ಪಾರ್ವತಮ್ಮ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜದ ಗೌರವ: ಶಿವಣ್ಣ ಹೇಳಿದ್ದೇನು?
ಡಾ.ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಧ್ವಜ ಬಳಸಿದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಈ ಮಧ್ಯೆ ವಕೀಲರೊಬ್ಬರು ಈ ಕ್ರಮವನ್ನ ಖಂಡಿಸಿ ನ್ಯಾಯಾಲಯದಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ನಂತರ ಕರ್ನಾಟಕ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತು. ಹೀಗಾಗಿ, ಸರ್ಕಾರಿ ಗೌರವದ ಅನ್ವಯ, ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನ ಹೊದಿಸಲಾಗಿತ್ತು. ಜೊತೆಗೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತಿನ ಕುಶಾಲುತೋಪು ಕೂಡ ಹಾರಿಸಲಾಗಿತ್ತು.
ಆದ್ರೆ, ಪಾರ್ವತಮ್ಮ ಅವರಿಗೆ ಸರ್ಕಾರಿ ಗೌರವ ಕೊಟ್ಟಿದ್ದು ಸರಿನಾ ಎನ್ನುವ ಚರ್ಚೆ ಹುಟ್ಟಿಕೊಂಡಿತ್ತು. ಈ ಬಗ್ಗೆ ನಟ ಶಿವರಾಜ್ ಕುಮಾರ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ವಿಷ್ಯದ ಬಗ್ಗೆ ಶಿವಣ್ಣ ಏನಂದ್ರು? ಮುಂದೆ ಓದಿ....

ಸರ್ಕಾರದ ನಿರ್ಧಾರ
''ಪಾರ್ವತಮ್ಮ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜದ ಗೌರವವನ್ನ ನಾವ್ಯಾರೂ ಕೇಳಿರಲಿಲ್ಲ. ಆದರೂ ಸರ್ಕಾರ ಮಾಡಿದೆ. ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಅಂತ್ಯಕ್ರಿಯೆ ಮುಗಿದ ಮೇಲೆ ಈಗ ಚರ್ಚೆ ಸರಿಯಲ್ಲ. ಅಂತ್ಯಕ್ರಿಯೆ ಮುಗಿದ ಮೇಲೆ ವಿವಾದ ಬೇಡ. ''- ಶಿವಣ್ಣ

ಅಮ್ಮನ ಆಸೆ ಆಗಿತ್ತು
''ಡಾ.ರಾಜ್ ಕುಮಾರ್ ಸಮಾಧಿ ಪಕ್ಕವೇ ನನ್ನ ಸಮಾಧಿಯಾಗಬೇಕು ಎನ್ನುವುದು ಅಮ್ಮನ ಆಸೆಯಾಗಿತ್ತು. ಹೀಗಾಗಿ ಅಮ್ಮನ ಆಸೆ ಈಡೇರಿಸುವ ಸಲುವಾಗಿ ನಾವು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲು ಸರ್ಕಾರವನ್ನು ಕೇಳಿಕೊಂಡೆವು. ಸರ್ಕಾರ ನೀಡಿದೆ. ಒಂದು ವೇಳೆ ಸರ್ಕಾರ ಜಾಗ ಕೊಡದಿದ್ದರೆ, ಬೇರೆ ಜಾಗದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದೆವು.''- ಶಿವರಾಜ್ ಕುಮಾರ್, ನಟ

ಸರ್ಕಾರಿ ಗೌರವಕ್ಕೆ ಅಮ್ಮ ಅರ್ಹರಾಗಿದ್ದರು
ನಮ್ಮ ಅಮ್ಮ ಸರ್ಕಾರ ಗೌರವಕ್ಕೆ ಅರ್ಹರಾಗಿದ್ದರು, ಅಮ್ಮ ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಆಪತ್ಕಾಲದಲ್ಲಿ ಸ್ಯಾಂಡಲ್ ವುಡ್ ಪರವಾಗಿ ಹೋರಾಟ ನಡೆಸಿದ್ದರು. ಒಬ್ಬ ಮಹಿಳೆಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾಳೆ. ಆದ್ದರಿಂದ ಅಮ್ಮ ಸರ್ಕಾರಿ ಗೌರವಕ್ಕೆ ಅರ್ಹರು ಎಂದು ಶಿವಣ್ಣ ಹೇಳಿದ್ದಾರೆ.

ದೂರು ದಾಖಲಾಗಿದೆ
ಪಾರ್ವತಮ್ಮ ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಧ್ವಜ ಬಳಸಿದನ್ನ ಖಂಡಿಸಿ, ವಿಜಯನಗರದ ವಕೀಲರೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ನಗರದ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಈ ಸಂಬಂಧ ಖಾಸಗಿ ದೂರು ದಾಖಲಿಸಿದ್ದರು.


Click it and Unblock the Notifications











