'ಬುದ್ದಿವಂತ' ಉಪ್ಪಿಗೆ ₹1.65 ಲಕ್ಷ ಮಕ್ಮಲ್ ಟೋಪಿ ಹಾಕಿದ್ದು ಯಾರು..? ಎಲ್ಲಿಯವರು..?
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಇನ್ನೂ ಇದು 5G ಯುಗ. ಈ ಯುಗದಲ್ಲಿ ಸೈಬರ್ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಈ ವರ್ಷದ ಜನವರಿಯಲ್ಲಿಯೇ ಕೇವಲ ಬೆಂಗಳೂರಿನ ಜನ ಈ ಜಾಲಕ್ಕೆ ಸಿಲುಕಿ ₹110.50 ಕೋಟಿ ಹಣ ಕಳೆದುಕೊಂಡಿದ್ದಾರೆ. ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು...
₹1,287 ಕೋಟಿ ರೂ. ಹಣವನ್ನ ವಂಚಕರು ಕೊಳ್ಳೆ ಹೊಡೆದಿದ್ದಾರೆ. ದಿನದ ಲೆಕ್ಕದಲ್ಲಿ ₹4.6 ಕೋಟಿ ಮತ್ತು ಪ್ರತಿ ಗಂಟೆಗೆ 65 ಲಕ್ಷಕ್ಕೂ ಹಣ ಕಬಳಿಸಿದ್ದಾರೆ. ಪತ್ರಿಕೆಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಿದರೂ.. ಎಚ್ಚರ ವಹಿಸುವಂತೆ ಜಾಹೀರಾತು ನೀಡಿದರೂ ಕೂಡ ಹಲವರು ಈ ಖೆಡ್ಡಾಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ಧಾರೆ. ಇನ್ನೂ ಶಾಕಿಂಗ್ ಸಮಾಚಾರ ಅಂದರೆ ವಂಚಕರು ಬೀಸಿದ ಜಾಲದಲ್ಲಿ ಪ್ರಜ್ಞಾವಂತರು.. ವಿದ್ಯಾವಂತರು.. ಬುದ್ದಿವಂತರು ಕೂಡ ಸಿಲುಕಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ಚಾಲಾಕಿ ಹ್ಯಾಕರ್ ಭಾರತೀಯ ಚಿತ್ರರಂಗದ ಬುದ್ದಿವಂತ ನಿರ್ದೇಶಕ ಉಪೇಂದ್ರ ಅವರನ್ನೇ ಯಾಮಾರಿಸಿದ್ದ. ಪಾರ್ಸಲ್ ನೀಡುವ ನೆಪದಲ್ಲಿ ಉಪೇಂದ್ರ ಅವರ ಮುದ್ದಿನ ಮಡದಿ ಪ್ರಿಯಾಂಕ ಅವರ ಫೋನ್ ಹ್ಯಾಕ್ ಮಾಡಿದ್ದ. ಪ್ರಿಯಾಂಕ ಅವರ ಮೊಬೈಲ್‌ದಿಂದ ಹಣ ನೀಡುವಂತೆ ಹಲವರಿಗೆ ಸಂದೇಶವನ್ನು ಕಳುಹಿಸಿದ್ದ.
ಬಂದ ಮೆಸೇಜ್‌ನ ನಂಬಿ ಹಲವರು ಹಣವನ್ನು ಕಳುಹಿಸಿದ್ದರು ಕೂಡ. ಅವರಿವರು ಯಾಕೆ.. ಉಪೇಂದ್ರ ಮತ್ತು ಪ್ರಿಯಾಂಕ ಅವರ ಮುದ್ದಿನ ಮಗ ಆಯುಷ್ ಕೂಡ ಸೈಬರ್ ವಂಚಕ ಕಳುಹಿಸಿದ ಮೆಸೇಜ್‌ನ ಸಲೀಸಾಗಿ ನಂಬಿದ್ದರು. ತಮ್ಮ ತಾಯಿ ಪ್ರಿಯಾಂಕ ಅವರಿಗೆ ಕರೆ ಮಾಡಿ ಏನಾಯ್ತೆಂದು ವಿಚಾರಿಸದೇ ಒಂದೆರಡು ಸಾವಿರ ಅಲ್ಲ ಬರೋಬ್ಬರಿ ₹55,000 ಹಣವನ್ನು ಕೂಡ ಕಳುಹಿಸಿದ್ದರು.
ಆದ ಅನಾಹುತದಿಂದ ಆ ನಂತರ ಎಚ್ಚೆತ್ತಿದ್ದ ಉಪೇಂದ್ರ ಸೈಬರ್ ಕ್ರೈಮ್ ಮೊರೆ ಹೋಗಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವಿಚಾರಗಳು ಬಹಿರಂಗವಾಗಿದ್ದು ಬುದ್ದಿವಂತನಿಗೆ ಮಕ್ಮಲ್ ಟೋಪಿ ಹಾಕಿದ್ದವನು ಬಿಹಾರದವನು ಎಂಬುವುದು ಗೊತ್ತಾಗಿದೆ.
ಹೌದು, ಉಪೇಂದ್ರ ಮತ್ತು ಪ್ರಿಯಾಂಕ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಸದಾಶಿವನಗರದ ಪೊಲೀಸರು, ಸದ್ಯ.. ಪಾರ್ಸಲ್ ನೆಪದಲ್ಲಿ ಮಕ್ಮಲ್ ಟೋಫಿ ಹಾಕಿದ ಗ್ಯಾಂಗ್‌ನ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಇದು ಒಬ್ಬನ ಕೆಲಸವಲ್ಲ ನಾಲ್ಕೈದು ಜನ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ಧಾರೆ.

*121*9279295167# ನಂಬರ್ ಮೂಲಕ ಪ್ರಿಯಾಂಕ ಉಪೇಂದ್ರ ಅವರಿಗೆ ಕರೆ ಮಾಡಿ ಅವರ ಮೊಬೈಲ್ ಹ್ಯಾಕ್ ಮಾಡಿ, ₹1.65 ಹಣವನ್ನು ಈ ಕಿರಾತಕರು ಎಗರಿಸಿದ್ದು ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನಳಂದಾ ಬ್ಯಾಂಕ್‌ನಲ್ಲಿ ಈ ಟ್ರಾನ್ಸೆಕ್ಷನ್ ಮಾಡಿದ್ಧಾರೆ.
ಪ್ರಿಯಾಂಕ ಉಪೇಂದ್ರ ಅವರ ನಂತರ *121*9279295167# ಇದೇ ನಂಬರ್ ಮೂಲಕ ಆಂಧ್ರ ಮತ್ತು ತಮಿಳುನಾಡಿನಲ್ಲಿ ಕೂಡ ಕೆಲವರ ಮೊಬೈಲ್ ಹ್ಯಾಕ್ ಮಾಡುವ ಪ್ರಯತ್ನವನ್ನು ಈ ತಂಡ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಸದ್ಯ ಗೊತ್ತಾಗಿದೆ.
ಸದ್ಯ ಸದಾಶಿವನಗರದ ಪೊಲೀಸರು, ಈ ಹ್ಯಾಕರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ಒಂದು ಸ್ಪೆಷಲ್ ಟೀಂ ಕಳಿಸಲು ಸೆಂಟ್ರಲ್ ಡಿಸಿಪಿ ಅಕ್ಷಯ್ ಮಚೀಂದ್ರ ಮುಂದಾಗಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.
ಇನ್ನುಳಿದಂತೆ ಸೈಬರ್ ವಂಚನೆಗೆ ಒಳಗಾದರೆ ದೂರು ನೀಡಲು ಹಲವು ದಿನಗಳಿಂದ ಸಹಾಯವಾಣಿ 1930 ಆರಂಭಿಸಲಾಗಿದೆ. cybercrime.gov.in ಗೆ ಭೇಟಿ ನೀಡಿ ಅಲ್ಲಿಯೂ ದೂರನ್ನು ಸಲ್ಲಿಸಬಹುದು.


Click it and Unblock the Notifications











