'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನು ನೋಡಿ ಜಗ್ಗೇಶ್ ಪತ್ನಿ ಪರಿಮಳ ಹೇಳಿದ್ದು ಹೀಗೆ.!
ನವರಸ ನಾಯಕ ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಗಿಸುತ್ತಲೇ, ಅಳಿಸುವ ಈ ಸಿನಿಮಾಗೆ ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಇಲ್ಲದೆ.. ಎಲ್ಲರ ಮನ ಸೋಲುತ್ತಿದೆ.
ಮಕ್ಕಳಿಗೆ ಕಬ್ಬಿಣದ ಕಡಲೆ ಆಗಿರುವ ಇಂದಿನ ಶಿಕ್ಷಣ ವ್ಯವಸ್ಥೆ ಕುರಿತು ಹಾಸ್ಯಮಯವಾಗಿ ತೆರೆಗೆ ತಂದಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ಇತ್ತೀಚೆಗಷ್ಟೇ ಜಗ್ಗೇಶ್ ಪತ್ನಿ ಪರಿಮಳ ಕಣ್ತುಂಬಿಕೊಂಡರು. ಸಿನಿಮಾ ನೋಡಿದ ಮೇಲೆ ಪರಿಮಳ ಜಗ್ಗೇಶ್ ಏನಂದರು ಗೊತ್ತೇ.?
''ಜಗ್ಗೇಶ್ ರವರ ಎಲ್ಲಾ ಸಿನಿಮಾಗಳಲ್ಲಿ ನನಗೆ ಮೊದಲ ಫೇವರಿಟ್ 'ಸರ್ವರ್ ಸೋಮಣ್ಣ'. ಎರಡನೇಯದ್ದು 'ಕಾಳಿದಾಸ ಕನ್ನಡ ಮೇಷ್ಟ್ರು'' ಎಂದು ಹೇಳಿದ್ದಾರೆ ಪರಿಮಳ ಜಗ್ಗೇಶ್. ಅಷ್ಟರಮಟ್ಟಿಗೆ ಕಾಳಿದಾಸನ ಕನ್ನಡ ಪಾಠ ಪರಿಮಳ ಜಗ್ಗೇಶ್ ಗೆ ಇಷ್ಟವಾಗಿದೆ.

38 ವರ್ಷಗಳ ಸಿನಿ ಜೀವನದಲ್ಲಿ ನವರಸ ನಾಯಕ ಜಗ್ಗೇಶ್ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಈಗಷ್ಟೇ ಬಿಡುಗಡೆ ಆಗಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಪರಿಮಳ ಜಗ್ಗೇಶ್ ಗೆ ಎರಡನೇ ಫೇವರಿಟ್ ಆಗಿದೆ ಅಂದ್ರೆ ನೀವೇ ಊಹಿಸಿ.. ಈ ಸಿನಿಮಾ ಪರಿಮಳ ಹೃದಯಕ್ಕೆ ಎಷ್ಟು ಹತ್ತಿರವಾಗಿದೆ ಅಂತ.!
'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ನೋಡಿ ಜಯಂತ್ ಕಾಯ್ಕಿಣಿ, ಕವಿತಾ ಲಂಕೇಶ್, ನಿರ್ದೇಶಕ ಸುನಿ ಸೇರಿದಂತೆ ಹಲವರು ಭೇಷ್ ಎಂದಿದ್ದಾರೆ. 'ಮದುವೆಯ ಮಮತೆಯ ಕರೆಯೋಲೆ' ಬಳಿಕ ಚಿತ್ರ ಸಾಹಿತಿ ಕವಿರಾಜ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಈ 'ಕಾಳಿದಾಸ ಕನ್ನಡ ಮೇಷ್ಟ್ರು'
ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದರೆ, ಇಂಗ್ಲೀಷ್ ಭಾಷೆಯನ್ನು ಇಷ್ಟ ಪಡುವ ಪತ್ನಿ ಪಾತ್ರದಲ್ಲಿ ಮೇಘನಾ ನಟಿಸಿದ್ದಾರೆ.


Click it and Unblock the Notifications











