಗೆಗೆ ಪಾತ್ರವಾಯಿತು. ಅನಂತಮೂರ್ತಿ ಪಂಡರೀಬಾಯಿ ಅವರ ಕುಶಲವನ್ನು ವಿಚಾರಿಸಿದರು. ಮತ್ತೊಬ್ಬ ಸನ್ಮಾನಿತ ಭದ್ರಗಿರಿ ಅಚ್ಯುತದಾಸ್‌ ಅವರೊಂದಿಗೆ ಪಂಡರೀಬಾಯಿ ಆತ್ಮೀಯ ಮಾತುಕತೆ ನಡೆಸಿದರು. ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಕೃಷಿ ಸಚಿವ ಟಿ.ಬಿ.ಜಯಚಂದ್ರ ಶಾಲು ಹೊದೆಸಿ, ಸ್ಮರಣ ಫಲಕ ಹಾಗೂ ಫಲ ತಾಂಬೂಲ ನೀಡಿದಾಗ ಪಂಡರೀಬಾಯಿ ಅವರ ಕಣ್ಣಂಚು ಒದ್ದೆಯಾಗಿತ್ತು .

ಸಮ್ಮೇಳನದ ಅಂಗವಾಗಿ ವಿವಿಧ ಕ್ಷೇತ್ರಗಳ 24 ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿತು. ಗೌರವಕ್ಕೆ ಪಾತ್ರರಾದವರ ಹೆಸರುಗಳು :

ಡಾ। ವಾಸುದೇವ ಆತ್ರೆ, ಡಾ। ಬಿಸಲಯ್ಯ, ಡಾ। ಎನ್‌. ರುದ್ರಯ್ಯ, ಡಾ। ಚಂದ್ರಶೇಖರ ಶೆಟ್ಟಿ, ಡಾ। ಎಚ್‌.ಆರ್‌. ವಿಶ್ವನಾಥ್‌, ಎಂ.ಎಸ್‌. ನಂಜುಂಡರಾವ್‌, ಜಿ.ಎಸ್‌. ಪರಮಶಿವಯ್ಯ, ಜಿ. ವಿ. ಚನ್ನಬಸಪ್ಪ, ಮೇಜರ್‌ ಸಿ.ಆರ್‌. ರಮೇಶ್‌, ಕೊಗ್ಗ ಕಾಮತ್‌ ಅವರ ಪರವಾಗಿ ಅವರ ಪುತ್ರ, ಡಾ। ಎಚ್‌.ಎನ್‌. ರಾಧಾಕೃಷ್ಣ, ಭದ್ರಗಿರಿ ಅಚ್ಯುತ ದಾಸ್‌, ಎಸ್‌.ವಿ. ಜಯಶೀಲ ರಾವ್‌, ಎಚ್‌.ಆರ್‌. ಕೇಶವ ಮೂರ್ತಿ, ಗೋವಿಂದ ಭಟ್‌, ಎಚ್‌. ಎಸ್‌. ನೀಲಕಂಠಯ್ಯ, ಕೆ.ಎಂ. ರಾಮನ್‌, ನಡ ಕಟ್ಟಿಲ್‌, ಮೈಸೂರು ಮಹಾದೇವಪ್ಪ, ಡಾ. ಸಿ.ಆರ್‌. ಚಂದ್ರಶೇಖರ್‌ ಹಾಗೂ ಸಿದ್ದಣ್ಣ ಮೇಠಿ.

English summary
Tumkur Kannada Sahitya Sammelana : A memorable moment between dry conferences

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada