»   » ಸಿಓಡಿ ಎದುರು ಪೊಲೀಸ್‌ ಪಾಟೀಲ್‌ : ಸರ್ಕಾರಿ ಹುದ್ದೆಗೆ ಸಲಾಂ?

ಸಿಓಡಿ ಎದುರು ಪೊಲೀಸ್‌ ಪಾಟೀಲ್‌ : ಸರ್ಕಾರಿ ಹುದ್ದೆಗೆ ಸಲಾಂ?

Posted By: Staff
Subscribe to Filmibeat Kannada

ಬೆಂಗಳೂರು : ಸರ್ಕಾರಿ ಅಧಿಕಾರಿಗಳು ಕಮರ್ಷಿಯಲ್‌ ಸಿನಿಮಾದಲ್ಲಿ ನಟಿಸಲು ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆಯಲು ಉದ್ದೇಶಿಸಿರುವ ಬಿ.ಸಿ. ಪಾಟೀಲ್‌ ಮಂಗಳವಾರ ಸಿಓಡಿ ಅಧಿಕಾರಿಗಳ ಎದುರು ಹಾಜರಾಗಿದ್ದರು.

ಈ ಮೊದಲು, ನಟ - ನಿರ್ಮಾಪಕ ಬಿ.ಸಿ. ಪಾಟೀಲ್‌ ಅವರಿಗೆ ಸಿಓಡಿ ಎದುರು ಹಾಜರಾಗುವಂತೆ ಸಿಓಡಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಈ ಸಂಬಂಧ ಪಾಟೀಲರು ಮಂಗಳವಾರ ಸಿಓಡಿಯ ಎಸ್ಪಿ ರವೀಂದ್ರ ಪ್ರಸಾದ್‌ ಎದುರು ಹಾಜರಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಆದರೆ, ಸಿಓಡಿ ಅಧಿಕಾರಿಯಾಂದಿಗಿನ ಭೇಟಿಯ ಸಂದರ್ಭದಲ್ಲಿ ಯಾವ ವಿಷಯ ಚರ್ಚೆಯಾಯಿತು ಎನ್ನುವುದು ತಿಳಿದು ಬಂದಿಲ್ಲ . ಸಿಓಡಿ ಮುಖ್ಯಸ್ಥ ಭಾಸ್ಕರ್‌ ಅವರು ರಜೆಯಲ್ಲಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಗುಟ್ಟಾಗಿಡಲಾಗಿದೆ.

ಆಕಾಶ್‌ ಆಡಿಯೋದ ಸ್ಟುಡಿಯೋದಲ್ಲಿ ತಮ್ಮ ಹೊಸ ಚಿತ್ರ ಲಂಕೇಶ್‌ನ ರೀ ರೆಕಾರ್ಡಿಂಗ್‌ನಲ್ಲಿ ತಲ್ಲೀನವಾಗಿರುವ ಪಾಟೀಲರನ್ನು ಸಂಪರ್ಕಿಸಲು ಪ್ರಯತ್ನಿಸಿರುವ ಇಂಡಿಯಾ ಇನ್ಪೋದ ವರದಿಗಾರರ ಯತ್ನಗಳು ಯಶಸ್ವಿಯಾಗಿಲ್ಲ .

ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಜಿಲ್ಲಾಧಿಕಾರಿಗಳ, ಇಲಾಖಾ ಕಾರ್ಯದರ್ಶಿಗಳ ಹಾಗೂ ವಿಭಾಗಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಭಟ್ಟಾಚಾರ್ಯ ಅವರು, ಸರಕಾರಿ ಅಧಿಕಾರಿಗಳು ಇನ್ನು ಮುಂದೆ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ಬಿ.ಸಿ. ಪಾಟೀಲರು ಸರಕಾರದ ಈ ನೀತಿಯನ್ನು ಕಟುವಾಗಿ ಟೀಕಿಸಿದ್ದಷ್ಟೇ ಅಲ್ಲದೆ ತಾವು ಕಲಾ ಸೇವೆಗಾಗಿ ಪೊಲೀಸ್‌ ನೌಕರಿ ಬಿಡಲೂ ಸಿದ್ಧ ಎಂದೂ ಹೇಳಿದ್ದರು. ಸದ್ಯ ಕಾರವಾರದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿರುವ ಪಾಟೀಲ್‌, ಸರಕಾರ ಈ ನಿರ್ಧಾರ ತಳೆದ ಬಳಿಕ ಅಂದರೆ ಡಿಸೆಂಬರ್‌ 22ರಂದು ಕಾರವಾರ ಪೊಲೀಸ್‌ ಅಧೀಕ್ಷಕರ ಮೂಲಕ ಪತ್ರ ಕಳುಹಿಸಿದ್ದು, ಮುಂದಿನ ವರ್ಷ ಮಾರ್ಚ್‌ 31ರಿಂದ ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡಿ ಎಂದೂ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಪಾಟೀಲರು ಸ್ವಯಂ ನಿವೃತ್ತಿಗಾಗಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ನೋಟಿಸ್‌ ಜಾರಿಮಾಡಲಾಗಿದೆ ಎಂದು ತಿಳಿದುಬಂದಿದೆ. ನಿಷ್ಕರ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪಾಟೀಲ್‌, ಕೌರವ, ಪ್ರೇಮಾಚಾರಿ, ಕೃಷ್ಣಾರ್ಜುನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಲಂಕೇಶ, ಶಾಪ ಇನ್ನೂ ಬಿಡುಗಡೆ ಆಗಬೇಕಿದೆ.

ವಿಶ್ವಸನೀಯ ಮೂಲಗಳ ವರದಿ ರೀತ್ಯ ಕಳೆದ 21 ವರ್ಷದಿಂದ ಪೊಲೀಸ್‌ ಇಲಾಖೆಯಲ್ಲಿ ದುಡಿಯುತ್ತಿರುವ ಪಾಟೀಲ್‌ ಚಲನಚಿತ್ರದಲ್ಲಿ ಅಭಿನಯಿಸಲು ಆರಂಭಿಸಿದ ದಿನದಿಂದ ಸಂಬಳವನ್ನು ಪಡೆದಿಲ್ಲವಂತೆ. ಈ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. (ಇನ್ಪೊ ವಾರ್ತೆ)

English summary
nexus between acting and govt. job put b.c. patil in a fix
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada