ಪಾರ್ವತಮ್ಮ ರಾಜ್ ಕುಮಾರ್ ನಿಧನ: ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನ
ವರನಟ ಡಾ.ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ (78) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪಾರ್ವತಮ್ಮ ರಾಜ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಸದಾಶಿವನಗರದ ರಾಘವೇಂದ್ರ ರಾಜ್ ಕುಮಾರ್ ಅವರ ನಿವಾಸಕ್ಕೆ ತರಲಾಗಿದೆ. ಅಲ್ಲೇ, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸದಾಶಿವನಗರದ ರಾಜ್ ನಿವಾಸದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪಾರ್ವತಮ್ಮ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಿರಿಯ ನಟ ಅಂಬರೀಶ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಟ ವಿಜಯ್ ರಾಘವೇಂದ್ರ ಸೇರಿದಂತೆ ಹಲವು ನಟ-ನಟಿಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.

''ಕಂಠೀರವ ಸ್ಟುಡಿಯೋದಲ್ಲಿ ಇರುವ ಡಾ.ರಾಜ್ ಸಮಾಧಿ ಬಳಿಯೇ ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರ ನಡೆಸಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು'' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿಕೆ ನೀಡಿದ್ದಾರೆ.
ಸಂಜೆ ಆರು ಗಂಟೆ ನಂತರ ಅಂತಿಮ ಸಂಸ್ಕಾರ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.


Click it and Unblock the Notifications











