»   » ಹೊಸ ವರ್ಷಕ್ಕೆ ಹೊಸತನದ ‘ಪರ್ವ’

ಹೊಸ ವರ್ಷಕ್ಕೆ ಹೊಸತನದ ‘ಪರ್ವ’

Posted By: Staff
Subscribe to Filmibeat Kannada

* ಸುಭಾಷಿಣಿ

ಕಳೆದ ವಾರ ಪರ್ವ ಟೀಮ್‌ ಫುಲ್‌ ಖುಷಿಯಾಗಿತ್ತು. ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಹಾಡಿನ ದೃಶ್ಯಕ್ಕಾಗಿ ಹಾಕಲಾಗಿದ್ದ ಅದ್ಧೂರಿಯ ಸೆಟ್‌ ನಿರ್ದೇಶಕ ಸುನಿಲ್‌ಕುಮಾರ್‌ ದೇಸಾಯರಿಗೆ ತೃಪ್ತಿ ಕೊಟ್ಟಿತ್ತು. ಅವರು ಹಸನ್ಮುಖರಾಗಿದ್ದರು.

ಈ ಮಧ್ಯೆ ಸೆಟ್‌ನಲ್ಲಿ 100% ಖುಷಿಯಾಗಿದ್ದ ನಾಯಕ ನಟ ವಿಷ್ಣುವರ್ಧನ್‌ 'ದೇಸಾಯಿಗೆ ಖುಷಿ ಆದ್ರೆ ನನಗೂ ಖುಷಿ. ಅವರಿಗೆ ತೃಪ್ತಿ ಆದರೆ, ನನಗೂ ತೃಪ್ತಿ " ಎಂದು ಪತ್ರಕರ್ತರೊಂದಿಗೆ ಹೇಳುತ್ತಿದ್ದುದನ್ನು ಕೇಳಿದ ದೇಸಾಯರು ಮತ್ತಷ್ಟು ಖುಷಿಪಟ್ಟರು.


ಅಬ್ಬಾಯಿನಾಯ್ಡು ಸ್ಟುಡಿಯೋಗೆ ಕಳೆ ಬಂದಿತ್ತು. ಅಲ್ಲೊಂದು ಇಂದ್ರನ ಅಮರಾವತಿಯನ್ನೂ ನಾಚಿಸುವಂಥ ಸಭಾಂಗಣದ ಸೆಟ್‌. ಕಣ್ಣು ಕೋರೈಸುವಂತೆ ಪ್ರಜ್ವಲಿಸುತ್ತಿದ್ದ ವಿದ್ಯುತ್‌ ದೀಪಗಳು, 500 ಮೀರಿದ ನೃತ್ಯಪಟುಗಳ ದಂಡು. ಭವ್ಯ ಸೆಟ್ಟಿನ ವೇದಿಕೆಯ ಮೇಲೆ ವಿಷ್ಣುವರ್ಧನ್‌, ಭಾವನಾ ಅವರ ಜೊತೆ 40 ಸಹಕಲಾವಿದರು ತಾಳಕ್ಕೆ ಹೆಜ್ಜೆ ಹಾಕಲು ಸಜ್ಜಾಗಿದ್ದರು.

'ಡೋಲು ಡೋಲು ಡಂಗುರ ಸರಿಗಮದಿಂಚರ... " ಎಂಬ ಹಾಡಿಗೆ ಚಿತ್ರೀಕರಣ ಸಾಗಿತ್ತು. ಹೆಚ್ಚೂ ಕಡಿಮೆ 5-6ದಿನ ಇಲ್ಲಿನ ಭವ್ಯ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅಂದಹಾಗೆ, ಈ ಚಿತ್ರದಲ್ಲಿ 14 ನಿಮಿಷಗಳ ಸುದೀರ್ಘವಾದ ಹಾಡೊಂದಿದೆ ಎಂದರು ದೇಸಾಯಿ.

ಮಿಗಿಲಾಗಿ ಪರ್ವ ಪ್ರೇಮ ಕಥಾನಕವಲ್ಲ. ಇದೊಂದು ಕಲಾಚಿತ್ರ. ಕಲಾವಿದರ ಬದುಕು ಬವಣೆಯನ್ನು ಬಿಂಬಿಸುವ ಸುಂದರ ಚಿತ್ರ. ಕಲಾವಿದನೊಬ್ಬನ ಜೀವನ, ನೋವು, ನಲಿವು, ಶ್ರೀಮಂತಿಕೆ, ಅವನ ಅಳಿವು - ಉಳಿವಿನ ಪರ್ವವೇ ಈ ಪರ್ವ ಎಂಬುದು ಸುನಿಲ್‌ ಕುಮಾರ್‌ ದೇಸಾಯಿ ತಮ್ಮ ಚಿತ್ರದ ಕಥೆಯ ಬಗ್ಗೆ ವಿವರಣೆ ಕೊಟ್ಟರು.

ಪರ್ವ ಸಾಮಾನ್ಯ ಚಿತ್ರ ಅಲ್ಲ. ಮಹಾಭಾರತದ ಪರ್ವದಂತೆಯೇ ದೊಡ್ಡ ಚಿತ್ರ. ದೊಡ್ಡ ಬಜೆಟ್‌ ಚಿತ್ರ. ಒಟ್ಟಾರೆ ಅದ್ಧೂರಿ ಚಿತ್ರ. ಇದಕ್ಕೆ ದೇಸಾಯಿ ಸಮಜಾಯಿಷಿ ಕೊಟ್ಟಿದ್ದು ಹೀಗೆ. ನನಗೆ ನಿರ್ಮಾಪಕರಿಗೆ ಬರ್ಡನ್‌ ಮಾಡೋ ಆಸೆ ಏನೂ ಇಲ್ಲ. ಈ ಚಿತ್ರದ ಕಥೆಯೇ ಹಾಗಿದೆ. ಯಾವ ಸನ್ನಿವೇಶವನ್ನೂ ಕಾಟಾಚಾರಕ್ಕೆ ಅಥವಾ ನಾಮಕಾವಸ್ಥೆಗೆ ಚಿತ್ರೀಕರಿಸುವಂತಿಲ್ಲ. ಇದಲ್ಲಿರುವ ಪ್ರತಿಯಾಂದು ಮಾತೂ, ಕಥೆ, ಹಾಡೂ ಎಲ್ಲಕ್ಕೂ ಮಹತ್ವ ಇದೆ.

ಚಿತ್ರದಲ್ಲಿ ಎಲ್ಲ ನಟ-ನಟಿಯರೂ ಸಮರ್ಥವಾಗಿ ಅಭಿನಯಿಸಿದ್ದಾರೆ. ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ. ಪರ್ವದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದ ದೇಸಾಯಿ ವಿಷ್ಣುವರ್ಧನ್‌ ಅಭಿನಯದ ಬಗ್ಗೆ ಹಿರಿಹಿರಿ ಹಿಗ್ಗಿಹೋಗಿದ್ದರು.

ಈ ಚಿತ್ರದಲ್ಲಿ ವಿಷ್ಣು ನಾನು ನಿರೀಕ್ಷಿಸಿದ್ದಕ್ಕಿಂತಲೂ ಮಿಗಿಲಾಗಿ, ಪಾತ್ರದಲ್ಲಿ ಸಂಪೂರ್ಣ ಲೀನವಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ನಾಯಕನ ಪಾತ್ರ ಹೇಗಿರಬೇಕು ಎಂದು ನನ್ನ ಕಲ್ಪನೆ ಇತ್ತೋ ಅದಕ್ಕಿಂತಲೂ ಹೆಚ್ಚಾಗಿ ವಿಷ್ಣು ಅಭಿನಯಿಸಿದ್ದಾರೆ, ಆ ಪಾತ್ರಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎನ್ನುವಾಗ ದೇಸಾಯಿ ಕಣ್ಣುಗಳಲ್ಲಿ ಸಂತೃಪ್ತಿಯ ಮಿಂಚು ಹೊಮ್ಮಿತ್ತು.

ಹಂಸಲೇಖರ ಅನಾರೋಗ್ಯದ ಕಾರಣ ಚಿತ್ರದ ಚಿತ್ರೀಕರಣಕ್ಕೆ ಕೊಂಚ ಹಿನ್ನಡೆ ಉಂಟಾಗಿದೆ. ಆದರೆ, ಒಟ್ಟಾರೇ ಚಿತ್ರದ ಪ್ರತಿಶತ 70ರಿಂದ 80ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ಕೇವಲ 20 ದಿನದ ಕೆಲಸ ಇದೆ. ಕ್ಲೈಮ್ಯಾಕ್ಸ್‌ ಸಾಂಗ್‌ ಕಂಪೋಸ್‌ ಆದರೆ, ಬಹುತೇಕ ಚಿತ್ರ ಮುಗಿದಂತೆಯೇ ಎನ್ನುವ ದೇಸಾಯರು ಹೊಸವರ್ಷದ ಕೊಡುಗೆಯಾಗಿ ಪರ್ವವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ.

ಈ ಚಿತ್ರದ ನಾಯಕಿ ಪ್ರೇಮ. ಭಾವನಾ ಬರಿ ಗೆಸ್ಟ್‌ ಅಪಿಯರೆನ್ಸ್‌ ಕೊಡುತ್ತಿದ್ದಾರೆ. ವೈಭವದ ಸೆಟ್‌ನಲ್ಲಿ ಸುಂದರವಾಗಿ ಭಾವನಾ ನರ್ತಿಸಿದ್ದಾರೆ. ಶ್ರೀನಿವಾಸ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಎಚ್‌.ಸಿ. ಶ್ರೀನಿವಾಸ್‌ ನಿರ್ಮಿಸುತ್ತಿರುವ ಪರ್ವವನ್ನು ಸುನಿಲ್‌ ಕುಮಾರ್‌ ದೇಸಾಯಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

ತಾರಾಬಳಗದಲ್ಲಿ ವಿಷ್ಣುವರ್ಧನ್‌, ಪ್ರೇಮಾ, ರೋಜಾ, ಅಪರ್ಣಾ, ವೈದ್ಯನಾಥನ್‌, ಕೃತ್ತಿಕಾ, ಕೆರೆಮನೆ ಶಂಭು ಹೆಗಡೆ, ರೇಖಾ, ರಾಧಾರವಿ, ರಮೇಶ್‌ ಭಟ್‌, ಸಲಾವುದ್ದೀನ್‌, ಕಾಶಿ, ನವೀನ್‌, ಮಯೂರ್‌ ಮೊದಲಾದವರಿದ್ದಾರೆ.

English summary
Rich set for Parva in Abbainaidu studio

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada